ರಾಮನಗರ:
ರಾಮದೇವರ ಬೆಟ್ಟವನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಸಂಬಂಧ ಬೆಟ್ಟ ಹತ್ತಿ ಶ್ರೀರಾಮನ ದರ್ಶನ ಪಡೆದ ಶಾಸಕರು, ಮೂಲಭೂತ ಸೌಕರ್ಯಗಳ ವಸ್ತುಸ್ಥಿತಿಯನ್ನು ವೀಕ್ಷಿಸಿದರು. ಅಲ್ಲದೆ, ರಾಮಗಿರಿ ಸೇವಾ ಟ್ರಸ್ಟ್ ಪ್ರಮುಖರಿಂದ ಅಹವಾಲುಗಳನ್ನು ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಮದೇವರ ಬೆಟ್ಟದಲ್ಲಿ ಶ್ರೀ ರಾಮನ ಪ್ರತಿಮೆಯನ್ನು ನಿರ್ಮಿಸಲು ಈಗಾಗಲೇ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಬಳಿ ಮನವಿ ಮಾಡಿದ್ದೇವೆ. ಸದ್ಯಕ್ಕೆ ರಾಮದೇವರ ಬೆಟ್ಟ ಹಾಗೂ ರೇವಣಸಿದ್ದೇಶ್ವರ ಬೆಟ್ಟದ ಅಭಿವೃದ್ಧಿಗಾಗಿ ಸರ್ಕಾರ 4 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೆಂದು ಗಣೇಶ್ ಭಟ್ಟರು ಕೆತ್ತಿರುವ ಬಾಲರಾಮನ ಮೂರ್ತಿಯನ್ನು ರಾಮನ ದೇವರ ಬೆಟ್ಟದಲ್ಲಿ ಪ್ರತಿಷ್ಠಾಪಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.ರಾಮದೇವರ ಬೆಟ್ಟದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಸಾರ್ವಜನಿಕರು, ಪ್ರವಾಸಿಗಳು, ಭಕ್ತಾಧಿಗಳಿಂದ ಸಾಕಷ್ಟು ಅಹವಾಲುಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಪರಿಶೀಲಿಸಿ ರಸ್ತೆ ಅಭಿವೃದ್ಧಿ, ಮಹಿಳೆಯರಿಗೆ ಸೂಕ್ತವಾದ ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶೀಘ್ರದಲ್ಲೆ ಕೆಲಸಗಳನ್ನು ಆರಂಭಿಸುತ್ತೇವೆ ಎಂದು ಹೇಳಿದರು.
ಜಿಲ್ಲೆಯ ಹೆಸರು ಬದಲಾವಣೆಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆ ರಾಮನಗರ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದೀರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಬಾಲ್ಯದಿಂದಲೂ ರಾಮನ ಆರಾಧನೆ ಮಾಡಿಕೊಂಡೇ ಬೆಳೆದಿದ್ದೇವೆ. ರಾಮನ ಹೆಸರು ಹೇಳಿಕೊಂಡು ರಾಜಕೀಯ ಮಾಡುವ ಅಗತ್ಯ ನಮಗಿಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.
ಅಭಿವೃದ್ಧಿಯ ದೂರದೃಷ್ಟಿಯಿಂದ ರಾಮನಗರ ಜಿಲ್ಲೆಯನ್ನು ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲಾಗಿದೆ. ಆದರೆ ರಾಮನಗರ ಜಿಲ್ಲಾ ಕೇಂದ್ರವಾಗಿಯೇ ಇರಲಿದೆ. ರಾಮನಗರ ತಾಲೂಕಿನ, ರಾಮನಗರದ ಹೆಸರನ್ನು ಯಾವುದೇ ಕಾರಣಕ್ಕೂ ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅದು ಅಸಾಧ್ಯ. ಆದರೆ ವಿರೋಧ ಪಕ್ಷಗಳು ಈ ಬಗ್ಗೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೋಮು ವಿಷ ಬೀಜ ಭಿತ್ತಿ ಕೆಟ್ಟ ರಾಜಕೀಯ ಮಾಡಲು ಕುತಂತ್ರ ಮಾಡುತ್ತಿದ್ದಾರೆ ಎಂದು ಇಕ್ಬಾಲ್ ಹುಸೇನ್ ತಿರುಗೇಟು ನೀಡಿದರು.
ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