ಕನ್ನಡಪ್ರಭ ವಾರ್ತೆ ಧಾರವಾಡ
ಇಲ್ಲಿಯ ರಪಾಟಿ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘ ಶನಿವಾರ ಆಯೋಜಿಸಿದ್ದ ನೂತನ ಶಾಸಕರ ಮತ್ತು ಸಚಿವರ ಅಭಿನಂದನಾ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಾಮಾನ್ಯಸಭೆ ಉದ್ಘಾಟಿಸಿ ಮಾತನಾಡಿದರು.
ನೌಕರ ಸಂಘದ ಜಿಲ್ಲಾ ಘಟಕ ಸಲ್ಲಿಸಿರುವ ಬೇಡಿಕೆಗಳಿಗೆ ತಾವು ನೆರವು ನೀಡುವುದಾಗಿ ಮತ್ತು ಸಭಾಗಂಣ ನಿರ್ಮಾಣಕ್ಕೆ ಅನುದಾನ ಕಲ್ಪಿಸುವುದಾಗಿ ತಿಳಿಸಿದರು. ಎನ್‌ಪಿಎಸ್ ರದ್ಧತಿ ಬಗ್ಗೆ ಸರ್ಕಾರಕ್ಕೆ ತಮ್ಮ ಮನವಿ ತಲುಪಿಸುವುದಾಗಿ ಸಚಿವರು ಹೇಳಿದರು.ಆಡಳಿತ ವ್ಯವಸ್ಥೆಯಲ್ಲಿನ ಲೋಪ-ದೋಷಗಳನ್ನು ಸರಿಪಡಿಸಲು ಸರ್ಕಾರಿ ನೌಕರರ ಸಹಕಾರ ಅಗತ್ಯವಿದೆ. ರಾಜ್ಯ ಸರ್ಕಾರ ರಾಷ್ಟ್ರಕ್ಕೆ ಮಾದರಿಯಾಗುವ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳ್ಳಿಸಿದೆ. ಶಕ್ತಿ ಯೋಜನೆ ಜಾರಿಯಾಗಿದ್ದರಿಂದ ಇಂದು 1.16 ಕೋಟಿ ಜನ ಪ್ರಯಾಣ ಮಾಡುತ್ತಿದ್ದಾರೆ. ಇಂತಹ ಸಾಧನೆಗೆ ಸರ್ವರ ಸಹಕಾರವೂ ಮುಖ್ಯ ಎಂದ ಅವರು, ಹಸಿವಿನ ಸೂಚ್ಯಂಕದಲ್ಲಿ ನಮ್ಮ ದೇಶ ಕೆಳಗೆ ಬರುತ್ತಿದೆ. ಜಿಡಿಪಿ ಬೆಳವಿಮೆಗೆ ಕಾಣುತ್ತಿದೆ. ಆದರೆ, ಅದು ಸಮಾಜದಲ್ಲಿ ಕಾಣುತ್ತಿಲ್ಲ. ಸರ್ಕಾರಿ ನೌಕರರು ಸೇರಿದಂತೆ ಎಲ್ಲರೂ ಬದ್ಧತೆ, ಪಾರದರ್ಶಕತೆಯಿಂದ ತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದ್ದರಿಂದ ನೌಕರರು ಉದಾರತೆಯಿಂದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಎನ್.ಪಿ.ಎಸ್. ರದ್ದುಗೊಳೊಸುವ ಭರವಸೆಯನ್ನು ನೀಡಿದೆ. ಅದನ್ನು ಈಡೇರಿಸುವ ಕಾಲ ಬಂದಿದೆ. ಉಪ ಮುಖ್ಯಮಂತ್ರಿ ಸದನದಲ್ಲಿ ನೀಡಿದ ಮಾತು ನಿಜಗೊಳಿಸಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಸಂಘ ಸರ್ಕಾರಿ ನೌಕರ ಹಿತ ಕಾಯಲು ಅನೇಕ ಜನಪರ ಕಾರ್ಯಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿದೆ. ಸರ್ಕಾರದೊಂದಿಗೆ ಸಂಘರ್ಷ ಮಾಡುವ ಪ್ರಶ್ನೆ ಇಲ್ಲ. ಸರ್ಕಾರ ನೌಕರರ ನ್ಯಾಯಯುತ ಬೇಡಿಕೆಗಳನ್ನು ಸಹನೆಯಿಂದ ಪರಿಶೀಲಿಸಿ, ಈಡೇರಿಸಬೇಕು ಎಂದರು. ಎನ್.ಪಿ.ಎಸ್. ರದ್ದು ಮಾಡುವ ಕುರಿತು ಸಂಘ ಸರ್ಕಾರ ಮಟ್ಟದಲ್ಲಿ ಒತ್ತಾಯ ಮಾಡಿ, ಹೋರಾಟಕ್ಕೆ ಸಿದ್ಧವಾಗಿದೆ. ರಾಜ್ಯ ಸರ್ಕಾರ ಓಪಿಎಸ್ ಜಾರಿಗೊಳಿಸಬೇಕು. ನಗದು ರಹಿತ ಆರೋಗ್ಯ ವಿಮೆ ಜಾರಿ ಆಗಬೇಕು ಎಂದರು.