ಕೊಲೆಗೆ ಸುಳಿವು ಕೊಟ್ಟ ಖಾರದಪುಡಿ, ಕುರಿಗಳು!

KannadaprabhaNewsNetwork |  
Published : Jun 18, 2025, 01:43 AM IST
ಕುರಿಗಾಹಿಯ ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಯಮಕನಮರಡಿ ಠಾಣೆ ಪೊಲೀಸರು | Kannada Prabha

ಸಾರಾಂಶ

ಯಾವುದೇ ಕುರುಹು ಬಿಡದೆ ಕುರಿಗಾಹಿಯೋರ್ವನ ಕೊಲೆಗೈದ ಸವಾಲಿನ ಪ್ರಕರಣವೊಂದನ್ನು ಯಮಕನಮರಡಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಗಾರ ಬೇರೆ ಯಾರೂ ಅಲ್ಲ. ಆತನ ತಮ್ಮನೇ ಎನ್ನುವುದು ಪೊಲೀಸ್‌ ತನಿಖೆಯಿಂದ ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಯಾವುದೇ ಕುರುಹು ಬಿಡದೆ ಕುರಿಗಾಹಿಯೋರ್ವನ ಕೊಲೆಗೈದ ಸವಾಲಿನ ಪ್ರಕರಣವೊಂದನ್ನು ಯಮಕನಮರಡಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಗಾರ ಬೇರೆ ಯಾರೂ ಅಲ್ಲ. ಆತನ ತಮ್ಮನೇ ಎನ್ನುವುದು ಪೊಲೀಸ್‌ ತನಿಖೆಯಿಂದ ತಿಳಿದು ಬಂದಿದೆ.

ಹುಕ್ಕೇರಿ ತಾಲೂಕಿನ ಹಟ್ಟಿಆಲೂರಿನ ಗ್ರಾಮದ ರಾಯಪ್ಪ ಸುರೇಶ ಕಮತಿ (28) ಎನ್ನುವ ಕುರಿಗಾಹಿಯನ್ನು 2025, ಮೇ 8ರಂದು ಕೊಲೆ ಮಾಡಲಾಗಿತ್ತು. ಮಧ್ಯಾಹ್ನ 2.30ರ ಹೊತ್ತಿಗೆ ನಡೆದ ಕೊಲೆಯ ಕುರಿತು ಪೊಲೀಸರಿಗೆ ರಾತ್ರಿ 7.30ರ ಹೊತ್ತಿಗೆ ಮಾಹಿತಿ ಹೋಗುತ್ತದೆ. ಕೊಲೆಯಾದ ರಾಯಪ್ಪನ ತಂದೆ ಸುರೇಶ ಬೀರಪ್ಪಾ ಕಮತಿ ಮರುದಿನ ಯಮಕನಮರಡಿ ಠಾಣೆಯಲ್ಲಿ ಅಧಿಕೃತ ದೂರು ಸಲ್ಲಿಸುತ್ತಾರೆ.ತನ್ನ ಮಗ ಕಳೆದ ಮೇ 8ರಂದು ಕುರಿಗಳನ್ನು ಮೇಯಿಸಲು ಹೋದಾಗ ಮಧ್ಯಾಹ್ನ 1.30 ಗಂಟೆಯಿಂದ ಸಂಜೆ 6.30 ಗಂಟೆ ನಡುವಿನ ಅವಧಿಯಲ್ಲಿ ಪಾಶ್ಚಾಪುರ ಗ್ರಾಮ ವ್ಯಾಪ್ತಿಯ ಖುಲ್ಲಾ ಜಮೀನಿನಲ್ಲಿ ಯಾರೋ ಅವನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಗಾಯಪಡಿಸಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಯಮಕನಮರಡಿ ಠಾಣೆ ಪೊಲೀಸರು ತನಿಖೆ ಆರಂಭಿಸಿದರು. ಯಾವುದೇ ಹೊಡೆದಾಟ, ಪ್ರತಿರೋಧವಿಲ್ಲದೆ ಕಣ್ಣಿಗೆ ಖಾರದ ಪುಡಿ ಎರಚಿ, ತಲೆಗೆ ಹಿಂದಿನಿಂದ ಕಲ್ಲಿನಲ್ಲಿ ಹೊಡೆದು ಕೊಲೆ ಮಾಡಲಾಗಿತ್ತು. ಯಾವುದೇ ಸುಳಿವು ಸಿಗದಂತೆ ಈ ಕೊಲೆ ನಡೆದಿದ್ದರಿಂದ ಈ ಪ್ರಕರಣ ಪೊಲೀಸರು ಭಾರಿ ಸವಾಲಾಗಿತ್ತು.ಒಂದು ತಿಂಗಳ ಕಾಲ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿದರೂ ಒಂದೇ ಒಂದು ಕುರುಹು ಸಹ ಸಿಗಲಿಲ್ಲ. ಮೃತನ ಜೊತೆಗೆ ಕಳೆದ ಹಲವು ವರ್ಷಗಳ ಹಿಂದೆ ಜಗಳವಾಡಿದ್ದವರಿಂದ ಹಿಡಿದು, ಆತನ ಮತ್ತು ಆತನ ಪತ್ನಿಯ ಸಂಬಂಧಗಳನ್ನೆಲ್ಲ ಕೆದಕಿ ತನಿಖೆ ನಡೆಸಿದರೂ ಯಾವುದೇ ಸುಳಿವು ಕೂಡ ಪೊಲೀಸರಿಗೆ ಸಿಗಲಿಲ್ಲ. ಮನೆಯವರು, ಸಹೋದರರು, ಸಂಬಂಧಿಕರು ಎಲ್ಲರನ್ನೂ ಹಲವು ಬಾರಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದರೂ ಪ್ರಯೋಜನವಾಗಲಿಲ್ಲ.

ಆ ದಿನ ಕೊಲೆ ನಡೆದ ನಂತರ ಕುರಿಗಳು ತಾವಾಗಿಯೇ ಹಟ್ಟಿ ಸೇರಿದ್ದ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ಜಾವೀದ್ ಮುಶಾಪುರಿ ಅವರು, ಮತ್ತೊಂದು ಆಯಾಮದ ಮೂಲಕ ತನಿಖೆ ಆರಂಭಿಸಿದರು. ಎಲ್ಲ 60 ಕುರಿಗಳನ್ನು ಮತ್ತು ಕುರಿಗಳ ಜೊತೆಗೆ ನಿತ್ಯವೂ ಹೋಗುತ್ತಿದ್ದ ನಾಯಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದರು.

ಕೊಲೆಗಾರನ ಸಹೋದರನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡುವ ರೀತಿಯಲ್ಲಿ ನಾಟಕವೊಂದು ಮಾಡಲಾಯಿತು. ಕಲ್ಲು ಎತ್ತಿದ ತಕ್ಷಣ ನಾಯಿ ಬೊಗಳಲು ಆರಂಭಿಸಿತು. ಒಂದೊಮ್ಮೆ ಕೊಲೆ ನಡೆದ ದಿನವೂ ನಾಯಿ ಬೊಗಳಿದ್ದರೆ ಕೊಲೆಯಾದಾತ ಪ್ರತಿರೋಧ ಒಡ್ಡುತ್ತಿದ್ದ, ಸ್ವಲ್ಪವಾದರೂ ಗಲಾಟೆ ನಡೆಯುತ್ತಿತ್ತು. ಅಂದರೆ ಕೊಲೆಗಾರ ನಾಯಿಗೂ ಪರಿಚಿತನೇ ಇರಬೇಕು ಎನ್ನುವ ಮೊದಲ ಸಂಶಯ ವ್ಯಕ್ತವಾಯಿತು.