ನಾಗೇಂದ್ರ ಜೆ. ಕನ್ನಡಪ್ರಭ ವಾರ್ತೆ ಪಾವಗಡ
ಐತಿಹಾಸಿಕ ಹಿನ್ನೆಲೆಯ ತಾಲೂಕಿನ ನಿಡಗಲ್ ದುರ್ಗದ ಬೆಟ್ಟದ ಕೆಳಭಾಗದ ಅರಣ್ಯ ವ್ಯಾಪ್ತಿಯ ವಿಶಾಲ ಭೂ ಪ್ರದೇಶದಲ್ಲಿ ಉದ್ದನೆಯ ಅಣೆಕಟ್ಟು ನಿರ್ಮಿಸಿ ಕೆರೆಗಳಿಗೆ ತುಂಬಿಸುವ ಭದ್ರಾ ಮೇಲ್ದಂಡೆ ಯೋಜನೆಯ ನೀರು ಸರಬರಾಜು ಕಲ್ಪಿಸಿದರೆ ನೀರಾವರಿ ಬೆಳೆಗೆ ಹೆಚ್ಚು ಅನುಕೂಲವಾಗಲಿದೆ.ಪಾವಗಡ ತಾಲೂಕು ನಿಡಗಲ್ ದುರ್ಗ ಹಾಗೂ ಬೆಟ್ಟ ಐತಿಹಾಸಿಕ ಹಿನ್ನಲೆ ಹೊಂದಿದ್ದು, ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಇಲ್ಲಿನ ಜನತೆಯ ಒತ್ತಾಸೆ ಮೇರೆಗೆ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು. ಈಗಾಗಲೇ ಈ ಸಂಬಂಧ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಲು ಇಲ್ಲಿನ ಅನೇಕ ಸಂಘ ಸಂಸ್ಥೆಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಪರಿಶೀಲನೆ ಕಾರ್ಯ ನಡೆಯಬೇಕಿದ್ದು ಇದರ ಬೆನ್ನಲ್ಲೇ ತಾಲೂಕಿನ ಎಸ್‌ಆರ್ ಪಾಳ್ಯದಿಂದ ನಿಡಗಲ್ ಗ್ರಾಮದ ರಸ್ತೆ ಮಾರ್ಗವಾಗಿ ನಿಡಗಲ್ ಬೆಟ್ಟಕ್ಕೆ ತೆರಳುವ ಬಲಬದಿಗೆ ತಗ್ಗಿನಲ್ಲಿ ಹೆಚ್ಚಿನ ಭೂ ಪ್ರದೇಶವಿದೆ . ಈ ಸ್ಥಳ ಪರಿಶೀಲನೆ ನಡೆಸುವ ಮೂಲಕ ಸರ್ಕಾರದ ಅನುದಾನದಲ್ಲಿ ಎತ್ತರ ಹಾಗೂ ಉದ್ದದ ಅಣೆಕಟ್ಟೆ ನಿರ್ಮಿಸಿ ಪೈಪ್‌ಲೈನ್ ಮೂಲಕ ಭದ್ರಾ ಮೇಲ್ದಂಡೆ ಯೋಜನೆಯ ನೀರು ತುಂಬಿಸಿದರೆ, ಕೊಳವೆಬಾವಿಯ ಅಂತರ್ಜಲ ಹೆಚ್ಚಳದಿಂದ ಈ ಭಾಗದ ಸಾವಿರಾರು ಹೆಕ್ಟೇರು ಜಮೀನುಗಳ ವ್ಯವಸಾಯಕ್ಕೆ ಯೋಗ್ಯವಾಗಲಿದೆ. ಇದರಿಂದ ರೈತಾಪಿಗಳ ಜೀವನ ಸುಧಾರಣೆ ಕಾಣಲು ಸಾಧ್ಯವಾಗಲಿದೆ. ಜತೆಗೆ ನಿಡಗಲ್ ಬೆಟ್ಟದಲ್ಲಿ ಸೌಂದರ್ಯ ಹಾಗೂ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಕುಡಿಯುವ ನೀರು ಮತ್ತು ದೇವಸ್ಥಾನಗಳಿಗೆ ತೆರಳುವ ಭಕ್ತರಿಗೆ ಸ್ನಾನ ಹಾಗೂ ಅಡುಗೆಗೆ ಹೆಚ್ಚು ಸಹಕಾರಿಯಾಗಲಿದೆ. ಇಲ್ಲಿನ ಪ್ರಾಣಿ ಪಕ್ಷಿ ಹಾಗೂ ಕರಡಿ, ಜಿಂಕೆ ನವಿಲು ಇತರೆ ಅನೇಕ ರೀತಿಯ ವನ್ಯಜೀವಿಗಳ ಕುಡಿಯುವ ನೀರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ನಿಡಗಲ್ ಬೆಟ್ಟದ ತಗ್ಗುಪ್ರದೇಶದಲ್ಲಿ ಆಣೆಕಟ್ಟೆ ನಿರ್ಮಾಣ ಸಾಧ್ಯವಾಗಲಿದ್ದು ಶಾಸಕ ಎಚ್.ವಿ.ವೆಂಕಟೇಶ್ ಅವರು ಇಂತಹ ಉತ್ತಮ ಕೆಲಸಕ್ಕೆ ಮುಂದಾಗಬೇಕಿದೆ. ಬಾಕ್ಸ್...
