ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಬಣಗಳ ಹಾಗೂ ತಂಡಗಳನ್ನು ಮಾಡಿಕೊಂಡು ಕುರ್ಚಿಗಾಗಿ ಬಡಿದಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಜನ ಇವರಿಗೆ ಸಂಪೂರ್ಣ ಬಹುಮತದ ಅಧಿಕಾರ ನೀಡಿದ್ದಾರೆ. ಸುಭದ್ರ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿದೆ. ಬರಗಾಲದಲ್ಲಿ ರೈತರ ನೆರವಿಗೆ ಬಾರದ ಈ ಸರ್ಕಾರದ ಎಲ್ಲ ಮಂತ್ರಿಗಳು ಹಾಗೂ ಶಾಸಕರು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ರೈತರ ಕಷ್ಟ ಆಲಿಸದೇ ಕೇವಲ ಅಧಿಕಾರಕ್ಕಾಗಿ ಹಂಬಲಿಸುತ್ತಿದ್ದಾರೆ ಎಂದರು.
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಮೂರು ಗುಂಪುಗಳಾಗಿದ್ದು, ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ ಅವರ ನೇತೃತ್ವದಲ್ಲಿ ದಲಿತರ ಗುಂಪು, ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಗೌಡರ ಗುಂಪು, ಹಿಂದುಳಿದ ವರ್ಗಗಳ ಹೆಸರಿನಲ್ಲಿ ಸಿದ್ದರಾಮಯ್ಯ ಅವರ ಗುಂಪು ಹೀಗೆ 3 ಮೂರು ಗುಂಪುಗಳಾಗಿವೆ ಎಂದು ವ್ಯಂಗ್ಯವಾಡಿದರು.ಉತ್ತರ ಕರ್ನಾಟಕ ಭಾಗದ ನಾಯಕರಾದ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಡಿನ್ನರ್ ಪಾರ್ಟ್‌ಗೆ ಕರೆದಿಲ್ಲ. ರಾಜ್ಯದಲ್ಲಿ ವೀರಶೈವ ಲಿಂಗಾಯತರನ್ನು 2ನೇ ದರ್ಜೆಯವರಂತೆ ಕಾಣಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ 38 ಜನ ಲಿಂಗಾಯತ ಜನ ಶಾಸಕರಿದ್ದು, 7 ಜನ ಮಂತ್ರಿಗಳಿದ್ದಾರೆ. ಆದರೂ ಹಿರಿಯ ನಾಯಕ ಶಾಮನೂರು ಶಿವಶಂಕ್ರಪ್ಪ ತಮ್ಮ ನೋವು ತೋಡಿತೊಂಡಿದ್ದಾರೆ.
ಬಳಿಕ ತಾಲೂಕಿನ ಹೊಳಗುಂದಿ ಗ್ರಾಮ ಹತ್ತಿರದಲ್ಲಿರುವ ಆನಂದಹಳ್ಳಿ ರವೀಶ ಅವರ ಸೂರ್ಯಕಾಂತಿ ಬಿತ್ತನೆ ಮಾಡಿರುವ ಜಮೀನಿಗೆ ಭೇಟಿ ನೀಡಿದ ಕಾರಜೋಳ ಹಾಗೂ ಅವರ ತಂಡವು ರೈತರಿಂದ ಬಿತ್ತನೆ ಸೇರಿದಂತೆ ಇನ್ನಿತರ ಖರ್ಚು ವೆಚ್ಚಗಳ ಕುರಿತು ಮಾಹಿತಿ ಹಾಗ ಬೆಳೆಹಾನಿ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ, ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್, ತಾಲೂಕು ಬಿಜೆಪಿ ಅಧ್ಯಕ್ಷ ಸಂಜೀವರೆಡ್ಡಿ, ಈಟಿ ಲಿಂಗರಾಜ, ಎಚ್. ಪೂಜೆಪ್ಪ, ಎಚ್. ಹನುಮಂತಪ್ಪ, ಓದೋ ಗಂಗಪ್ಪ, ತೋಟಾನಾಯ್ಕ, ಸುಭಾಷ ಕರೆಂಗಿ, ಷಣ್ಮುಖ ಗುರಿಕಾರ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪರಶುರಾಮ ಸೇರಿದಂತೆ ಇತರರಿದ್ದರು.