ಕನ್ನಡಪ್ರಭ ವಾರ್ತೆ ಕುಶಾಲನಗರ
ಹಾರಂಗಿ ಜಲಾಶಯ ತುಂಬಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿತ್ತು. ಕಳೆದ ವರ್ಷ ಇದೇ ದಿನ ನದಿಗೆ 5000 ಕ್ಯೂಸೆಕ್ಸ್ ಪ್ರಮಾಣದ ನೀರು ಹರಿಸಲಾಗಿತ್ತು. ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಮೂಲಕ ಇದೇ ಪ್ರಮಾಣದ ನೀರಿನ ಒಳಹರಿವು ಕೂಡ ಕಂಡುಬಂದಿತ್ತು. ಇದೀಗ ಮೂಲ ಕಾವೇರಿ ಒಡಲಲ್ಲಿ ಬರದ ಛಾಯೆ ಎದುರಾಗುತ್ತಿದೆ.
ಅಂಕಿ ಅಂಶಗಳ ಪ್ರಕಾರ ಗುರುವಾರ ಸಂಜೆ ವೇಳೆಗೆ ಹಾರಂಗಿ ಜಲಾಶಯಕ್ಕೆ ಕೇವಲ 380 ಕ್ಯೂಸೆಕ್ಸ್ ಪ್ರಮಾಣದ ನೀರಿನ ಒಳಹರಿವು ಗೋಚರಿಸಿದೆ.ಹಾರಂಗಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ 24 ಅಡಿಗಳಷ್ಟು ನೀರಿನ ಮಟ್ಟ ಇಳಿಕೆ ಕಾಣಬಹುದು. 2859 ಅಡಿಗಳಷ್ಟು ಗರಿಷ್ಠ ನೀರಿನ ಮಟ್ಟ ಹೊಂದಿರುವ ಅಣೆಕಟ್ಟಿನಲ್ಲಿ ಈ ಬಾರಿ 2825.97 ಅಡಿಗಳಷ್ಟು ನೀರಿನ ಮಟ್ಟ ಕಂಡುಬಂದಿದೆ.
ಕುಶಾಲನಗರ ಮೂಲಕ ಹರಿಯುವ ಕಾವೇರಿ ನದಿಯಲ್ಲಿ ಕಳೆದ ವರ್ಷ ಕಾವೇರಿ ಸೇತುವೆಯ ಕೆಳ ಭಾಗದಲ್ಲಿ 7 ಮೀಟರ್ ಎತ್ತರಕ್ಕೆ ಅಪಾಯದ ಮಟ್ಟ ಮೀರಿ ನೀರಿನ ಹರಿವು ನಿರಂತರವಾಗಿ ಕಂಡುಬಂದಿತ್ತು.
ಕಾವೇರಿ ನದಿ ಪ್ರದೇಶದ ಜನರಿಗೆ ಕೃಷಿ ಚಟುವಟಿಕೆಗಳಿಗೆ ಕೂಡ ಈ ಬಾರಿ ಸಂಕಷ್ಟ ಎದುರಾಗಿದೆ. ಕೃಷಿ ಭೂಮಿಗಳಿಗೆ ಸ್ಪ್ರಿಂಕ್ಲರ್ ಬಳಸಿ ನೀರು ಹಾಯಿಸುತ್ತಿರುವ ದೃಶ್ಯ ಕಾಣಬಹುದು. ಬೆಂಗಳೂರು ಸೇರಿದಂತೆ ಪ್ರಮುಖ ಪಟ್ಟಣಗಳಿಗೆ ಕಾವೇರಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾದ್ಯತೆ ಅಧಿಕವಾಗಿದೆ.