ಸಾಲುಮರದ ತಿಮ್ಮಕ್ಕ ವಿಶ್ವಕ್ಕೆ ಪರಿಸರ ಸಂದೇಶ ಸಾರಿದವರು: ಸಾಹಿತಿ ಜಿ.ಎಚ್. ರಾಮಯ್ಯ

KannadaprabhaNewsNetwork |  
Published : Nov 18, 2025, 12:02 AM IST
17ಕೆಆರ್ ಎಂಎನ್ 6.ಜೆಪಿಜಿರಾಮನಗರದ ಜಿಲ್ಲಾ ಕಸಾಪ ಕಚೇರಿಯಲ್ಲಿ ಕಸಾಪ ತಾಲೂಕು ಘಟಕ ವತಿಯಿಂದ ಆಯೋಜಿಸಿದ್ದ ಸಾಲು ಮರದ ತಿಮ್ಮಕ್ಕ ಅವರ ನುಡಿ ನಮನ ಸಲ್ಲಿಸಲಾಯಿತು. | Kannada Prabha

ಸಾರಾಂಶ

ವೃಕ್ಷ ಮಾತೆಯ ಹೆಸರಿನಲ್ಲಿ ಅರಣ್ಯ ಇಲಾಖೆಯು ದೊಡ್ಡ ಮೊತ್ತವನ್ನು ದತ್ತಿ ನಿಧಿ ಇಟ್ಟು ಪ್ರತಿ ವರ್ಷ ಪರಿಸರ ಪ್ರೇಮಿಗಳನ್ನು ಗುರುತಿಸಿ ಗೌರವಿಸಿದರೆ ಯುವಕರಿಗೆ ಸ್ಫೂರ್ತಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ರಾಮನಗರ

ಸಾಲುಮರದ ತಿಮ್ಮಕ್ಕ ಅವರಿಗೆ ಮಕ್ಕಳಿಲ್ಲದಿದ್ದರೂ ಗಿಡ- ಮರಗಳನ್ನೇ ಮಕ್ಕಳಂತೆ ಬೆಳೆಸಿ ಪರಿಸರ ಉಳಿಸುವ ಕೆಲಸ ಮಾಡಿ ಹೋಗಿದ್ದಾರೆ ಎಂದು ಸಾಹಿತಿ ಜಿ.ಎಚ್. ರಾಮಯ್ಯ ಹೇಳಿದರು.

ನಗರದ ಜಿಲ್ಲಾ ಕಸಾಪ ಕಚೇರಿಯಲ್ಲಿ ಕಸಾಪ ತಾಲೂಕು ಘಟಕ ವತಿಯಿಂದ ಆಯೋಜಿಸಿದ್ದ ಸಾಲು ಮರದ ತಿಮ್ಮಕ್ಕ ಅವರ ನುಡಿ ನಮನ, ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ತಮ್ಮ ಬದುಕಿನಲ್ಲಿ ಮಕ್ಕಳಿಲ್ಲ ಎಂಬ ಕೊರತೆಯ ಆಲೋಚನೆ ಬಿಟ್ಟು, ಆಲದ ಮರಗಳ ಜೊತೆಗೆ ಸಾವಿರಾರು ವಿವಿಧ ಮರಗಳನ್ನು ನೆಟ್ಟು ಬೆಳೆಸಿ ನಾಡಿನಲ್ಲಿ ಪರಿಸರ ಪ್ರಜ್ಞೆ ಸಾರಿದ ಮಹಾನ್ ವ್ಯಕ್ತಿ ಮತ್ತು ಶಕ್ತಿಯಾಗಿದ್ದಾರೆ. ಅವರ ಕೆಲಸ ಮತ್ತು ಸಾಧನೆಗೆ ಪದ್ಮಶ್ರೀ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರು.

