ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ಕುವೆಂಪು ಬಡಾವಣೆಯಲ್ಲಿರುವ ವೀನಸ್ ಹಾಲ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಹಾ ಮಾನವತಾವಾದಿಗಳಾದ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ್ದ ತತ್ವ ಸಿದ್ಧಾಂತಗಳ ತಳಹದಿಯಲ್ಲಿ ಸಾಮಾಜಿಕ ಕ್ರಾಂತಿಕಾರಿ ಬದಲಾವಣೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಜೈನ ಮತ್ತು ಬೌದ್ಧ ಧರ್ಮಗಳು ಈ ನೆಲದಲ್ಲಿ ಹುಟ್ಟಿದ ಧರ್ಮಗಳು. ಈ ದೇಶದಲ್ಲಿ ಬುದ್ಧನ ಆಶಯಗಳನ್ನು ಕಾನೂನು ಬದ್ಧವಾಗಿ ಜಾರಿಗೊಳಿಸುವಲ್ಲಿ ಅಶೋಕ, ಕಾನಿಷ್ಕ ಹಾಗೂ ಹರ್ಷವರ್ಧನರ ಪಾತ್ರ ದೊಡ್ಡದು. ಆದರಿಂದು ಬುದ್ಧನ ಅನುಯಾಯಿಗಳಲ್ಲಿ ತಾಳ್ಮೆ, ಸಂಯಮ ಇಲ್ಲದಿರುವುದು ದುರಂತ ಸಂಗತಿ ಎಂದು ಹೇಳಿದರು.ಚಿತ್ರದುರ್ಗ ಮುಠಾಘಮಠದ ಡಾ.ಶ್ರೀ ಬಸವಕುಮಾರ ಮಹಾಸ್ವಾಮಿಜಿ ಮಾತನಾಡಿ, ಬಸವಣ್ಣ ನಮಗೇನು ಎಂಬುದನ್ನು ನಾವು ಪ್ರಾಮಾಣಿಕವಾಗಿ ಅವಲೋಕನ ಮಾಡಿ ಕೊಳ್ಳಬೇಕಾಗಿದೆ. ಪ್ರೀತಿ, ಕರುಣೆ, ದಯೆ ಹಾಗೂ ಅಹಿಂಸೆ ತತ್ವಗಳನ್ನು ಪ್ರತಿಪಾದಿಸಿದ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಹುಟ್ಟಿದ ಈ ನಾಡಿನಲ್ಲಿ ಇಂದಿಗೂ ಕೆಲವರು ಮನೆಗಳಿಲ್ಲದೇ ಅಲೆಮಾರಿ ಜೀವನ ಸಾಗಿಸುತ್ತಿರುವುದು ದುರಂತದ ವಿಷಯ.
ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ಹ.ರಾ.ಮಹೇಶ್ ಮಾತನಾಡಿ, ನಾವು ಜೀವನದಲ್ಲಿ ಯಾವುದು ಸತ್ಯ-ಅಸತ್ಯ ಅಥವಾ ಸರಿ-ತಪ್ಪು ಎಂದು ಅರ್ಥೈಸಿಕೊಂಡು ಅನುಸರಿಸಿ ನಡೆದರೆ ಬುದ್ಧನಾಗಬಹುದು. ನುಡಿದಂತೆ ನಡೆಯಬೇಕು, ನಡೆದಂತೆ ನುಡಿಯಬೇಕು. ಜ್ಞಾನಕ್ಕೆ ಶರಣಾಗುವುದೇ ಬುದ್ಧ.
ಹಿರಿಯ ಪತ್ರಕರ್ತ ಎಂ.ಎನ್.ಅಹೋಬಲಪತಿ ಮಾತನಾಡಿ, ಇವತ್ತಿನ ಕಾಲದಲ್ಲಿ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರು ಏಕಕಾಲದಲ್ಲಿ ಸಾಮಾಜಿಕ, ಧಾರ್ಮಿಕ ಸುಧಾರಕರು ಹಾಗೂ ರಾಜಕೀಯ ಚಿಂತಕರಾಗಿದ್ದಾರೆ. ಅವರ ತತ್ವಗಳನ್ನು ಅಳವಡಿಸಿಕೊಳ್ಳುವುದು ಸವಾಲಿನ ಕೆಲಸ. ಕಾನೂನು ಬದ್ಧವಾಗಿ ಹೋರಾಡಿದ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಎಲ್ಲಾ ಸಮಾಜಗಳು ಒಪ್ಪಿಕೊಳ್ಳಲು ಸುಮಾರು ಒಂದು ಕಾಲು ಶತಮಾನ ಬೇಕಾಯಿತು. ಅವರನ್ನು ವೈಭವೀಕರಿಸುವ ಬದಲು ಅವರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಂಡರೆ ಈ ಸಮಾಜ ಅಭಿವೃದ್ದಿಯ ಪಥ ದಲ್ಲಿ ಸಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಸಿ.ರಾಮಚಂದ್ರಪ್ಪ, ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ರಮೇಶ್, ನಗರಸಭಾ ಸದಸ್ಯರಾದ ಈರಲಿಂಗೇಗೌಡ, ಎಂ.ಡಿ.ಸಣ್ಣಪ್ಪ, ಕಸಾಪ ಕೋಶಾಧ್ಯಕ್ಷ ಜಿ.ಪ್ರೇಮ್‌ಕುಮಾರ್, ಮಹಮದ್ ಫಕ್ರುದ್ದೀನ್, ಶಶಿಕಲಾ ರವಿಶಂಕರ್, ಜಿ.ಧನಂಜಯ್ ಕುಮಾರ್, ಹರ್ತಿಕೋಟೆ ಮಹಾಸ್ವಾಮಿ, ಚಂದ್ರಶೇಖರ್, ಬಿ.ಪಿ ತಿಪ್ಪೇಸ್ವಾಮಿ ಮುಂತಾದವರು ಹಾಜರಿದ್ದರು.