ಹೊಸದುರ್ಗ: ಪೋಲಿಸರೆಂದು ಹೇಳಿಕೊಂಡು ಬಂದ ಕಳ್ಳರಿಬ್ಬರು ಖಾಸಗಿ ಕ್ಲಿನಿಕ್ ಬಳಿ ನಿಂತಿದ್ದ ಮಹಿಳೆಯಿಂದ ಸರ ಕಿತ್ತುಕೊಂಡು ಹೋದ ಘಟನೆ ತಾಲೂಕಿನ ಶ್ರೀರಾಂಪುರದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಹೆಗ್ಗೆರೆ ಗ್ರಾಮದ ಸುವರ್ಣಮ್ಮ ಎಂಬುವರೆ ಸರ ಕಳೆದುಕೊಂಡ ಮಹಿಳೆ. ಶ್ರೀರಾಂಪುರದಲ್ಲಿ ಪ್ರತಿ ಬುಧವಾರ ವಾರದ ಸಂತೆ ನಡೆಯುತ್ತದೆ. ಹಾಗಾಗಿ, ಅಂದು ಸ್ವಲ್ಪ ಜನಸಂದಣಿ ಹೆಚ್ಚಾಗಿಯೇ ಇರುತ್ತದೆ. ಈ ಸನ್ನಿವೇಶವನ್ನು ಮನಗಂಡ ಕಳ್ಳರು ಖಾಸಗಿ ಕ್ಲಿನಿಕ್ ಮುಂದೆ ನಿಂತಿದ್ದ ಸುವರ್ಣಮ್ಮ ಇವರಿಗೆ ನಾವು ಪೋಲೀಸರು ಸರಗಳ್ಳರು ಬಂದಿದ್ದಾರೆ. ತಮ್ಮ ಕೊರಳಲ್ಲಿರುವ ಸರವನ್ನು ತೆಗೆದು ಬ್ಯಾಗಿನಲ್ಲಿಟ್ಟುಕೊಳ್ಳಿ ಎಂದು ತಿಳಿಸಿದ್ದಾರೆ. ಮಹಿಳೆ ಪೊಲೀಸರು ಹೇಳುತ್ತಿದ್ದಾರೆ ಎಂದು ನಂಬಿ ಕೊರಳಲ್ಲಿದ್ದ ಸರವನ್ನು ತೆಗೆದು ಬ್ಯಾಗಿನಲ್ಲಿ ಇಡಲು ಮುಂದಾಗುತ್ತಿದ್ದಂತೆ ಕಳ್ಳರು ಮಹಿಳೆಯ ಕೈಯಲ್ಲಿದ್ದ ಸರವನ್ನು ಕಿತ್ತುಕೊಂಡು ವೆಂಗಳಾಪುರ ಮಾರ್ಗವಾಗಿ ಬೈಕಿನಲ್ಲಿ ಪಾರಾರಿಯಾಗಿದ್ದಾರೆ. ಈ ಘಟನೆ ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.