ರಾಜ್ಯದಲ್ಲಿರುವುದು ಅಯೋಗ್ಯ, ಭ್ರಷ್ಟ ಸರ್ಕಾರ: ಎನ್. ರವಿಕುಮಾರ

KannadaprabhaNewsNetwork |  
Published : Feb 15, 2026, 03:45 AM IST
ಪೋಟೊ-೧೪ ಎಸ್.ಎಚ್.ಟಿ. ೧ಕೆ-ಶನಿವಾರ ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಸರ್ಕಾರದ ಸಾವಿರ ದಿನಗಳ ಸಾಧನೆ ಶೂನ್ಯ ಎನ್ನುವ ಕರಪತ್ರ ಬಿಡುಗಡೆ ಮಾಡಿ ಎನ್. ರವಿಕುಮಾರ ಮಾತನಾಡಿದರು. | Kannada Prabha

ಸಾರಾಂಶ

ಸಾವಿರ ದಿನ ಪೂರೈಸಿದ ಸಂಭ್ರಮಾಚರಣೆ ಮಾಡಲು ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ ಟೀಕಿಸಿದರು.

ಶಿರಹಟ್ಟಿ: ಸಾವಿರ ದಿನ ಪೂರೈಸಿದ ಸಂಭ್ರಮಾಚರಣೆ ಮಾಡಲು ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ ಟೀಕಿಸಿದರು.

ಶನಿವಾರ ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಸರ್ಕಾರದ ಸಾವಿರ ದಿನಗಳ ಸಾಧನೆ ಶೂನ್ಯ ಎನ್ನುವ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಸರ್ಕಾರಕ್ಕೆ ಇದು ಸಾರ್ಥಕ ಸಾವಿರ ದಿನಗಳ ಸಂಭ್ರಮ ಅಲ್ಲ. ಸಾವಿರ ಸಮಸ್ಯೆಗಳನ್ನು ನಿರ್ಮಿಸಿದಂತ ಸರ್ಕಾರ ಎಂದು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಾವಿರ ದಿನ ಆಗಿದ್ದರೆ ಹಗರಣಗಳು ಸಾವಿರಾರು. ಸಾವಿರ ದಿನದ ಸಂಭ್ರಮ ಸರ್ಕಾರದಲ್ಲಿಲ್ಲ. ರಾಜ್ಯದಲ್ಲಿರುವ ೪೭ ಸರ್ಕಾರಿ ಇಲಾಖೆಗಳನ್ನು ತೆಗೆದುಕೊಂಡರೆ ಒಂದೊಂದು ಇಲಾಖೆಯಲ್ಲಿ ಏನೇನು ಸಮಸ್ಯೆ ಇದೆ ಎಂದು ಪಟ್ಟಿ ಮಾಡುತ್ತ ಹೋದರೆ ಕನಿಷ್ಠ ನೂರು ಸಮಸ್ಯೆಗಳು ಸಿಗುತ್ತವೆ. ಮುಡಾ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಕ್ಕು ಹಾಕಿಕೊಂಡು ೧೪ ಸೈಟ್‌ಗಳನ್ನು ವಾಪಸ್ ಕೊಟ್ಟಿದ್ದಾರೆ. ಮತ್ತೆ ಇದಕ್ಕೆ ಏನಾದರೂ ಸಾಕ್ಷಿ ಇದೆಯೇ ಎಂದು ಕೇಳುತ್ತಾರೆ. ಇದಕ್ಕಿಂತ ಮತ್ತೇನು ಸಾಕ್ಷಿ ಬೇಕು? ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಗರಣ, ಸ್ವತಃ ಸಿಎಂ ಅವರೇ ಸದನದಲ್ಲಿ ₹87 ಕೋಟಿ ಅಂತ ಹೇಳಿದ್ದಾರೆ. ಇದು ಸಾಕ್ಷಿಯಲ್ಲವೇ ಎಂದರು.

ಅಬಕಾರಿ ಇಲಾಖೆಯದ್ದು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಸಿಎಲ್-7 ಲೈಸನ್ಸ್ ಕೊಡಲು ₹80 ಲಕ್ಷದಿಂದ ₹2 ಕೋಟಿ ವರೆಗೆ ಲಂಚ ಕೇಳುತ್ತಾರೆ. ಇದನ್ನು ಮರ್ಚಂಟ್ ಅಸೋಸಿಯೇಶನ್, ವೈನ್ಸ್ ಅಸೋಸಿಯೇಶನ್‌ವರು, ಮದ್ಯಪಾನ ಮಾರಾಟಗಾರರ ಸಂಘದವರು ಹೇಳುತ್ತಾರೆ. ಹಾಗಾಗಿ, ಈ ಸಾಕ್ಷಿ ಸಾಕಾಗಲ್ಲವಾ ಎಂದು ಹೇಳಿದ ಅವರು, ಈ ತರಹದ ನೂರು ಭ್ರಷ್ಟಾಚಾರ ನಡೆದಿವೆ ಎಂದು ಆರೋಪಿಸಿದರು.

ಗುತ್ತಿಗೆದಾರರ ಸಂಘದ ₹37 ಸಾವಿರ ಕೋಟಿ ಬಾಕಿ ಹಣ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ. ರಾಜ್ಯಾದ್ಯಂತ ದೊಡ್ಡಮಟ್ಟದ ಹೋರಾಟ ಕೂಡ ಮಾಡಲಿದ್ದಾರೆ. ಕಾಮಗಾರಿ ಮಾಡಲು ಬೇರೊಬ್ಬರಿಂದ ಬಡ್ಡಿ ಸಾಲ ಪಡೆದು ಕೆಲಸ ಮಾಡುತ್ತಿದ್ದೇವೆ. ಅನೇಕರು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದಾರೆ. ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಕಟ್ಟಬೇಕಾದ ಸ್ಥಿತಿ ಬಂದಿದೆ ಎಂದರು.

ಭೋವಿ ನಿಗಮದಲ್ಲಿ ₹60 ಕೋಟಿ ಅವ್ಯವಹಾರ, ಅಬಕಾರಿ ಇಲಾಖೆಯಲ್ಲಿ ₹6 ಸಾವಿರ ಕೋಟಿ ಅವ್ಯವಹಾರ ನಡೆದಿದೆ. ಚುನಾವಣೆ ಬರುತ್ತಿದ್ದು ಬೇರೆ ಬೇರೆ ರಾಜ್ಯಗಳಿಗೆ ಆ ಹಣ ಕಳಿಸುತ್ತಿದ್ದಾರೆ. ಇಷ್ಟೆಲ್ಲ ನಡೆದರೂ ಅಬಕಾರಿ ಇಲಾಖೆ ಸಚಿವರು ದಾಖಲೆ ಕೊಡಿ, ನಾನು ರಾಜೀನಾಮೆ ಕೊಡುತ್ತೇನೆ ಎನ್ನುತ್ತಾರೆ. ದಾಖಲೆಗೆ ಆಡಿಯೋ ಇದೆ. ಸಿಎಲ್-7 ಪರವಾನಗಿ ನೀಡಲು ₹80 ಲಕ್ಷ ಕೊಡಬೇಕು ಎಂದು ಮಾತುಕತೆಯಾಗಿದೆ. ಅದರಲ್ಲಿ ಮೊದಲನೇ ಕಂತು ₹25 ಲಕ್ಷ ಕೊಡುವಾಗ ರೆಡ್‌ಹ್ಯಾಂಡ್ 3 ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ಅವರು ಇದರಲ್ಲಿ ಮಂತ್ರಿಗಳಿಗೆ, ಅಧಿಕಾರಿಗಳಿಗೆ, ಅಬಕಾರಿ ಡಿಸಿ ಅವರಿಗೆ ಕೊಡಬೇಕಾಗಿದೆ ಎಂದು ಹೇಳಿ ರೆಕಾರ್ಡ್ ಆದ ಆಡಿಯೋ ಇದೆ.

ಈ ವಿಷಯಕ್ಕೆ ಲೋಕಾಯುಕ್ತದಲ್ಲಿ ದೂರ ಕೂಡ ದಾಖಲಾಗಿದೆ. ಒಂದು ಬಾರ್‌ ಅಂಗಡಿಯವರು ಪ್ರತಿ ಪೊಲೀಸ್ ಠಾಣೆಗೆ ಲಂಚ ಕೊಡಬೇಕು. ಮೈಸೂರಿನಲ್ಲಿ ಒಂದು ಪೊಲೀಸ್ ಠಾಣೆಗೆ ಪ್ರತಿ ತಿಂಗಳು ₹11 ಸಾವಿರ ಕೊಡಲಾಗುತ್ತಿದೆ. ಹೀಗೆ ಇಡೀ ರಾಜ್ಯದಲ್ಲಿ ಇದೆ. ಇದು ಸರ್ಕಾರಕ್ಕೆ ಹೋಗುತ್ತಿದೆ. ಅತಿ ವ್ಯವಸ್ಥಿತವಾಗಿ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ. ಶೇ. 63 ಭ್ರಷ್ಟಾಚಾರ ನಡೆತಿದೆ ಎಂದು ಲೋಕಾಯುಕ್ತ ಬಿ. ವೀರಪ್ಪ ಹೇಳಿದ್ದಾರೆ ಎಂದರು.

ಶಾಸಕ ಡಾ. ಚಂದ್ರು ಲಮಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಸುನೀಲ ಮಹಾಂತಶೆಟ್ಟರ, ನಾಗರಾಜ ಲಕ್ಕುಂಡಿ, ಫಕ್ಕಿರೇಶ ರಟ್ಟಿಹಳ್ಳಿ, ಸಂತೋಷ ಹಡಪದ, ಸಂತೋಷ ಬಿರಾದಾರ, ನಂದಾ ಪಲ್ಲೇದ, ಶಂಕರ ಮರಾಠೆ, ಸಂದೀಪ ಕಪ್ಪತ್ತನವರ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದುಕಿನಲ್ಲಿ ನೆಮ್ಮದಿಗೆ ಸಂಗೀತ ಅಗತ್ಯ: ಡಾ. ಜಿ.ಎಲ್. ಹೆಗಡೆ
ಕವಿತೆಗಳಿಗೆ ಕಿವಿಯಾದ ಅಂಗನವಾಡಿ ಕಾರ್ಯಕರ್ತೆಯರು