ನಂತರ ಸಹೋದರ ಕೊಲೆಯಾದ ರೀತಿಯಲ್ಲಿ ಮಲಗಿಸಲಾಯಿತು. ಆದರೆ ಕೊಲೆ ನಡೆದ ದಿನ ತಾವಾಗಿಯೇ ಮನೆಗೆ ಹೋಗಿದ್ದ ಕುರಿಗಳು ಈ ದಿನ ಅಲ್ಲಿದ್ದ ದಂಡೆ ಹತ್ತಿ ಮನೆಗೆ ಹೋಗಲಿಲ್ಲ. ನಂತರ ಸಹೋದರನ ಹತ್ತಿರ ಕುರಿಗಳನ್ನು ದಂಡೆ ಹತ್ತಿಸುವಂತೆ ಹೇಳಿದಾಗ ದಂಡೆ ಹತ್ತಿದ ನಂತರ ಅವು ತಾವಾಗಿಯೇ ಮನೆಗೆ ಹೋದವು. ಅಂದರೆ ಕುರಿಗಳನ್ನು ದಂಡೆ ಹತ್ತಿಸಿದವರು ಯಾರೋ ಗೊತ್ತಿರುವವರೇ ಇರಬೇಕು ಎನ್ನುವ ಎರಡನೇ ಸಂಶಯ ವ್ಯಕ್ತವಾಯಿತು.ಈ ಆಧಾರದ ಮೇಲೆ, ತಾಂತ್ರಿಕ ಸಾಕ್ಷಿಗಳೇನಾದರೂ ಸಿಗುತ್ತವೆಯೇ ಎಂದು ಮೊಬೈಲ್ ಲೊಕೇಶನ್‌ಗಳನ್ನೆಲ್ಲ ಪರಿಶೀಲಿಸಲಾಯಿತು. ಕೊಲೆಯಾದ ನಂತರ, ಕುರಿಗಳು ತಾವಾಗಿಯೇ ಮನೆಗೆ ಬಂದಿವೆ. ಆದರೆ ಅಣ್ಣ ಬರಲಿಲ್ಲ ಎಂದು ಸಹೋದರ ಬಸವರಾಜ ಕಮತಿ (24) ತನ್ನ ಮತ್ತೊಬ್ಬ ಸಹೋದರನಿಗೆ ಫೋನ್ ಮಾಡಿ ತಿಳಿಸಿದ್ದ. ಅಣ್ಣ ಎಲ್ಲಿ ಹೋದ ಎಂದು ಹೋಗಿ ನೋಡಿಕೊಂಡು ಬಾ ಎಂದು ಅಣ್ಣ ಹೇಳಿದ ನಂತರ ಬಸವರಾಜ ಹುಡುಕಲು ಹೋಗಿದ್ದರೂ ಕೇವಲ ಒಂದೇ ಬಾರಿ ಅಣ್ಣನ ಮೊಬೈಲ್‌ ಗೆ ಕಾಲ್ ಮಾಡಿ, ಆತ ರಿಸೀವ್ ಮಾಡಲಿಲ್ಲ ಎಂದು ಹೇಳಿದ್ದ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಪದೇ ಪದೆ ಫೋನ್ ಮಾಡಿ ಪ್ರಯತ್ನಿಸಲಾಗುತ್ತದೆ. ಆದರೆ ಆತ ಒಂದೇ ಬಾರಿ ಕಾಲ್ ಮಾಡಿ ಸುಮ್ಮನಾಗಿದ್ದೇಕೆ ಎನ್ನುವ ಮೂರನೇ ಸಂಶಯ ಆರಂಭವಾಯಿತು.ಈ ಸಂದರ್ಭದಲ್ಲಿ ಮತ್ತೆ ಸಹೋದರ ಬಸವರಾಜನನ್ನು ಠಾಣೆಗೆ ಕರೆಸಿದ ಇನ್‌ಸ್ಪೆಕ್ಟರ್ ಜಾವೀದ್ ಮುಶಾಪುರಿ, ಎಲ್ಲ ಸಾಕ್ಷಿಗಳೂ ನೀನೇ ಕೊಲೆಗಾರ ಎನ್ನುತ್ತಿವೆ. ಜೊತೆಗೆ ಆತನ ಕಣ್ಣಿಗೆ ಎರಚಿದ್ದ ಖಾರದ ಪುಡಿಗೂ ನಿಮ್ಮ ಮನೆಯಲ್ಲಿನ ಖಾರದ ಪುಡಿಗೂ ಹೋಲಿಕೆ ಇದೆ. ಹಾಗಾಗಿ ಸುಮ್ಮನೇ ನಡೆದ ಘಟನೆ ಹೇಳು, ಇಲ್ಲವಾದಲ್ಲಿ ಬೇರೆ ರೀತಿ ತನಿಖೆ ಆರಂಭಿಸಬೇಕಾಗುತ್ತದೆ ಎಂದು ಪೊಲೀಸ್ ಭಾಷೆಯಲ್ಲಿ ಹೇಳಿದಾಗ ಬಸವರಾಜ ನಡೆದ ಘಟನೆಯನ್ನೆಲ್ಲ ಬಾಯಿ ಬಿಟ್ಟಿದ್ದಾನೆ.ನನಗೆ ಓದಿ ಕೆಲಸ ಮಾಡಬೇಕು ಎಂಬ ಆಸೆ. ಆದರೆ ತನ್ನ ಅಣ್ಣ ರಾಯಪ್ಪ ನನಗೆ ಕುರಿ ಕಾಯಲು ಬಾ ಎಂದು ಮತ್ತು ಪ್ರತಿ ರಾತ್ರಿ ಕುರಿ ದೊಡ್ಡಿಯಲ್ಲಿ ಮಲಗು ಎಂದು ಪದೆ ಪದೆ ತಂಟೆ ಮಾಡುತ್ತಿದ್ದ. ನನಗೆ ನೌಕರಿ ಮಾಡುವ ಆಸೆ ಇತ್ತು. ಆದರೆ ಅದಕ್ಕೆ ಅಡ್ಡಿ ಮಾಡಿ ಕಾಯಂ ಆಗಿ ಕುರಿಕಾಯಲು ಹಚ್ಚುತ್ತಾನೆ ಎಂದು ತಿಳಿದು ತನ್ನ ಅಣ್ಣನನ್ನು ಕೊಲೆ ಮಾಡಲು ತೀರ್ಮಾನಿಸಿದ್ದೆ. ಮೇ 8 ರಂದು ಮನೆಯಲ್ಲಿನ ಖಾರದ ಪುಡಿಯನ್ನು ತೆಗೆದುಕೊಂಡು ಬಂದು ರಾಯಪ್ಪನು ಜಮೀನಿನಲ್ಲಿ ಮೊಬೈಲ್ ನೋಡುತ್ತಾ ಕುಳಿತಾಗ ಅವನ ಹಿಂದಿನಿಂದ ಹೋಗಿ ಅವನ ಕಣ್ಣಿಗೆ ಕಾರದ ಪುಡಿ ಗೊಜ್ಜಿ, ನಂತರ ಕಲ್ಲಿನಿಂದ ತಲೆಗೆ ಮತ್ತು ಮುಖಕ್ಕೆ ಬಲವಾಗಿ ಬಡಿದು ಕೊಲೆ ಮಾಡಿದ್ದಾಗಿ ಹೇಳಿದ. ಅಲ್ಲಿಗೆ ರೋಚಕವಾಗಿ ಕೊಲೆ ರಹಸ್ಯ ಬಯಲಾಯಿತು. ಅತ್ಯಂತ ಪ್ರಯಾಸಪಟ್ಟು ತನಿಖೆ ನಡೆಸಿ, ಕೊಲೆ ರಹಸ್ಯ ಭೇದಿಸಿದ ಇನಸ್ಪೆಕ್ಟರ್ ಜಾವೀದ್ ಮುಶಾಪುರಿ ಮತ್ತು ಅವರ ತಂಡ ಯಶಸ್ವಿಯಾಗಿದೆ.ಈ ಪ್ರಕರಣದಲ್ಲಿನ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮತ್ತು ಹೆಚ್ಚುವರಿ ಪೊಲೀಸ್ ಅಧಿಕ್ಷಕಿ ಶೃತಿ ಎನ್‌.ಎಸ್ ಮತ್ತು ಆರ್.ಬಿ ಬಸರಗಿ ಹಾಗೂ ಗೋಕಾಕ ಉಪ ವಿಭಾಗದ ಡಿ.ಎಸ್.ಪಿ ರವಿ ಡಿ. ನಾಯಿಕ ಮಾರ್ಗದರ್ಶನ ನೀಡಿದ್ದರು. ಯಮಕನಮರಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೇಕ್ಟರ್ ಜಾವೀದ್ ಎಫ್ ಮುಶಾಪುರಿ ನೇತೃತ್ವದ ತನಿಖಾ ತಂಡದಲ್ಲಿ ಪಿ.ಎಸ್.ಐ ಎಸ್.ಕೆ ಮನ್ನಿಕೇರಿ ಮತ್ತು ಸಿಬ್ಬಂದಿಯರಾದ ಶ್ರೀಶೈಲ್ ಪೂಜೇರಿ, ಎಸ್.ಎಮ್.ಚೌಗಲಾ, ಸತೀಶ ರಡ್ಡಿ, ಸುನೀಲ ಚಂದರಗಿ, ಎಲ್.ಬಿ ಹಮಾನಿ ಇದ್ದರು.ಆರೋಪಿಯಿಂದ ಕೃತ್ಯಕ್ಕೆ ಉಪಯೋಗಿಸಿದ ಸಲಕರಣೆಗಳನ್ನು ತನಿಖಾಧಿಕಾರಿಗಳು ಜಪ್ತು ಮಾಡಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