ದೇವರಾಜು ಕಪ್ಪಸೋಗೆ
ಗಡಿಜಿಲ್ಲೆಯ ಹನೂರು ತಾಲೂಕಿನ ಬಹು ಬೇಡಿಕೆಯಾದ ನೀರಾವರಿ ಯೋಜನೆಗೆ ಸಿದ್ದರಾಮಯ್ಯ ಅಸ್ತು ಎಂದಿದ್ದಾರೆ. ಗುಂಡ್ಲುಪೇಟೆಗೆ ಒಳಚರಂಡಿ, ಒಣ ಕೆರೆಗಳಿಗೆ ನೀರು, ಹೊಸ ಟ್ರಾಫಿಕ್ ಪೊಲೀಸ್ ಠಾಣೆಯನ್ನೂ ಘೋಷಣೆ ಮಾಡಿದ್ದಾರೆ. ಆದರೆ ಜಿಲ್ಲಾ ಕೇಂದ್ರ ಚಾಮರಾಜನಗರ ಮತ್ತು ಕೊಳ್ಳೇಗಾಲ ತಾಲೂಕಿಗೆ ಈ ಬಾರಿ ಬಜೆಟ್‌ನಲ್ಲಿ ಭಾರೀ ನಿರಾಶೆಯಾಗಿದೆ. ಹನೂರು ಭಾಗದ ಜನರ ಬೇಡಿಕೆಯಾಗಿದ್ದ ಕುಡಿಯುವ ನೀರು ಮತ್ತು ನೀರಾವರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆಗೆ ಮುಖ್ಯಮಂತ್ರಿಗಳು ಸ್ಪಂದಿಸಿ ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು, ಹನೂರು ತಾಲೂಕಿನ ಜನರಿಗೆ ಮತ್ತು ರೈತರಿಗೆ ಉಡುತೊರೆಹಳ್ಳ ಜಲಾಶಯವೇ ಆಧಾರ. ಇಲ್ಲಿ ನೀರಿನ ಕೊರತೆ ಇರುವುದರಿಂದ ಸುಮಾರು 15 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಸರಿಯಾಗಿ ನೀರು ಲಭ್ಯವಾಗುತ್ತಿರಲಿಲ್ಲ. ಅಲ್ಲದೇ ರಾಮಾಪುರ ಮತ್ತು ಕೌದಳ್ಳಿ ಭಾಗದಲ್ಲಿ ಅಂತರ್ಜಲ 900 ಅಡಿಗೂ ಕೆಳಕ್ಕೆ ಹೋಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿತ್ತು. ಈ ನಿಟ್ಟಿನಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡುವಂತೆ ರೈತರು ಹಲವಾರು ದಿನಗಳ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ್ದರು. ಬೆಂಗಳೂರಿನ ತನಕ ಪಾದಯಾತ್ರೆ ಮತ್ತು ಉರುಳು ಸೇವೆ ಮಾಡುವ ಮೂಲಕ, ಈ ಭಾಗದ ಶಾಸಕ ಎಂ.ಆರ್. ಮಂಜುನಾಥ್ ಮತ್ತು ಸಂಸದ ಸುನೀಲ್ ಬೋಸ್, ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಮೂಲಕವೂ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರು, ಅಲ್ಲದೆ ಮುಖ್ಯಮಂತ್ರಿ ಭೇಟಿಯಾಗಿ ಮನವಿಯನ್ನೂ ಸಲ್ಲಿಸಿದ್ದು, ಈಗ ಈ ಬಜೆಟ್‌ನಲ್ಲಿ ಫಲಪ್ರದವಾಗಿದೆ.
ಹನೂರು ಭಾಗಕ್ಕೆ ಶಾಶ್ವತ ಪರಿಹಾರ ನೀಡಲು, ಕೊಳ್ಳೇಗಾಲದ ಸರಗೂರು ಹತ್ತಿರ ಕಾವೇರಿ ನದಿಯಿಂದ ನೀರನ್ನು ಎತ್ತಿ ಹರಿಸುವ ₹490 ಕೋಟಿಗಳ ಬೃಹತ್ ಏತ ನೀರಾವರಿ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು, ಈ ಯೋಜನೆಯಿಂದ ಮೊದಲನೇಯದಾಗಿ, ಉಡುತೊರೆಹಳ್ಳ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲಿದೆ. ಎರಡನೇಯದಾಗಿ ಹನೂರು ವ್ಯಾಪ್ತಿಯ 8 ಕೆರೆಗಳು ಮತ್ತು 31 ಚೆಕ್ ಡ್ಯಾಂಗಳು ತುಂಬಲಿವೆ. ಇದರಿಂದ 9ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಮತ್ತು ಅಂತರ್ಜಲ ಮಟ್ಟ ಸುಧಾರಿಸಲಿದೆ.ಗುಂಡ್ಲುಪೇಟೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ!
