ನೆಲಮಂಗಲ: ಆರೋಗ್ಯ ಸೇವೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳೂ ಸಾಕಷ್ಟು ಕೊಡುಗೆ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಆರೋಗ್ಯ ಖಾತೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದ ಪರಮಣ್ಣ ಬಡಾವಣೆಯಲ್ಲಿ ವಿಸಿಎನ್‌ಆರ್ ಗ್ರೂಪ್ಸ್ ನೂತನವಾಗಿ ನಿರ್ಮಿಸಿರುವ ವಿಸಿಎನ್ಆರ್ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ, ಆವಿಷ್ಕಾರಗಳು ನಡೆದಿವೆ. ತಂತ್ರಜ್ಞಾನವನ್ನು ಅಳವಡಿಸಿಕೊಂಡು ಜನರಿಗೆ ಆರೋಗ್ಯ ಕಾಪಾಡಲು ಮುಂದಾಗುತ್ತಿವೆ. ಆದರೆ ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿ ಹಾಗೂ ವಿವಿಧ ವ್ಯಸನಗಳಿಂದ ಅಧಿಕ ರಕ್ತದೊತ್ತಡ, ಮಧುಮೇಹದಂತಹ ಆರೋಗ್ಯ ಸಮಸ್ಯೆಗಳನ್ನು ದಿನೇ ದಿನೇ ಉಲ್ಭಣಗೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆ. ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ದುಶ್ಚಟಗಳಿಂದ ದೂರವಿರಬೇಕು. ಆರೋಗ್ಯ ರಕ್ಷಣೆಗೆ ಅಗತ್ಯ ಸಲಹೆ ಸೂಚನೆಗಳನ್ನು ಪಾಲಿಸಬೇಕು ಎಂದು ಹೇಳಿದರು.ವಿಸಿಎನ್ಆರ್ ಸಂಸ್ಥೆಯ ಕಾರ್ಯಕ್ಕೆ ಶ್ಲಾಘನೆ:
ಖಾಸಗಿ ಆಸ್ಪತ್ರೆಯನ್ನು ಆರಂಭಿಸಿ ಲಾಭನಷ್ಟ ಲೆಕ್ಕಚಾರ ಹಾಕುವವರ ನಡುವೆ ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ವಿಸಿಎನ್ಆರ್ ಗ್ರೂಪ್ಸ್ ನಿಂದ 100 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಾಣ ಮಾಡಿರುವುದು ಸಂತೋಷಕರ ಸಂಗತಿ. ಈ ಭಾಗದ ಬಹುತೇಕ ಮಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಬೃಹತ್ ಆಸ್ಪತ್ರೆಯನ್ನು ನಿರ್ಮಿಸಿದ್ದು ಜನರು ಸದುಪಯೋಗ ಪಡಿಸಿಕೊಳ್ಳಬೇಕು. ವಿಸಿಎನ್ಆರ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು ಎಂದದಾ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ತಾಲೂಕಿನ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅತ್ಯಂತ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಿರುವ ವಿಸಿಎನ್ಆರ್ ಸಂಸ್ಥೆ ಕಾರ್ಯ ಮಹತ್ವವಾದದು. ಆಧುನಿಕತೆ ಮುಂದುವರಿದಷ್ಟು, ಜನಸಾಮಾನ್ಯರಲ್ಲಿ ಕಾಯಿಲೆಗಳು ಉಲ್ಬಣಗೊಳ್ಳುತ್ತಿರುವುದು ಗಮನಾರ್ಹ ಅಂಶ. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯದತ್ತ ಗಮನಹರಿಸಬೇಕು. ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಅನಿವಾರ್ಯ. ಯಾರೂ ಆರೋಗ್ಯವನ್ನು ಸಣ್ಣ ಕಾಯಿಲೆ ಬಂದರೂ ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಸಿಎನ್ಆರ್ ಆಸ್ಪತ್ರೆ ಸಂಸ್ಥಾಪಕ ವಿ.ರಾಮಸ್ವಾಮಿ, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಜಿ.ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮನಾಭ್ ಪ್ರಸಾದ, ಮಾಜಿ ಅಧ್ಯಕ್ಷೆ ಪೂರ್ಣಿಮಾಸುಗ್ಗರಾಜು, ಲತಾಹೇಮಂತಕುಮಾರ್, ಸದಸ್ಯ ಸಿ.ಪ್ರದೀಪ್, ಆಂಜನಮೂರ್ತಿ, ಶಿವಕುಮಾರ್, ಸುಧಾಕೃಷ್ಣಪ್ಪ, ಲೋಲಾಕ್ಷಿಗಂಗಾಧರ್, ಸುಜಾತಮುನಿಯಪ್ಪ, ಶಾರದಾಉಮೇಶ್, ರಾಜಮ್ಮಪಿಳ್ಳಪ್ಪ, ಮುಖಂಡ ಎಂ.ಕೆ.ನಾಗರಾಜು, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಪೊಟೊ-17 ಕೆ ಎನ್ ಎಲ್ ಎಮ್ 1-ನೆಲಮಂಗಲದಲ್ಲಿ ವಿಸಿಎನ್ಆರ್ ಗ್ರೂಪ್ಸ್‌ನ ವಿಸಿಎನ್ಆರ್ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜನ್ನು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಶಾಸಕ ಶ್ರೀನಿವಾಸ್, ವಿಸಿಎನ್ಆರ್ ಆಸ್ಪತ್ರೆ ಸಂಸ್ಥಾಪಕ ವಿ.ರಾಮಸ್ವಾಮಿ, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾರಾಯಣಗೌಡ, ನಗರಸಭೆ ಅಧ್ಯಕ್ಷ ಗಣೇಶ್ ಇತರರಿದ್ದರು.