ದೇಶದ ಅಡಕೆ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ. 79: ಡಾ.ನಾಗರಾಜ್ ಅಡಿವಪ್ಪರ್

KannadaprabhaNewsNetwork |  
Published : Feb 16, 2024, 01:48 AM IST
ಚಿತ್ರ 1,2 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಡೆದ ಜಿಲ್ಲೆಯ ರೈತರಿಗೆ ಅಡಕೆ ಬೆಳೆಯ ಸುಧಾರಿತ ಬೇಸಾಯ ತಾಂತ್ರಿಕತೆ ಹಾಗೂ ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸುವ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ದೇಶದಲ್ಲಿ ಕರ್ನಾಟಕ ರಾಜ್ಯ ಶೇ. 79ರಷ್ಟು ಅಡಕೆ ಬೆಳೆ ಬೆಳೆಯುತ್ತಿದ್ದು ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಶಿವಮೊಗ್ಗ ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜ್ ಅಡಿವಪ್ಪರ್ ಹೇಳಿದರು.

ತಾಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಡೆದ ಜಿಲ್ಲೆಯ ರೈತರಿಗೆ ಅಡಕೆ ಬೆಳೆಯ ಸುಧಾರಿತ ಬೇಸಾಯ ತಾಂತ್ರಿಕತೆ ಹಾಗೂ ಅಡಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಡಕೆ ಬೆಳೆಯಲು ನೀರು ಬಸಿದು ಹೋಗುವ ಕೆಂಪು ಮಣ್ಣು ಸೂಕ್ತ. ನೀರು ನಿಲ್ಲುವ ಜೌಗು ಮತ್ತು ಸವಳು ಮಣ್ಣಿನ ಪ್ರದೇಶಗಳು ಅಡಕೆಗೆ ಸೂಕ್ತವಲ್ಲ. ಮಣ್ಣಿನ ರಸಸಾರ 6 ರಿಂದ 7 ಸೂಕ್ತ. ಅಡಕೆಯನ್ನು 9-9 ಅಡಿ ಅಂತರದಲ್ಲಿ 2-2-2 ಅಡಿ ಅಳತೆಯ ಗುಂಡಿಯಲ್ಲಿ ನಾಟಿ ಮಾಡುವುದು ಸೂಕ್ತ. ಅಡಿಕೆಯಲ್ಲಿ ಅಂತರ ಬೆಳೆಯಾಗಿ ಬಾಳೆ, ವೀಳ್ಯೆದೆಳೆ, ಜಾಯಿಕಾಯಿ ಮತ್ತು ಕರಿಮೆಣಸು ಬೆಳೆಯುವುದು ಜಿಲ್ಲೆಯ ನೆಲಕ್ಕೆ ಸೂಕ್ತವಾಗಿದೆ ಎಂದರು.ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್. ರಜನೀಕಾಂತ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ರೈತರು ಅಡಕೆಯನ್ನು ಪ್ರಮುಖ ತೋಟಗಾರಿಕೆ ವಾಣಿಜ್ಯ ಬೆಳೆಯಾಗಿ ಬೆಳೆಯಲು ಆಸಕ್ತಿ ತೋರುತ್ತಿದ್ದು, ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಉತ್ತಮ ತಳಿಗಳ ಆಯ್ಕೆ, ಬೇಸಾಯ ಕ್ರಮ, ಪೋಷಕಾಂಶಗಳ ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆಯ ತಾಂತ್ರಿಕ ಮಾಹಿತಿ ಅಗತ್ಯವಿದೆ. ಇದಲ್ಲದೆ ರೈತರಿಗೆ ಅಡಕೆ ಸಿಪ್ಪೆಯಿಂದ ಕಾಂಪೋಸ್ಟ್ ಮಾಡುವ ವಿಧಾನದ ಮಾಹಿತಿಯೊಂದಿಗೆ ಪ್ರಾತ್ಯಕ್ಷಿಕೆ ಮಾಡುವುದು ಸಹ ಈ ತರಬೇತಿಯ ಪ್ರಮುಖ ವಿಷಯವಾಗಿದ್ದು ಇದರಿಂದ ಅಡಕೆ ಸಿಪ್ಪೆಯನ್ನು ಎಲ್ಲೆಂದರಲ್ಲೆ ಬಿಸಾಕುವುದು ಹಾಗೂ ಇದರಿಂದಾಗುವ ಅವಘಡಗಳನ್ನು ತಪ್ಪಿಸಲು ಮತ್ತು ರೈತರು ಸ್ವತಃ ತಮ್ಮ ತೋಟಕ್ಕೆ ಬೇಕಾಗುವ ಕಾಂಪೋಸ್ಟ್ ಗೊಬ್ಬರ ಮಾಡಿಕೊಳ್ಳಬಹುದಾಗಿರುವುದರಿಂದ ಈ ತರಬೇತಿಯು ಸಹಕಾರಿಯಾಗಲಿದೆ ಎಂದರು.ತೋಟಗಾರಿಕೆ ತಜ್ಞ ಡಾ.ಸುದೀಪ್ ಮಾತನಾಡಿ ಅಡಕೆಯ ವಿವಿಧ ತಳಿಗಳು ಮತ್ತು ಅವುಗಳ ವಿಶೇಷ ಗುಣಗಳು, ಸಸ್ಯಾಭಿವೃದ್ದಿಯ ಕ್ರಮಗಳು, ಪೋಷಕಾಂಶಗಳ ನಿರ್ವಹಣೆ, ಹಸಿರೆಲೆ ಗೊಬ್ಬರದ ನಿರ್ವಹಣೆ ಹಾಗೂ ನೀರು ಮತ್ತು ಬಸಿಗಾಲುವೆಯ ನಿರ್ವಹಣೆ ಕುರಿತು ತಿಳಿಸಿದರು.ಕೀಟಶಾಸ್ತ್ರ ತಜ್ಞೆ ಡಾ. ಸ್ವಾತಿ ಅವರು ಅಡಕೆಯಲ್ಲಿ ಬರುವ ಪ್ರಮುಖ ರೋಗಗಳಾದ ಸುಳಿ ಕೊಳೆ, ಹಿಂಗಾರು ಒಣಗುವ ರೋಗ, ದುಂಡಾಣು ಎಲೆ ಪಟ್ಟಿ ರೋಗ, ಅಣಬೆ ರೋಗ, ಎಲೆ ಚುಕ್ಕಿ ಮತ್ತು ಹಿಡಿಮುಂಡಿಗೆ ಹಾಗೂ ಪ್ರಮುಖ ಕೀಟಗಳಾದ ನುಸಿ, ರುಗೋಸ್ ಸುರಳಿ ಸುತ್ತುವ ಬಿಳಿನೊಣ, ಸುಳಿ ತಿಗಣೆ, ಹಿಂಗಾರು ತಿನ್ನುವ ಹುಳುಗಳ ಹಾನಿಯ ಲಕ್ಷಣ ಮತ್ತು ಅವುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.ತದ ನಂತರ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಆವರಣದಲ್ಲಿ ರೈತರಿಗೆ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆಯ ವಿಧಾನವನ್ನು ತಿಳಿಸಲಾಯಿತು. ತರಬೇತಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 75 ಕ್ಕೂ ಹೆಚ್ಚು ಆಸಕ್ತ ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