ದೇವಾಲಯ ಅಂತರಂಗ ಶುದ್ಧಿಯ ಆಲಯ: ಶಾಂತಮಲ್ಲಿಕಾರ್ಜುನ ಸ್ವಾಮೀಜಿ

KannadaprabhaNewsNetwork |  
Published : Apr 16, 2026, 02:45 AM IST
ಹೊಸಪಟ್ಟಣ ಗ್ರಾಮದೈವ ಬಸವೇಶ್ವರ ಕನ್ನಂಬಾಡಮ್ಮ ದೇವರ ಪೂಜೋತ್ಸವ | Kannada Prabha

ಸಾರಾಂಶ

ದೇವಾಲಯ ಹಾಗೂ ಮಠ ಮಂದಿರಗಳು ಮನುಷ್ಯನ ಅಂತರಂಗ ಶುದ್ಧಿಯ ಆಲಯಗಳಾಗಿವೆ ಎಂದು ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಕನ್ನಡಪ್ರಭವಾರ್ತೆ ಕುಶಾಲನಗರ

ದೇವಾಲಯ ಹಾಗೂ ಮಠ ಮಂದಿರಗಳು ಮನುಷ್ಯನ ಅಂತರಂಗ ಶುದ್ಧಿಯ ಆಲಯಗಳಾಗಿವೆ ಎಂದು ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಹೊಸಪಟ್ಟಣ ಗ್ರಾಮದ ಶ್ರೀ ಬಸವೇಶ್ವರ ಹಾಗೂ ಕನ್ನಂಬಾಡಮ್ಮ ದೇವರ ವಾರ್ಷಿಕ ಪೂಜೋತ್ಸವದಲ್ಲಿ ಭಾಗಿಯಾಗಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯ ಏನೆಲ್ಲಾ ಗಳಿಸಿದರೂ ಕೂಡ ಮಾನಸಿಕ ಶಾಂತಿ ನೆಮ್ಮದಿ ಪಡೆಯಲು ದೇವಾಲಯಗಳಿಗೆ ಬರಬೇಕಿದೆ. ಪೂರ್ವಜರು ಆಚರಿಸಿಕೊಂಡು ಬಂದ ಗ್ರಾಮೀಣ ಹಬ್ಬಗಳು, ದೇವರ ಪೂಜೋತ್ಸವಗಳನ್ನು ಮುಂದಿನ ಪೀಳಿಗೆಗೂ ಜತನದಿಂದ ಒಯ್ಯುವುದೇ ಭಾರತೀಯ ಸಂಸ್ಕೃತಿಯ ಸೌಂದರ್ಯ ಎಂದು ಶ್ರೀಗಳು ಹೇಳಿದರು.

ಸೋಮವಾರ ಸಂಜೆಯಿಂದ ಆರಂಭವಾದ ದೇವತಾ ಪೂಜೋತ್ಸವ ಮಂಗಳವಾರ ಮಧ್ಯಾಹ್ನ ಸಮಾಪ್ತಿಗೊಂಡಿತು. ಮಂಗಳವಾರ ಬೆಳಗ್ಗೆ ವಾದ್ಯಮೇಳ, ಅಲಂಕೃತ ದೇವರುಗಳ ಪಲ್ಲಕ್ಕಿಯೊಂದಿಗೆ ಗ್ರಾಮದ ಕಾವೇರಿ ನದಿಗೆ ತೆರಳಿ ಗಂಗಾ ಸ್ನಾನ ನೆರವೇರಿಸಲಾಯಿತು.

ಇದೇ ಸಂದರ್ಭ ಹೊಳೆನರಸೀಪುರ ತಾಲ್ಲೂಕಿನ ಉದ್ದೂರು ಗ್ರಾಮದ ವೀರಗಾಸೆ ಕಲಾವಿದರಾದ ರವಿಕುಮಾರ ತಂಡದಿಂದ ಆಕರ್ಷಕವಾದ ವೀರಭದ್ರ ನೃತ್ಯ ಭಕ್ತರನ್ನು ಆಕರ್ಷಿಸಿತು.ಬಳಿಕ ಮಧ್ಯಾಹ್ನ 12 ಗಂಟೆಗೆ ದೇವಾಲಯದ ಮುಂಬದಿ ಅಳವಡಿಸಿದ್ದ ಕೊಂಡೋತ್ಸವದ ಪೂಜೆಯ ಬಳಿಕ ದೇವತಾ ಮೂರ್ತಿಗಳ ಉತ್ಸವ ಗಳನ್ನು ಹೊತ್ತ ಭಕ್ತರು ಬರಿಗಾಲಲ್ಲಿ ಕೆಂಡ ತುಳಿದು ಭಕ್ತಿ ಸಮರ್ಪಿಸಿದರು.ನಂತರ ಮಹಾಮಂಗಳಾರತಿ ಯೊಂದಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಿತು. ಮೈಸೂರಿನ ಕೆ‌.ಎಸ್.ದಿನೇಶ್ ಶಾಸ್ತ್ರಿ ನೇತೃತ್ವದ ತಂಡ ದೇವಾಲಯದ ಧಾರ್ಮಿಕ ವಿಧಿಗಳನ್ನು ನಡೆಸಿತು.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷೆ ಪೂರ್ಣಿಮಾ ಶಿವಕುಮಾರ್, ಉಪಾಧ್ಯಕ್ಷ ಅಯ್ಯಂಡ್ರ ಜಯಾನಂದ, ಕಾರ್ಯದರ್ಶಿ ತೇಜಸ್, ಖಜಾಂಚಿ ಸುಖೇಶ್, ಅರ್ಚಕ ಎಸ್.ಎಸ್.ಜಯರಾಜು, ನಿರ್ದೇಶಕರಾದ ತುಂತಜ್ಜಿರ ಡಾಲೇಶ್, ನೇಣಿರ ನವೀನ್ ಕುಮಾರ್, ಎಸ್.ಎಸ್.ಚಂದ್ರಶೇಖರ್, ಹೆಚ್.ಆರ್.ಶಿವಕುಮಾರ್, ಹೆಚ್.ವಿ.ಚಂದ್ರು, ಮಾಡಂಬಿ ಷಣ್ಮುಖ, ಎಂ.ಆರ್.ಮಹೇಶ್, ಶಿವಕುಮಾರ್ ಮೊದಲಾದವರಿದ್ದರು.ಹೆಜ್ಜೇನು ದಾಳಿ ಓಡಿದ ಭಕ್ತರು: ಗಂಗಾ ಪೂಜೆ ಸಂದರ್ಭ ಕಾವೇರಿ ನದಿಯಲ್ಲಿ ದಿಢೀರನೆ ಪ್ರತ್ಯಕ್ಷಗೊಂಡ ಹೆಜ್ಜೇನು ಹಿಂಡು ಭಕ್ತರಿಗೆ ಕಚ್ಚಿ ಗಾಯಗೊಳಿಸಿದ ಪ್ರಸಂಗ ನಡೆಯಿತು. ಅದೃಷ್ಟವಶಾತ್ ಯಾರಿಗೂ ಮಾರಣಾಂತಿಕ ಗಾಯವಾಗಿಲ್ಲ. ಹೆಜ್ಜೇನು ಹಿಂಡು ಕಂಡೊಡನೆ ಭಕ್ತಾದಿಗಳು ಸ್ಥಳದಿಂದ ಓಡಿ ಪಾರಾದರು ಎಂದು ಸ್ಥಳೀಯರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾಯ ದೇವಳಕ್ಕೆ ನೂತನ ಬ್ರಹ್ಮರಥ ಪುರಪ್ರವೇಶ
11 ಕೋಟಿ ರು. ವೆಚ್ಚದಲ್ಲಿ ಕೈಗಾರಿಕಾ ಪ್ರದೇಶ ಹೆದ್ದಾರಿ ಸಂಪರ್ಕ ರಸ್ತೆ ಅಭಿವೃದ್ಧಿ