ರಾಜಮಹಾರಾಜರ ಆಳ್ವಿಕೆಗೆ ಒಳಪಟ್ಟಿದ್ದ ನಿಡಗಲ್ ಬೆಟ್ಟ ಐತಿಹಾಸಿಕ ಹಿನ್ನಲೆ ಹೊಂದಿದೆ. ಇಲ್ಲಿನ ಬೆಟ್ಟದಲ್ಲಿ ಸಾವಿರಾರು ದೇಗುಲಗಳಿದ್ದು ಒಂದೊಂದು ವಿಗ್ರಹವು ಇಲ್ಲಿನ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತಿವೆ. ಅತಿ ಎತ್ತರ ಮತ್ತು ಸಾವಿರಾರು ಎಕರೆ ಪ್ರದೇಶದಲ್ಲಿ ಈ ಬೆಟ್ಟ ವ್ಯಾಪಕವಾಗಿದೆ. ಬೆಟ್ಟದ ತಗ್ಗುಪ್ರದೇಶದಲ್ಲಿ ಅರಣ್ಯ ಪ್ರದೇಶದಿಂದ ವ್ಯಾಪಿಸಿಕೊಂಡಿದ್ದು ವಿಶಾಲವಾದ ಭೂಪ್ರದೇಶವಿದೆ. ಇದರ ಕೆಳ ಭಾಗದ ಚಿಕ್ಕತಿಮ್ಮನಹಟ್ಟಿ, ನ್ಯಾಯದಗುಂಟೆ, ಕೋಡಿಗೇನಹಳ್ಳಿ, ಗುಜ್ಜಾರಹಳ್ಳಿ, ಎಸ್ ಆರ್ ಪಾಳ್ಯ ಇತರೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಾವಿರಾರು ಎಕರೆ ರೈತರ ಜಮೀನುಗಳಿದ್ದು, ಮಳೆಗಾಲದ ಬೆಳೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಅಲ್ಲಲ್ಲಿ ನೀರಾವರಿಯ ತೋಟಗಾರಿಕೆ ಬೆಳೆಗಳಿದ್ದು ಕೊಳವೆ ಬಾವಿಗಳ ನೀರಿನ ಅಭಾವದಿಂದ ನಿರೀಕ್ಷಿತ ಬೆಳೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಂತರ್ಜಲ ಹೆಚ್ಚಳ ಹಾಗೂ ರೈತರ ನೀರಾವರಿ ಬೆಳೆಯ ಪ್ರಗತಿಗೆ ಕೆರೆಗಳಿಗೆ ನೀರು ತುಂಬಿಸಲು ಆನೇಕ ವರ್ಷದಿಂದ ಭದ್ರಾಮೇಲ್ದಂಡೆ ಯೋಜನೆಯ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಕೋಟ್...ದೊಡ್ಡೇನಹಳ್ಳಿ ಹಾಗೂ ಇತರೆ ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿ ಹಾದುಹೋಗುವ ಭದ್ರಾ ನೀರು ಸರಬರಾಜ ಮಾರ್ಗದ ಪೈಪ್ ಲೈನ್‌ಗೆ ಸಂಪರ್ಕ ಕಲ್ಲಿಸಿ, ಇಲ್ಲಿಂದ ಕೇವಲ 6 ಕಿಮೀ ದೂರದ ನಿಡಗಲ್ ಬೆಟ್ಟದ ತಗ್ಗುಪ್ರದೇಶಲ್ಲಿ ಅಣೆಕಟ್ಟೆಗೆ ಭದ್ರಾಯೋಜನೆಯ ನೀರು ತುಂಬಿಸಿದರೆ, ಈ ಭಾಗದ ಸಾವಿರಾರು ಮಂದಿ ರೈತರ ನೀರಾವರಿಗೆ ಹೆಚ್ಚು ಅನುಕೂಲವಾಗಲಿದೆ. ಈ ಬಗ್ಗೆ ಮಾಜಿ ಸಚಿವ ವೆಂಕಟರಮಣಪ್ಪ, ಈ ಭಾಗದ ಸಂಸದ ಗೋವಿಂದ ಕಾರಜೋಳ ಹಾಗೂ ಶಾಸಕ ಎಚ್.ವಿ.ವೆಂಕಟೇಶ್ ಇತರೆ ಜನಪ್ರತಿನಿಧಿಗಳು ಆಸಕ್ತಿವಹಿಸುವುದು ಸೂಕ್ತ.
ಎಸ್.ಎನ್.ಪ್ರಸನ್ನಮೂರ್ತಿ, ಹಿರಿಯ ಪತ್ರಕರ್ತ.ಕೋಟ್
ತಾಲೂಕಿನ ನಿಡಗಲ್ ಬೆಟ್ಟದ ತಪ್ಪಲಿನಲ್ಲಿ ಅಣೆಕಟ್ಟೆ ನಿರ್ಮಿಸಿ. ಭದ್ರಾ ಯೋಜನೆಯ ನೀರು ಸರಬರಾಜ್ ಮಾಡಿದರೆ, ಅಂತರ್ಜಲ ಹೆಚ್ಚಳವಾಗಿ ಈ ಭಾಗದ ಗ್ರಾಮೀಣ ರೈತರ ನೀರಾವರಿ ಬೆಳೆಗೆ ಅನುಕೂಲವಾಗಲಿದೆ. ಈ ಭಾಗದ ಸಂಸದರು, ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಸರ್ಕಾರದ ಜತೆ ಚರ್ಚಿಸಿ ಅನುಕೂಲ ಕಲ್ಪಿಸಿದರೆ ರೈತರಿಗೆ ಸಹಕಾರಿ ಹಾಗೂ ಶಾಶ್ವತವಾಗಿ ಜನಪ್ರತಿನಿಧಿಗಳ ಹೆಸರು ಉಳಿಯಲಿದೆ.----ದೊಡ್ಡಹಟ್ಟಿ ಪೂಜಾರಪ್ಪ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ.