ಶಿಕ್ಷಕರು ಪಾಠ ಮಾಡದೇ ನಮ್ಮ ಉತ್ತರ ಪತ್ರಿಕೆ ಮನೆಗೆ ಕಳುಹಿಸಿದ್ದಾರೆಂದು ಪೋಷಕರ ಆರೋಪ ಕನ್ನಡಪ್ರಭ ವಾರ್ತೆ ತುರುವೇಕೆರೆ
ಸರ್ಕಾರಿ ಶಾಲೆಗಳೆಂದರೆ ಜನರು ಮೂಗು ಮುರಿಯುವ ಈ ಕಾಲದಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡದೆ ಮಕ್ಕಳನ್ನು ಕೂಪಕ್ಕೆ ದೂಡುತ್ತಿರುವ ಘಟನೆ ತಂಡಗದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದಿದೆ. ಇಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಕೇವಲ ೪೨ ಮಕ್ಕಳು ಇವೆ. ನಾಲ್ಕು ಮಂದಿ ಶಿಕ್ಷಕರು ಇದ್ದಾರೆ. ಆದರೂ ಸಹ ಇಲ್ಲಿಯ ಮಕ್ಕಳಿಗೆ ಸರಿಯಾಗಿ ವ್ಯಾಕರಣ ಬರುವುದಿಲ್ಲ. ಮಗ್ಗಿ ಬರುವುದಿಲ್ಲ. ಇಂಗ್ಲಿಷ್ ದೇವರೇ ಬಲ್ಲ. ಗಣಿತ ಬಗ್ಗೆ ಕೇಳುವ ಹಾಗೇ ಇಲ್ಲ. ಪಠ್ಯದಲ್ಲಿರುವ ಪಾಠಗಳನ್ನು ಸಂಪೂರ್ಣವಾಗಿ ಮಾಡೇ ಇಲ್ಲ. ಹಾಗಾಗಿ ಈ ಶಾಲೆಯ ಶಿಕ್ಷಕರು ಮಕ್ಕಳಿಗೆ ಪರೀಕ್ಷೆಯಲ್ಲಿ ಉತ್ತರವನ್ನು ಅವರೇ ಬರೆಸಿ ಮುಂದಿನ ತರಗತಿಗೆ ಕಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಉತ್ತರ ಪತ್ರಿಕೆ ಮನೆಗೆ:ಸೋಮವಾರ ಶಾಲೆಯಲ್ಲಿ ನಾಲ್ಕನೇ ತರಗತಿಯ ಪರೀಕ್ಷೆ ಇತ್ತು. ಹಲವಾರು ಪಾಠಗಳು ಮಾಡದ ಹಿನ್ನೆಲೆಯಲ್ಲಿ ಮನೆಗೇ ಉತ್ತರ ಪತ್ರಿಕೆಯನ್ನು ಕಳಿಸಿ ಮನೆಯಲ್ಲಿ ಉತ್ತರ ಬರೆದುಕೊಂಡು ಬರಲು ಶಿಕ್ಷಕರು ಹೇಳಿದ್ದಾರೆ. ಮಕ್ಕಳು ಪ್ರಶ್ನಾವಳಿ ಹಾಳೆಯ ಜೊತೆ ಉತ್ತರ ಪತ್ರಿಕೆಯನ್ನೂ ಮನೆಗೆ ತಂದಾಗ ಪೋಷಕರು ಹೌಹಾರಿದ್ದಾರೆ. ಪೋಷಕರು ಮಕ್ಕಳನ್ನು ವಿಚಾರಣೆ ಮಾಡಿದಾಗಲೇ ಶಿಕ್ಷಕರ ಬಂಡವಾಳ ಬಯಲಾಗಿದೆ.
ಸುಮಾರು ೧೫೦ ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ನಮ್ಮೂರಲ್ಲಿ ಸರ್ಕಾರಿ ಶಾಲೆಯನ್ನು ಕಳೆದುಕೊಳ್ಳಬಾರದೆಂಬ ಕಾರಣಕ್ಕೆ ಊರಿನವರ ಮನವೊಲಿಸಿ ಈ ಶಾಲೆಗೆ ಮಕ್ಕಳನ್ನು ಸೇರಿಸಿದೆವು. ಈಗ ಈ ಶಿಕ್ಷಕರುಗಳು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದಾರೆಂದು ಆರೋಪಿಸಿ ಗ್ರಾಮಸ್ಥರು ಮತ್ತು ಮಕ್ಕಳ ಪೋಷಕರು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿ, ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಟಿಸಿ ಕೊಡಿ - ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆಂಬ ವಿಷಯ ತಿಳಿದ ಬಿಇಓ ಸೋಮಶೇಖರ್ ರವರು ಕೂಡಲೇ ಕ್ಷೇತ್ರ ಸಂಪನ್ಮೂಲಾಧಿಕಾರಿಗಳಾದ ವೀಣಾ ರವರನ್ನು ಹಾಗು ಸಿಆರ್‌ಪಿ ಲೋಕೇಶ್ ಸೇರಿದಂತೆ ಇತರೆ ಸಿಬ್ಬಂದಿಯನ್ನು ಕಳಿಸಿದರು. ಈ ಸಂಧರ್ಭದಲ್ಲಿ ಪೋಷಕರು ಮುಖ್ಯ ಶಿಕ್ಷಕ, ಸಹ ಶಿಕ್ಷಕರ ಆರೋಪಗಳ ಸುರಿಮಳೆಗೈದರು. ಇಲ್ಲಿಂದ ನಾಲ್ಕು ಶಿಕ್ಷಕರನ್ನು ಎತ್ತಂಗಡಿ ಮಾಡಿ ಬೇರೆ ಶಿಕ್ಷಕರನ್ನು ನೇಮಿಸಬೇಕೆಂದು ಆಗ್ರಹಿಸಿದರು. ತಪ್ಪಿದಲ್ಲಿ ನಮ್ಮ ಮಕ್ಕಳ ಟಿಸಿ ಕೊಟ್ಟುಬಿಡಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗುಡಿಗೌಡರಾದ ಸತೀಶ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಮೇಶ್, ಸದಸ್ಯರಾದ ಚಂದ್ರಶೇಖರ್, ಬಸವರಾಜು, ಓಂಕಾರಾಚಾರ್, ಜಬಿಬುಲ್ಲಾ, ಸಂತೋಷ್, ಸಚಿನ್, ಗುರುಮೂರ್ತಿ, ಶಿವಕುಮಾರ್, ಯೋಗಾನಂದಮೂರ್ತಿ, ರಂಗಸ್ವಾಮಿ, ಮಂಗಳಗೌರಿ, ಆಶಾ ಸೇರಿದಂತೆ ಹಲವರು ಇದ್ದರು.