ಉಪನ್ಯಾಸಕ ಡಾ.ನರಸಿಂಹಸ್ವಾಮಿ ಮಾತನಾಡಿ, ನಮ್ಮೆಲ್ಲರ ಸ್ವಾರ್ಥ ಬದುಕಿನ ನಡುವೆ ಓದು, ಬರಹ ಬರದಿದ್ದರೂ ಸಮಾಜಕ್ಕೆ ಉಪಯೋಗವಾಗುವ ಮತ್ತು ಇಂದಿನ ಕಲುಷಿತ ಪರಿಸರ ಉಳಿಸುವ ನಿಟ್ಟಿನಲ್ಲಿ ಕಾಳಜಿ ವಹಿಸಿ ಮರಗಿಡಗಳನ್ನು ನೆಟ್ಟು ಮಾದರಿಯ ಕೆಲಸ ಮಾಡಿ ಸದಾ ನೆನಪು ಮಾಡಿಕೊಳ್ಳುವ ಶ್ರೇಷ್ಠ ವ್ಯಕ್ತಿಯಾಗಿ ತಿಮ್ಮಕ್ಕ ಉಳಿದಿದ್ದಾರೆ. ಮುಂದಿನ ದಿನಗಳಲ್ಲಿ ಕಸಾಪ ಅವರ ಹೆಸರಿನಲ್ಲಿ ಗಿಡ ನೆಟ್ಟು, ಅವರ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಸಾಹಿತಿ ಡಾ.ಬೈರೇಗೌಡ ಮಾತನಾಡಿ, ತಿಮ್ಮಕ್ಕ ನೂರಾರು ಮರಗಳನ್ನು ಬೆಳೆಸಿ, ವಿಶ್ವಕ್ಕೆ ಪರಿಸರದ ಸಂದೇಶ ಸಾರಿ ರಾಷ್ಟ್ರಕ್ಕೆ ಗೌರವ ತಂದುಕೊಟ್ಟಿದ್ದಾರೆ. ಅವರು ಮಾಡಿದ ಸಾಧನೆಗೆ ಹಲವು ಪ್ರಶಸ್ತಿ ಧಕ್ಕಿದ್ದು, ಅವರು ಎಂದಿಗೂ ಅಜರಾಮರರು. ಅವರಂತೆ ನಾಡಿನಲ್ಲಿ ಹಲವರು ಪರಿಸರ ಪ್ರೇಮಿಗಳು ಗಿಡ- ಮರಗಳ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ. ಅವರಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು. ಆಗ ತಿಮ್ಮಕ್ಕನವರಿಗೆ ಗೌರವ ನೀಡಿದಂತಾಗುತ್ತದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ಪರಿಸರದ ಬಗ್ಗೆ ಇಂದಿನ ಯುವಕರಿಗೆ ಸ್ಫೂರ್ತಿದಾಯಕರಾಗಿದ್ದ ಶತಾಯುಷಿ ಸಾಲು ಮರದ ತಿಮ್ಮಕ್ಕ ಬಡತನದ ನಡುವೆ ಸಾಲು ಸಾಲು ಗಿಡಗಳಿಗೆ ಕಷ್ಟಪಟ್ಟು ನೀರುಣಿಸಿ, ಬೆಳೆಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ನಾಡಿನುದ್ದಕ್ಕೂ ಪರಿಸರ ಪ್ರಜ್ಞೆ ಮೂಡಿಸುತ್ತಿದ್ದ ಮಹಾನ್ ಶಕ್ತಿಯ ಕೊಂಡಿ ಕಳಚಿದೆ. ಅವರ ಕೊನೆಯ ಆಸೆಯಂತೆ ತಮ್ಮ ಗ್ರಾಮದಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಹೋರಾಟ ಮಾಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ, ಹಾಗಾಗಿ ಸರ್ಕಾರ ಈ ಬಗ್ಗೆ ಅವರ ಆಶಯದಂತೆ ಆ ಭಾಗದಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಿಸಬೇಕು ಎಂದು ಕಸಾಪ ಒತ್ತಾಯ ಮಾಡಿ ಜಿಲ್ಲಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಪತ್ರ ಬರೆಯಲಿದೆ ಎಂದು ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷ ಬಿ.ಟಿ.ದಿನೇಶ್ ಬಿಳಗುಂಬ ಮಾತನಾಡಿ, ವೃಕ್ಷ ಮಾತೆಯ ಹೆಸರಿನಲ್ಲಿ ಅರಣ್ಯ ಇಲಾಖೆಯು ದೊಡ್ಡ ಮೊತ್ತವನ್ನು ದತ್ತಿ ನಿಧಿ ಇಟ್ಟು ಪ್ರತಿ ವರ್ಷ ಪರಿಸರ ಪ್ರೇಮಿಗಳನ್ನು ಗುರುತಿಸಿ ಗೌರವಿಸಿದರೆ ಯುವಕರಿಗೆ ಸ್ಫೂರ್ತಿಯಾಗುತ್ತದೆ ಎಂದು ತಿಳಿಸಿದರು.

ಕಸಾಪ ಸಂಚಾಲಕ ಬಿ.ಟಿ.ರಾಜೇಂದ್ರ, ಶಿಕ್ಷಕ ವೇಣುಗೋಪಾಲ್ ಮಾತನಾಡಿದರು. ನಗರ ಕಸಾಪ ಘಟಕದ ಅಧ್ಯಕ್ಷ ವೆಂಕಟೇಶ್, ಕೈಲಾಂಚ ಅಧ್ಯಕ್ಷ ಗಿರೀಶ್ ವಡ್ಡರಹಳ್ಳಿ, ಕಸಾಪ ತಾಲೂಕು ಮಾಜಿ ಕಾರ್ಯದರ್ಶಿ ಸಿದ್ದರಾಮೇಗೌಡ, ಸಂಘಟನಾ ಕಾರ್ಯದರ್ಶಿ ಅರುಣ್ ಅನುಮಾನಹಳ್ಳಿ, ಸಿದ್ದೇಗೌಡ, ಸಿದ್ದೋಜಿರಾವ್ ಹಾಜರಿದ್ದರು.

ಗಾಯಕ ವಿನಯ್ ಕುಮಾರ್ ಮತ್ತು ಗೋಪಾಲ್ ಬೊಮ್ಮಚ್ಚನಹಳ್ಳಿ ಪರಿಸರ ಗೀತೆಗಳನ್ನು ಹಾಡಿದರು.

PREV

Recommended Stories

ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥ ಸಂಚಲನ ಶಾಂತಿಯುತ
ವಲಸಿಗರಿಂದ ಗ್ರಾಮೀಣ ಭಾಗದ ಕಾರ್ಮಿಕರಿಗೂ ಸಂಕಷ್ಟ