ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವ ಕುತಂತ್ರ

KannadaprabhaNewsNetwork |  
Published : Aug 10, 2025, 01:30 AM IST
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ  | Kannada Prabha

ಸಾರಾಂಶ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇವೆ ಎಂದು ಸುಳ್ಳು ಪ್ರಚಾರ ಗಿಟ್ಟಿಸುವ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ಸರ್ಕಾರ ಕೂಡಲೇ ಕಂಡುಹಿಡಿಯಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.

ಶಿವಮೊಗ್ಗ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇವೆ ಎಂದು ಸುಳ್ಳು ಪ್ರಚಾರ ಗಿಟ್ಟಿಸುವ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ಸರ್ಕಾರ ಕೂಡಲೇ ಕಂಡುಹಿಡಿಯಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ವಿಚಾರವನ್ನು ಹಿಡಿದುಕೊಂಡು ಧರ್ಮಸ್ಥಳದ ಹೆಸರನ್ನು ಹಾಗೂ ಹೆಗ್ಗಡೆಯವರ ಹೆಸರನ್ನು ಹಾಳು ಮಾಡುವ ಷಡ್ಯಂತ್ರ ನಡೆಯುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಅನಾಮಿಕ ವ್ಯಕ್ತಿಯನ್ನು ಬಂಧಿಸಿ, 13 ಸ್ಥಳಗಳಲ್ಲಿ ನೂರಾರು ಹೆಣ ಹೂತು ಹಾಕಿದ್ದಾಗಿ ಹೇಳಿದ ವ್ಯಕ್ತಿ ಹಿಂದೆ ಯಾರಿದ್ದಾರೆ. ಅವನೊಬ್ಬನೇ ನೂರಾರು ಹೆಣ ಹೂತ್ತು ಹಾಕಲು ಸಾಧ್ಯವಾ ? ಆತನ ಹಿಂದೆ ಯಾವ ಧರ್ಮ ದ್ರೋಹಿ, ದೇಶದ್ರೋಹಿ ಗುಂಪಿದೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವ ಕುತಂತ್ರ ನಡೆದಿದೆ. ಅನಾಮಿಕ ವ್ಯಕ್ತಿ ಹೆಣಗಳನ್ನು ತೋರಿಸುವುದರಲ್ಲಿ ವಿಫಲ ಆಗಿದ್ದಾನೆ. ರಾಜ್ಯ ಸರ್ಕಾರವು ಇತ್ತೀಚೆಗೆ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯಡಿ ಸರ್ಕಾರ ಕೂಡಲೇ ಅನಾಮಿಕ ವ್ಯಕ್ತಿಯನ್ನು ಬಂಧಿಸಿ ಅವನ ಮೂಲಕ ಎಲ್ಲರೂ ವಿಚಾರ ಬಹಿರಂಗ ಗೊಳಿಸಬೇಕು. ಅನಾಮಿಕ ವ್ಯಕ್ತಿಯ ಹೆಸರು ಬಹಿರಂಗ ಆಗಬೇಕು. ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಯಾರಿಂದಲೂ ಧರ್ಮಸ್ಥಳ, ವೀರೇಂದ್ರ ಹೆಗ್ಗಡೆ ಮತ್ತು ಹಿಂದೂ ಧರ್ಮವನ್ನು ಹಾಳು ಮಾಡಲು ಸಾಧ್ಯವಿಲ್ಲ. ದೇಶದ ಹಿಂದುಗಳಿಗೆ ನೋವಾಗಿದೆ, ಹಿಂದೂ ಧರ್ಮದ ಕ್ಷೇತ್ರದ ಬಗ್ಗೆ ಅಪಮಾನ ಮಾಡುವ ಕೆಲಸ ನಡೆಯುತ್ತಿದೆ. ಯೂಟ್ಯೂಬರ್‌ಗಳ ಮೇಲೆ ಮಾಧ್ಯಮಗಳ ವರದಿಗಾರರ ಮೇಲೆ ಹಲ್ಲೆ ಮಾಡಿರುವ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಈ ಹಿಂದೆ ಪ್ರತಿಭಟನೆ ಹಿನ್ನೆಲೆ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯಲಾಯಿತು. ಅದೇ ರೀತಿ ಧರ್ಮಸ್ಥಳವನ್ನು ಮುಜರಾಯಿ ಇಲಾಖೆಗೆ ಪಡೆಯುವ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.

ಧರ್ಮಸ್ಥಳವನ್ನು ಬ್ಲಾಸ್ಟ್ ಮಾಡುವ ವಿಚಾರ ಎನ್‌ಐಎ ತನಿಖೆಯಿಂದ ಹೊರ ಬಿದ್ದಿದೆ. 9 ನಿಮಿಷದಲ್ಲಿ ಆಗಬೇಕಾಗಿದ್ದ ಬ್ಲಾಸ್ಟ್ 9 ಸೆಕೆಂಡನಲ್ಲಿ ಆಗಿದ್ದರಿಂದ ಧರ್ಮಸ್ಥಳ ಉಳೀತು. ಕುಕ್ಕರ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಅವರೆಲ್ಲರನ್ನು ಬಂಧಿಸಬೇಕು. ಇಲ್ಲದಿದ್ದರೆ ಇಡಿ ಹಿಂದೂ ಸಮಾಜ ಸರ್ಕಾರದ ವಿರುದ್ಧ ತಿರುಗಿ ಬೀಳುವ ಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