ಗುಂಡ್ಲುಪೇಟೆ ಪಟ್ಟಣ ಸೇರಿದಂತೆ ಮೈಸೂರು- ಊಟಿ ಹಾಗೂ ಮೈಸೂರು- ಸುಲ್ತಾನ್ ಬತ್ತೇರಿ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಹಾಗೂ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಬಗ್ಗೆ ಸ್ಥಳೀಯ ಪೊಲೀಸರು ಗುಂಡ್ಲುಪೇಟೆ ಸಂಚಾರ ಪೊಲೀಸ್ ಠಾಣೆ ಅಗತ್ಯವಾಗಿ ಬೇಕು ಎಂದು ಪ್ರಸ್ತಾವನೆ ಸಲ್ಲಿಸಿದ್ದರು.
ಪೊಲೀಸರ ಪ್ರಸ್ತಾವನೆ ಬಳಿಕ ಸ್ಥಳೀಯ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ಕೂಡ ಗುಂಡ್ಲುಪೇಟೆಗೆ ಸಂಚಾರ ಪೊಲೀಸ್ ಠಾಣೆ ಆಗಬೇಕು ಎಂದು ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದರು.ಅಲ್ಲದೆ, ಗುಂಡ್ಲುಪೇಟೆ ಪಟ್ಟಣದ ಒಳ ಚರಂಡಿ ೨ನೇ ಹಂತದ ₹೯೮ ಕೋಟಿ ವೆಚ್ಚದ ಯೋಜನೆ ಬಗ್ಗೆ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿಗಳೂ ಆದ ಹಣಕಾಸು ಸಚಿವ ಸಿದ್ದರಾಮಯ್ಯ ಮುಂಗಡ ಪತ್ರದಲ್ಲಿ ಘೋಷಣೆ ಮಾಡಿದ್ದಾರೆ.
ಕೆರೆಗಳಿಗೆ ನೀರು, ಕಾಲುವೆಗಳ ಅಭಿವೃದ್ಧಿಗೆ ಆದ್ಯತೆ:ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ನದಿಯ ಅಡಿಯಲ್ಲಿ ಬರುವ ಸರಣಿ ಕೆರೆಗಳ ಅಭಿವೃದ್ಧಿ, ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುವರ್ಣಾವತಿ ನದಿಯ ವ್ಯಾಪ್ತಿಯ ಸರಣಿ ಕೆರೆಗಳ, ಫೀಡರ್ ನಾಲೆಗಳ ಹಾಗೂ ಅಡ್ಡಮೋರಿ ಕಾಮಗಾರಿ, ಸುವರ್ಣಾವತಿ ಜಲಾಶಯ ನಾಲೆಗಳ ಅಭಿವೃದ್ಧಿ ಹಾಗೂ ಗುಂಡ್ಲುಪೇಟೆ ತಾಲೂಕಿನ ಒಣಗಿದ ಕೆರೆಗಳನ್ನು ತುಂಬಿಸುವ ಯೋಜನೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಾಗಿದೆ.
ಮತ್ತೆ ಪಸ್ತಾಪ:ಕಳೆದ ಬಾರಿ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದ್ದ ಹುಲ್ಲಹಳ್ಳಿ - ತಗಡೂರು- ಸಂತೇಮರಹಳ್ಳಿ 55 ಕಿಮೀ ರಸ್ತೆ ಹಾಗೂ ಹನೂರು- ರಾಮಾಪುರ- ಪಾಲಾರ್- 70 ಕಿ ಮೀ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಮೂಲಕ ಅಭಿವೃದ್ಧಿಪಡಿಸುವುದಾಗಿ ತಿಳಿಸಲಾಗಿದೆ.