ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಬಡ ಜನರಿಗೆ ಸೂಕ್ತ ಚಿಕಿತ್ಸೆ ಸಿಗದೇ ನರಳುತ್ತಿದ್ದಾರೆ. ಹೆರಿಗೆ ಪ್ರಕರಣಗಳು ಸರಿಯಾಗಿ ನಿರ್ವಹಿಸುತ್ತಿಲ್ಲ, ಬಡ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಬಡ ಜನರಿಗೆ ನೇರವಿಗೆ ಬರಬೇಕಾದ ತಾಲೂಕ ಆರೋಗ್ಯಾಧಿಕಾರಿ ಅಹಂ ಪ್ರದರ್ಶನ ಮಾಡುವುದಲ್ಲ ಜನಸೇವೆ ಮಾಡಿ ಎಂದು ಶಾಸಕ ಮಾನಪ್ಪ ವಜ್ಜಲ್ ತಾಲೂಕ ಆರೋಗ್ಯಧಿಕಾರಿ ವಿರುದ್ಧ ಹರಿಹಾಯ್ದರು.ಪಟ್ಟಣದ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಅಮರೇಶ ಪಾಟೀಲ್‌ರನ್ನು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಳ್ಳುವ ಜೊತೆಗೆ ಬುದ್ದಿ ಮಾತುಗಳು ಹೇಳಿದರು.
ಜನರಿಗೆ ಆರೋಗ್ಯ ಸೇವೆ ಸಿಗುತ್ತಿಲ್ಲ, ಇತ್ತಿಚೀಗೆ ಬಡ ಮಹಿಳೆ ಹೆರಿಗೆ ಮಾಡಿಸಿಕೊಳ್ಳಲು ಆಗದೇ ಪರಿತಪಿಸುತ್ತಿದ್ದಳು ಕೈಯ್ಯಾರೆ ದುಡ್ಡು ಕೊಟ್ಟು ಹೆರಿಗೆ ಮಾಡಿಸಿದ್ದೇನೆ. ನಿಮಗೆ ಪೋನ್ ಕರೆ ಮಾಡಿದರು ಸ್ವೀಕರಿಸುವುದಿಲ್ಲ. ಆರೋಗ್ಯ ಇಲಾಖೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕರೆದರು ನೀವು ಬರುವುದಿಲ್ಲ ಹೀಗಾಗದರೆ ಕ್ಷೇತ್ರದಲ್ಲಿ ಜನರ ಆರೋಗ್ಯ ಕಾಪಾಡುವವವರು ಯಾರು?. ಕನಿಷ್ಠ ಸ್ವಂತ ತಾಲೂಕ ಎಂಬ ಅಭಿಮಾನದಿಂದಲೂ ನಿಮಗೇ ಕೆಲಸ ಮಾಡಲು ಆಗುವುದಿಲ್ಲ ಎಂದರೆ ನಿವೇಕೆ ಇಲ್ಲಿ ಇರಬೇಕು?. ಶಾಸಕರ ಕರೆ ಸ್ವೀಕರಿಸುವುದಿಲ್ಲ ಎಂದರೆ ಇನ್ನೂ ಸಾಮಾನ್ಯ ಜನರ ಪಾಡೇನು. ಅಧಿಕಾರಿಯಾದವರಿಗೆ ಇಷ್ಟೊಂದು ಅಹಂ, ಪ್ರತಿಷ್ಟೆ ಇದ್ದರೆ ಒಳ್ಳೆಯದಲ್ಲ ಎಂದು ಛೇಡಿಸಿದರು.ತಾಲೂಕ ಆರೋಗ್ಯಾಧಿಕಾರಿ ಮೇಲೆ ಕ್ರಮಕೈಗೊಳ್ಳುವ ಕುರಿತು ಸಭೆಯಲ್ಲಿ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ತಾಲೂಕ ಪಂಚಾಯಿತಿ ಇಒ ಅಮರೇಶ ಯಾದವ್ ಹಾಗೂ ಯೋಜನಾ ನಿರ್ದೇಶಕ ಡಾ.ರೋಣಿಯವರಿಗೆ ತಾಕೀತು ಮಾಡಿದರು.
ಸಭೆಯಲ್ಲಿ ತಹಸೀಲ್ದಾರ ಬಸವರಾಜ ಜಳಕಿಮಠ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸ್ಸಣ್ಣ ಮೇಟಿ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಇದ್ದರು.