ಚನ್ನಪಟ್ಟಣ: ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ಮನೋಭಾವನೆಯೇ ಸಮಾಜದ ನಿಜವಾದ ಶಕ್ತಿ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ದೇವರಾಜ ಅರಸು ಹಿಂದುಳಿದ ವರ್ಗಗಳ ಮಹಾನಾಯಕರಾಗಿ ಸಮಾಜದ ಪ್ರಗತಿಗಾಗಿ ಸೇವೆ ಸಲ್ಲಿಸಿದರು. ಅರಸು ಸಮುದಾಯ ಸೇರಿದಂತೆ ಇತರೆ ಎಲ್ಲಾ ಸಮುದಾಯಗಳು ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ, ಸಂಘಟನೆ ಮತ್ತು ಸೇವಾಭಾವದ ಮೂಲಕ ಮುನ್ನಡೆಯುತ್ತಿವೆ. ಸಮಾಜದ ಸಮಗ್ರ ಅಭಿವೃದ್ಧಿಗೆ ಪರಸ್ಪರ ಸಹಕಾರ ಮತ್ತು ಏಕತೆ ಅಗತ್ಯ ಎಂದು ತಿಳಿಸಿದರು.
ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಸಮುದಾಯ ಭವನ ನಿರ್ಮಾಣ ಕುಂಟುತ್ತಲೇ ಸಾಗಿತ್ತು. ಸದ್ಯ ಕಾಮಗಾರಿ ಮುಕ್ತಾಯಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ. ಯಾವುದೇ ಸಮುದಾಯವಾಗಲಿ ಸಂಘಟಿತರಾಗಿ, ಸುಶಿಕ್ಷಿತರಾದಾಗ ಸಮಾಜದಲ್ಲಿ ತಮ್ಮ ಹಕ್ಕನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸಮುದಾಯದ ಮಂದಿಯ ಶ್ರಮದಿಂದ ಈ ಬೃಹತ್ ಭವನ ತಲೆಎತ್ತಿದ್ದು, ಇದರ ಸದ್ಬಳಕೆಗೆ ಮುಂದಾಗಬೇಕು ಎಂದು ಕರೆನೀಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ್, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ವಿಜಯನಗರ ಅರಸು ಅಭಿವೃದ್ಧಿ ಸಂಘದ ಅಧ್ಯಕ್ಷ ಸುಗಂಧರಾಜೇ ಅರಸು, ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸರ್ಕಾರಿ ಹುದ್ದೆ ಭರ್ತಿ ಮಾಡಬೇಕು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಕಟ್ಟಡಗಳಿಂದ ಕೆಲಸ ಆಗಲ್ಲ. ರಾಜ್ಯ ಸರ್ಕಾರ ಆದಷ್ಟು ಬೇಗ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಆರೋಗ್ಯ ಇಲಾಖೆ, ಕೃಷಿ ಇಲಾಖೆ ಸೇರಿ ಹಲವಾರು ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಆಡಳಿತ ಯಂತ್ರ ಕುಸಿದು ಹೋಗುತ್ತೆ. ಕೆಲಸಗಳು ಆಗಲ್ಲ, ಈಗಲೇ ಕೆಲಸಗಳು ವಿಳಂಬ ಆಗುತ್ತಿದೆ. ಖಾಲಿ ಹುದ್ದೆಗಳನ್ನ ಭರ್ತಿ ಮಾಡಿದರೆ ಆಡಳಿತ ಯಂತ್ರ ಚುರುಕಾಗಲಿದೆ. ಶಾಶ್ವತ ಯೋಜನೆಗಳಿಗೆ ಹೆಚ್ಚು ಹಣ ಕೊಡಬೇಕು. ಬರುವ ಬಜೆಟ್‌ನಲ್ಲಿ ಹುದ್ದೆಗಳಿಗೆ ಪ್ರತ್ಯೇಕ ಹಣ ಮೀಸಲಿಡಬೇಕು ಎಂದರು.
ಪೊಟೋ೨ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ವಿಜಯನಗರದ ಅರಸು ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿದರು.