- ಪ್ರೊ.ಎಚ್.ಲಿಂಗಪ್ಪ ಕೃತಿಗಳು ಮಾದಿಗರ ಇತಿಹಾಸ, ಹಿನ್ನೆಲೆಯ ಕನ್ನಡಿ: ಡಾ.ಮೀರಸಾಬಿಹಳ್ಳಿ ಶಿವಣ್ಣ ಅಭಿಮತ - - -
ದಲಿತರ ಸೇವೆ, ದಲಿತ ಸಾಹಿತ್ಯಕ್ಕೆ ತಮ್ಮ ಒಟ್ಟು ಬದುಕನ್ನೇ ಅರ್ಪಿಸಿಕೊಂಡ ಪ್ರೊ. ಎಚ್.ಲಿಂಗಪ್ಪನವರ ಮಾತಂಗಿ ಕಥನ ಕೃತಿ ಈಗಿನ ತಲೆಮಾರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಒಂದು ಅನನ್ಯ ಸಾಂಸ್ಕೃತಿಕ ಪಠ್ಯವಾಗಿದೆ ಎಂದು ಹಿರಿಯ ಜಾನಪದ ತಜ್ಞ ಡಾ.ಮೀರಸಾಬಿಹಳ್ಳಿ ಶಿವಣ್ಣ ಶ್ಲಾಘಿಸಿದರು.
ನಗರದ ರೋಟರಿ ಬಾಲಭವನದ ಶ್ರೀ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಪ್ರೊ. ಎಚ್.ಲಿಂಗಪ್ಪನವರ ಮಾತಂಗಿ ಕಥನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಇಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಒಂದು ಅನನ್ಯ ಸಾಂಸ್ಕೃತಿಕ ಪಠ್ಯವಾಗಿ ಮಾತಂಗಿ ಕಥನ ಮೂಡಿಬಂದಿದೆ ಎಂದರು.ಗ್ರಾಮೀಣ ಮೂಲದವರಿಗೆ ಮಾತಂಗಿ ಸಂಸ್ಕೃತಿ ಬಗ್ಗೆ ಒಂದಿಷ್ಟು ಅರಿವು, ತಿಳಿವಳಿಕೆ ಇರಬಹುದು. ಆದರೆ, ನಗರ, ಪಟ್ಟಣ ವಾಸಿಗಳಾದ ಈಗಿನ ಜನಾಂಗಕ್ಕೆ ನಮ್ಮ ಸಂಸ್ಕೃತಿ, ಪರಂಪರೆಯ ಅರಿವೇ ಇಲ್ಲದಂತಹ ಕಾಲಘಟ್ಟದಲ್ಲಿದ್ದೇವೆ. ಮಾತಂಗಿ ಕಥನದಂತಹ ಸಾಂಸ್ಕೃತಿಕ ಪಠ್ಯಗಳು ಇಂದಿನ ಸಂದರ್ಭದಲ್ಲಿ ಹೆಚ್ಚು ಅಗತ್ಯವಿದೆ. ಇಂಥದ್ದೊಂದು ಕೃತಿಯು ನಮ್ಮ ಸಂಸ್ಕೃತಿಯನ್ನು ಈಗಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಬುದ್ಧ, ಬಸವ, ಅಂಬೇಡ್ಕರ್‌ರ ಚಿಂತನೆಗಳನ್ನು ದಲಿತ ದೃಷ್ಟಿಕೋನ ಮತ್ತು ದಲಿತ ಆಯಾಮದ ಮೂಲಕ ವಿವರಿಸುವ ಪ್ರೊ. ಎಚ್.ಲಿಂಗಣ್ಣ ಸಾಹಿತ್ಯ ತನ್ನದೇ ವೈಶಿಷ್ಟ್ಯ ಹೊಂದಿದೆ. ಬುದ್ಧ, ಬಸವ, ಅಂಬೇಡ್ಕರ್ ಬಗ್ಗೆ ಹಲವಾರು ಕೃತಿಗಳು ಬಂದಿವೆ. ಅದರಲ್ಲಿ ದಲಿತ ದೃಷ್ಟಿಕೋನದ ಕೊರತೆ ಇತ್ತು. ಆದರೆ, ಪ್ರೊ.ಲಿಂಗಪ್ಪನವರು ಇಡೀ ವ್ಯಕ್ತಿತ್ವ ಮತ್ತು ಪುರಾಣವನ್ನು ಒಂದು ವಿಶಿಷ್ಟ ಆಯಾಮದಲ್ಲಿ ಕಥಾ ರೂಪದಲ್ಲಿ ಕಟ್ಟಿಕೊಡುವಂತಹ ಅದ್ಭುತ ಕೆಲಸ ಮಾಡಿರುವುದು ಗಮನಾರ್ಹ ಎಂದು ಡಾ.ಮೀರಸಾಬಿಹಳ್ಳಿ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಈಚಿನ ದಿನಗಳಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕತೆಯ ಹೆಸರಿನಲ್ಲಿ ತಮ್ಮದೇ ಆದ ಸಾಂಸ್ಕೃತಿಕ ನೆನಪುಗಳನ್ನು ಮಾಢ್ಯವೆಂದು ಕರೆಯುವ ಹೊಸ ಪ್ರವೃತ್ತಿ ಬೆಳೆದಿದೆ. ಕುಂಕುಮ, ಅರಿಷಿಣ ಅಥವಾ ಪೂಜೆಯೆಂದರೆ ಕೇವಲ ರಾಜಕೀಯ ಲಾಂಛನ ಅಥವಾ ಮೌಢ್ಯವಲ್ಲ, ಅದೊಂದು ಸಾಂಸ್ಕೃತಿಕ ಅಸ್ಮಿತೆ, ತತ್ವಶಾಸ್ತ್ರದ ಗುರುತು, ಕುಂಕುಮದ ಕೆಂಪು ಬಣ್ಣವು ಶಕ್ತಿಯನ್ನು ಸೂಚಿಸಿದರೆ, ಅರಿಷಿಣನವು ಫರ್ಟಿಲಿಟಿ ಅಥವಾ ಫಲವತ್ತತೆಯನ್ನು ಸೂಚಿಸುತ್ತವೆ ಎಂದು ಅವರು ವಿವರಿಸಿದರು.
- - -
* ಮಾದಿಗರದು ಭವ್ಯ, ದಿವ್ಯ ಇತಿಹಾಸ ಮಾದಿಗ ಸಮುದಾಯಕ್ಕೆ ಅತ್ಯಂತ ಭವ್ಯ, ದಿವ್ಯ ಇತಿಹಾಸ, ಪರಂಪರೆಯೇ ಇದೆ. ಆದರೆ, ಇಂದು ಸಮುದಾಯದಲ್ಲಿ ಒಂದು ರೀತಿಯ ಸಾಂಸ್ಕೃತಿಕ ಮರೆವು ಅಥವಾ ವಿಸ್ಮರಣೆ ಆವರಿಸಿದೆ. ಇಷ್ಟು ದೊಡ್ಡ ಇತಿಹಾಸ, ಮಹಾಪುರುಷರು, ಸಾಧಕರನ್ನು ಹೊಂದಿರುವ ಸಮಾಜ ಇಂದು ಕೇವಲ ಒಳ ಮೀಸಲಾತಿಗಾಗಿ ಹೋರಾಟ, ಸಂಘರ್ಷದ ಹಾದಿ ಹಿಡಿಯಬೇಕಾಗಿ ಬಂದಿರುವುದು ಅತ್ಯಂತ ವಿಷಾದನೀಯ ಸಂಗತಿ.
- - -
- ಡಾ. ಬಿ.ವಿ.ವಸಂತಕುಮಾರ, ಹಿರಿಯ ಲೇಖಕ, ಸಂಸ್ಕೃತಿ ಚಿಂತಕ, ಮೈಸೂರು.
- - --19ಕೆಡಿವಿಜಿ1, 2, 3: ದಾವಣಗೆರೆಯಲ್ಲಿ ಭಾನುವಾರ ಕರ್ನಾಟಕ ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಪ್ರೊ. ಎಚ್.ಲಿಂಗಪ್ಪನವರ ಮಾತಂಗಿ ಕಥನ ಪುಸ್ತಕವನ್ನು ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಇತರ ಗಣ್ಯರು ಬಿಡುಗಡೆಗೊಳಿಸಿದರು.