ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ನಗರದ ಶರಣಬಸವ ವಿವಿ 5ನೇ ಘಟಿಕೋತ್ಸವದಲ್ಲಿ ಸೋಮವಾರ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದ ಖರ್ಗೆ, ಕಳೆದ ನಾಲ್ಕು ದಶಕಗಳಿಂದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿದ, ಹಿರಿಯರ ಮತ್ತು ಶಿಕ್ಷಣ ಕೇಂದ್ರಗಳ ದೂರದೃಷ್ಟಿಯಿಂದಾಗಿ ಕರ್ನಾಟಕ ಇಂದು ಐಟಿ ವಲಯದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ. ಈ ಕಾಲೇಜುಗಳಲ್ಲಿ ನೀಡಲಾದ ಉನ್ನತ ಗುಣಮಟ್ಟದ ಶಿಕ್ಷಣವು ಕರ್ನಾಟಕವನ್ನು ಭಾರತದ ಸಿಲಿಕಾನ್ ವ್ಯಾಲಿಯಾಗಲು ಅನುವು ಮಾಡಿಕೊಟ್ಟಿದೆ ಎಂದರು.
ತಂತ್ರಜ್ಞರು, ವಿಶೇಷವಾಗಿ ಕರ್ನಾಟಕದ ಸಾಫ್ಟ್‌ವೇರ್ ತಜ್ಞರು ಪ್ರಪಂಚದ ಬಹುತೇಕ ಎಲ್ಲಾ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ವಿಶ್ವದ ಎಲ್ಲಾ ಉನ್ನತ ಸಾಫ್ಟ್‌ವೇರ್ ಕಂಪನಿಗಳಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿದ್ದಾರೆ. ಸಾಫ್ಟ್‌ವೇರ್ ಕ್ಷೇತ್ರದ ಅಭಿವೃದ್ಧಿಯಲ್ಲಿ ಕರ್ನಾಟಕದ ಇಂಜಿನಿಯರ್ಸ್ ಮತ್ತು ಸಂಶೋಧಕರ ಕೊಡುಗೆ ಅಪಾರವಾಗಿದೆ. ಒಂದು ಅಧ್ಯಯನದ ಪ್ರಕಾರ ರಾಜ್ಯದ ಇಂಜಿನಿಯರ್‌ಗಳ ಮುದ್ರೆಯು ಪ್ರಪಂಚದಲ್ಲಿ ಉತ್ಪತ್ತಿಯಾಗುವ ಮೂರು ಹೊಸ ಸಾಫ್ಟ್‌ವೇರ್ ಕೋಡ್‍ಗಳಲ್ಲಿ ಒಂದರಲ್ಲಿಯಾದರೂ ಕಂಡುಬರುತ್ತದೆ ಎಂದರು.ದೇಶದ ಒಟ್ಟು ಐಟಿ ರಫ್ತಿನ ಶೇ.42ರಷ್ಟು ರಾಜ್ಯದಿಂದ ಮತ್ತು ಐಟಿ ರಫ್ತಿನಲ್ಲಿ ರಾಜ್ಯದ ಒಟ್ಟು ಕೊಡುಗೆ ಸುಮಾರು 3.25 ಲಕ್ಷ ಕೋಟಿ ರುಪಾಯಿಯಾಗಿದೆ. ರಾಜ್ಯವು ಹೊಸ ಐಟಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸುವುದನ್ನು ಮುಂದುವರೆಸಿದೆ. ಐಟಿ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ಸುಮಾರು 400 ಕಂಪನಿಗಳು ತೊಡಗಿಸಿಕೊಂಡಿವೆ ಎಂದು ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಭವಿಷ್ಯದ ಸವಾಲುಗಳನ್ನು ಮತ್ತು ನಿರಂತರವಾಗಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ಎದುರಿಸಲು, ಕಾಲೇಜುಗಳಲ್ಲಿನ ಮಾನವ ಸಂಪನ್ಮೂಲವನ್ನು ಹೆಚ್ಚು ಉದ್ಯೋಗಾರ್ಹ ಮತ್ತು ತಾಂತ್ರಿಕವಾಗಿ ಮಾಡಲು ಹೊಸ ನೀತಿಗಳನ್ನು ರೂಪಿಸಲು ರಾಜ್ಯ ಸರ್ಕಾರವು ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಉನ್ನತ ಕೌಶಲ್ಯ ಸಲಹಾ ಸಮಿತಿಯನ್ನು ಸ್ಥಾಪಿಸಿದೆ ಎಂದರು.
ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ ಹಾಗೂ ಶಿಕ್ಷಣತಜ್ಞೆ ಪ್ರೊ. ಚಿನ್ನಮ್ಮ ಗದ್ದಗಿ ಅವರಿಗೆ ಡಾ. ಶರಣಬಸವಪ್ಪ ಅಪ್ಪಾಜಿ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. 26 ಪ್ರತಿಭಾನ್ವಿತ ವಿದ್ವಾಂಸರಿಗೆ ಪಿಎಚ್‍ಡಿ ಪ್ರಮಾಣಪತ್ರ ನೀಡಲಾಯಿತು. ಸ್ನಾತಕೋತ್ತರ ಪದವಿ ಮತ್ತು ಪದವಿ ಕೋರ್ಸ್‍ಗಳಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 41 ಚಿನ್ನದ ಪದಕಗಳು ಮತ್ತು ನಗದು ಬಹುಮಾನಗಳನ್ನು ನೀಡಲಾಯಿತು. ಘಟಿಕೋತ್ಸವದಲ್ಲಿ ಒಟ್ಟು 1624 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದರು.