
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಲೋಪದೋಷಗಳ ಕುರಿತು ಕಾಂಗ್ರೆಸ್ ಪಕ್ಷ ಕೇಂದ್ರ ಚುನಾವಣಾ ಆಯೋಗಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದರೂ ಸಮರ್ಪಕ ಉತ್ತರ ದೊರೆತಿಲ್ಲ. ಆದರೆ ಬಿಜೆಪಿ ನಾಯಕರು ಚುನಾವಣಾ ಆಯುಕ್ತರನ್ನು ಸಮರ್ಥಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ಇದರಿಂದ ಆಯೋಗದ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿದೆ ಎಂದರು.
ಎಸ್‌ಐಆರ್ ಪ್ರಕ್ರಿಯೆ ಬಳಿಕ ಸುಮಾರು 99 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ರಾಜ್ಯದ ವಿವಿಧೆಡೆ ಬಿಜೆಪಿ ನಾಯಕರ ಸೂಚನೆಯಂತೆ ಬಿಎಲ್‌ಎ-2ಗಳ ಮೂಲಕ ಫಾರಂ ನಂ.7 ಬಳಸಿ ಕಾಂಗ್ರೆಸ್ ಬೆಂಬಲಿತ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನ ನಡೆದಿದೆ ಎಂಬ ಆರೋಪಗಳಿವೆ. ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರನ್ನು ಮರು ಸೇರ್ಪಡೆಗೊಳಿಸಲು ಚುನಾವಣಾ ಆಯೋಗ ತಕ್ಷಣ ಹೆಲ್ಪ್‌ಡೆಸ್ಕ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸುವ ಕರ್ನಾಟಕ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಕಾಯ್ದೆ-2022ಕ್ಕೆ ನ್ಯಾಯಾಲಯದ ತಡೆಯಿರುವ ಹಿನ್ನೆಲೆಯಲ್ಲಿ, ತಮಿಳುನಾಡು ಮಾದರಿಯಲ್ಲಿ ಶೇ.50ರ ಮಿತಿಯನ್ನು ಹೆಚ್ಚಿಸಿ ಮೀಸಲಾತಿಯನ್ನು ಸಂವಿಧಾನದ ಒಂಬತ್ತನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಹೇಶ್ವರಪ್ಪ ಹಾಗೂ ಗಂಗಾಧರ ಉಪಸ್ಥಿತರಿದ್ದರು.