ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಭಜನಾ ಪದ ಹೇಳುವ ಮೂಲಕ ಭಾನುವಾರ ರೈತರು ಗಮನ ಸೆಳೆದರು.
ಹಾವೇರಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಭಜನಾ ಪದ ಹೇಳುವ ಮೂಲಕ ಭಾನುವಾರ ರೈತರು ಗಮನ ಸೆಳೆದರು.
ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನ, ಬೆಳೆವಿಮೆ, ಬೆಳೆ ನಷ್ಟ ಪರಿಹಾರ ಹಾಗೂ ನಬಾರ್ಡ್ ಸಾಲ ಮುಂದುವರಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ರೈತರು ಶನಿವಾರದಿಂದ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಂಡಿದ್ದು, ಭಾನುವಾರ ಹಾವೇರಿ ತಾಲೂಕಿನ ರೈತರು ಆಗಮಿಸಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ತಾಲೂಕಿನ ಕನವಳ್ಳಿ ಗ್ರಾಮದ ರೈತರು ಭಜನಾ ಪದ ಹಾಡಿದರು. ಪ್ರತಿಭಟನಾ ಸ್ಥಳಕ್ಕೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು. ಸೋಮವಾರ ಕೃಷಿ ಸಚಿವರು ಹಾಗೂ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ, ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು. ಆದರೆ, ತಮ್ಮ ಬೇಡಿಕೆ ಈಡೇರಿಸದೇ ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ರೈತರು ಪಟ್ಟು ಮುಂದುವರಿಸಿದರು.
ಜಿಲ್ಲೆಯ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ತಾರತಮ್ಯ ಆಗಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಬೆಳೆವಿಮೆ ಹಣ ಹಾಕದೇ ಬೆಳೆವಿಮೆ ಕಂಪನಿಯವರು ರೈತರಿಗೆ ಅನ್ಯಾಯ ಮಾಡಿದ್ದು, ಕೂಡಲೇ ಜಿಲ್ಲಾಡಳಿತ ಬೆಳೆ ವಿಮೆ ತುಂಬಿಸಿಕೊಂಡ ಕಂಪನಿಯವರನ್ನು ಕರೆಸಿ ಲೆಕ್ಕಾಚಾರ ಮಾಡಿಸಿ, ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ರೈತರು ಆಗ್ರಹಿಸಿದರು. ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ನಮ್ಮ ಪ್ರಮುಖ ಬೇಡಿಕೆಯಾಗಿದ್ದು ಇದರಿಂದ ಹಾವೇರಿ ಜಿಲ್ಲೆಯಲ್ಲಿ ವರ್ಷವಿಡೀ ನೀರಾವರಿ ಮಾಡಬಹುದಾಗಿದೆ. ವ್ಯರ್ಥವಾಗಿ ಹರಿಯುವ ನೀರನ್ನು ಇಲ್ಲಿಗೆ ತಂದರೆ ಈ ಭಾಗದಲ್ಲಿ ರೈತರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಮಂಜುನಾಥ ಕದಂ, ಶಿವಯೋಗಿ ಹೊಸಗೌಡ್ರ, ಸುರೇಶ ಚಲವಾದಿ, ಶಿವಬಸಪ್ಪ ಗೋವಿ, ರಾಜು ತರ್ಲಘಟ್ಟ, ಜಾನ್ ಪುನೀತ್, ನಂಜುಂಡಯ್ಯ ಹಾವೇರಿಮಠ, ದಾನಪ್ಪ ಬಳ್ಳಾರಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.