ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಅವರು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಕನ್ನಡ ವಿಭಾಗ, ನುಡಿ ಉತ್ಸವ ಸಮಿತಿ ಕೊಡಗು ಜಿಲ್ಲೆ, ದಸಾಪ ಕೊಡಗು ಜಿಲ್ಲೆ ಇವುಗಳ ಸಹಯೋಗದಲ್ಲಿ ಜರುಗಿದ ನುಡಿ ಸಾಹಿತ್ಯ ಲಹರಿ ಪ್ರಯುಕ್ತದ ಮೊಗಳ್ಳಿ ಗಣೇಶ್ ಬದುಕು ಬರಹ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸವನ್ನು ನೀಡುತ್ತಾ ಮಾತನಾಡಿದರು.
ಮೊಗಳ್ಳಿ ಗಣೇಶ್ ರವರ ಚಿಂತನೆಗಳು ಸಾರ್ವಕಾಲಿಕವಾಗಿವೆ. ಸಾಹಿತ್ಯ ಹಾಗೂ ಬರಹಗಳು ಲೋಕಾಂತವಾಗಬೇಕು. ಮಾತ್ರವಲ್ಲದೆ ಸಾಹಿತ್ಯದ ದಾಖಲೀಕರಣವನ್ನು ಮಾಡಬೇಕು. ಮನುಷ್ಯನು ತನ್ನನ್ನು ತಾನು ಪ್ರಶ್ನಿಸುತ್ತಲೆ ಬದುಕಬೇಕು. ಕಥೆ, ಕಾದಂಬರಿಗಳು ವಿಶ್ವವ್ಯಾಪಿಯಾಗಬೇಕು. ಕಲಿಕೆ, ಬದುಕು, ಅನುಭವ, ಸುತ್ತ ಮುತ್ತಲಿನ ಪರಿಸರ ವು ನಮಗೆ ಪ್ರೇರಣೆಯಾಗಿದೆ ಎಂದರು. ಹೊಸ ಚಿಂತನೆಗಳು ಮೂಡಿದಾಗ ಮಾತ್ರ ಬರಹಗಳಿಗೆ ಅರ್ಥ ಬರಲು ಸಾಧ್ಯವಾಗುತ್ತದೆ. ಅಂತೆಯೇ ಮೊಗಳ್ಳಿ ಗಣೇಶ್ ರವರ ಬರಹಗಳು ಓದುಗರನ್ನು ಸೆಳೆಯುವುದರ ಜೊತೆಗೆ ಚಿಂತನಶೀಲರನ್ನಾಗಿಸುತ್ತದೆ. ಬದುಕು ಹಾಗೂ ಬರಹಗಳೇರಡು ಬಿಂಬ ಪ್ರತಿಬಿಂಬಗಳಾಗಿದ್ದು ಚಿಂತನೆಗೆ ಮತ್ತು ಸಾಹಿತ್ಯಕ ಬದಲಾವಣೆಗೆ ಸಾಕ್ಷಿಯಾಗಿದೆ ಎಂದರು.ನುಡಿ ಉತ್ಸವ ಸಮಿತಿಯ ಅಧ್ಯಕ್ಷ ಅರ್ಜುನ್ ಮೌರ್ಯ ರವರು ಮಾತನಾಡುತ್ತ ಪ್ರತಿಯೊಬ್ಬರಲ್ಲಿಯೂ ಸಹನೆ ಹಾಗೂ ತಾಳ್ಮೆಯಿದ್ದರೆ ಜಗತ್ತನ್ನು ಗೆಲ್ಲಬಹುದು. ಮೌಲ್ಯಗಳನ್ನು ಸಮಾಜಕ್ಕೆ ನೀಡಬೇಕು. ಮೌಲ್ಯದಿಂದ ಭಾಷೆ, ಸಾಹಿತ್ಯದ ಬೆಳವಣಿಗೆಯ ಜೊತೆಗೆ ಸಾಮಾಜಿಕ ಪರಿವರ್ತನೆಗೆ ಸಾಹಿತ್ಯವು ಭದ್ರ ಬುನಾದಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಕೋರನ ಸರಸ್ವತಿ ರವರು ಮಾತನಾಡುತ್ತ ಸಾಹಿತ್ಯದ ರಚನೆಯು ಅನುಭವದಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ಸಾಹಿತ್ಯಕ ಕೃತಗಳನ್ನು ಓದಬೇಕು. ಓದುವ ಹವ್ಯಾಸದಿಂದ ಸಾಹಿತ್ಯದ ಬಳಕೆ ಹೆಚ್ಚಾಗುತ್ತದೆ. ಓದು, ಬರಹ, ಲೇಖನ ಇವುಗಳು ನಿರಂತರವಾಗಿವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿ ಯ ಕುರಿತು ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನವನ್ನು ವಿತರಿಸಿದರು. ನುಡಿ ಉತ್ಸವ ಸಮಿತಿಯ ಸಂಚಾಲಕ ಅಬ್ದುಲ್ ರೆಹಮಾನ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸವನ್ನು ನೀಡಿದ ಡಾ. ರೇಣುಕಾ ಪ್ರಸಾದ್ ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬಸವರಾಜು, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಸಂಚಾಲಕರಾದ ಡಾ. ದಯಾನಂದ ಕೆ. ಸಿ., ಉಪನ್ಯಾಸಕರಾದ ಹರಿಣಿ ಉಪಸ್ಥಿತರಿದ್ದರು. ಈ ಸಂದರ್ಭ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.