ಶಿರಹಟ್ಟಿ: ಜನಸಾಮಾನ್ಯರಿಗೆ ನೀಡುವ ಗೌರವ ಪೌರಕಾರ್ಮಿಕರಿಗೂ ನೀಡಬೇಕು. ಪೌರಕಾರ್ಮಿಕರು ನಮ್ಮಂತೆ ಮನುಷ್ಯರೆ. ಗಾಳಿ, ಮಳೆ, ಚಳಿ, ಬಿಸಿಲು ಎನ್ನದೇ ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತೆಗೆ ಟೊಂಕ ಕಟ್ಟಿ ನಿಲ್ಲುವ ಇವರ ಕಾರ್ಯ ಅತ್ಯಮೂಲ್ಯ. ಪೌರಕಾರ್ಮಿಕರು ನೈಜ ಕಾಯಕಯೋಗಿಗಳು. ಸ್ವಚ್ಛತಾ ರೂವಾರಿಗಳು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸವಿತಾ ತಾಂಭ್ರೆ ತಿಳಿಸಿದರು.ಕರ್ನಾಟಕ ರಾಜ್ಯ ಪೌರ ನೌಕರರ ಕೇಂದ್ರ ಕಚೇರಿ ಚಿತ್ರದುರ್ಗ, ಜಿಲ್ಲಾ ಸಂಘ ಗದಗ, ಶಿರಹಟ್ಟಿ ಪಟ್ಟಣದ ಪಂಚಾಯಿತಿ ಶಾಖೆ ವತಿಯಿಂದ ಮಂಗಳವಾರ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಮಾತನಾಡಿದರು. ಪೌರಕಾರ್ಮಿಕರು ಕೆಲಸದ ವೇಳೆ ಸುರಕ್ಷತಾ ಪರಿಕರಗಳನ್ನು ಧರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸೂಚಿಸಿದರು.ಪೌರಕಾರ್ಮಿಕರು ಸ್ಥಳೀಯ ಸಂಸ್ಥೆಗಳ ಆಧಾರಸ್ತಂಭ ಮತ್ತು ಭೂಸೇನಾ ಸೈನಿಕರಿದ್ದಂತೆ. ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಆರೋಗ್ಯ ಬದಿಗೊತ್ತಿ ಸ್ವಚ್ಛತಾ ಕಾರ್ಯ ಮಾಡುತ್ತಾರೆ. ನಿಮ್ಮ ಆರೋಗ್ಯ ಕಾಪಾಡುವ ಜವಾಬ್ದಾರಿ ಸ್ಥಳೀಯ ಆಡಳಿತ ಮತ್ತು ಸರ್ಕಾರಕ್ಕಿರುತ್ತದೆ ಎಂದರು. ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ ಮಾತನಾಡಿ, ಬಹುತೇಕ ದಿನಗೂಲಿ ಪೌರಕಾರ್ಮಿಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಪಟ್ಟಣವನ್ನು ಸುಂದರ ಹಾಗೂ ಸ್ವಚ್ಛವಾಗಿ ಕಾಣುವಂತೆ ಮಾಡುವ ಈ ನೌಕರರು ತಾವು ಕೂಡ ಆರೋಗ್ಯವಂತರಾಗಿರಬೇಕು. ಸರ್ಕಾರದಿಂದ ಪೌರಕಾರ್ಮಿಕರಿಗಾಗಿ ಎಲ್ಲ ಹಂತದ ಸೌಲಭ್ಯಗಳು ದೊರೆಯುವ ನಿಟ್ಟಿನಲ್ಲಿ ನಾವು ಕೂಡ ಶ್ರಮಿಸುವುದಾಗಿ ತಿಳಿಸಿದರು. ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಸದಸ್ಯರಾದ ಫಕ್ಕೀರೇಶ ರಟ್ಟಿಹಳ್ಳಿ, ಅನಿತಾ ಬಾರಬರ, ದೇವಪ್ಪ ಆಡೂರ, ಸೋಮನಗೌಡ ಮರಿಗೌಡ್ರ, ಸಂಘದ ಮಾಜಿ ಅಧ್ಯಕ್ಷ ಸಿದ್ದಪ್ಪ ಅಮರಾಪೂರ, ಗುರುನಾಥ ಪಾತಾಳೆ, ಐ.ಪಿ. ಜಾಲಿಕಟ್ಟಿ, ನಾಗೇಶ ಕುಲಕರ್ಣಿ ಸೇರಿ ಪಪಂ ಸದಸ್ಯರು ಇದ್ದರು.