ಮಂಜುನಾಥ ಕೆ.ಎಂ.
ಸಿರುಗುಪ್ಪ ಸೇರಿದಂತೆ ಸುತ್ತಮುತ್ತ ಗ್ರಾಮಗಳು ಹಾಗೂ ಗಡಿಭಾಗದ ಅನೇಕ ಕಡೆಗಳಿಂದ ಆಗಮಿಸಿದ್ದ ಕನ್ನಡಾಭಿಮಾನಿಗಳು ಸಮ್ಮೇಳನಕ್ಕೆ ಸಾಕ್ಷಿಯಾದರು. ವಿದ್ಯಾರ್ಥಿ, ಯುವಜನರು, ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಭಾಷಾಭಿಮಾನದ ಕನ್ನಡಿಗರು ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನುಡಿಜಾತ್ರೆ ಅದ್ಧೂರಿಗೊಳಿಸಿದರು.
ಸಮ್ಮೇಳನದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಪರಿಷತ್ತಿನ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ನಗರಸಭೆ ಅಧ್ಯಕ್ಷೆ ರೇಣುಕಮ್ಮ ನಾಡ ಧ್ವಜಾರೋಣ ಮಾಡಿದರು. ಪರಿಷತ್ತಿನ ತಾಲೂಕು ಅಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.ಬಳಿಕ ಕನ್ನಡ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ಚಾಲನೆ ದೊರೆಯತು. ಸಾರೋಟದಲ್ಲಿ ಸಮ್ಮೇಳನದ ಅಧ್ಯಕ್ಷ ಶಿವಕುಮಾರ ಎಸ್.ಬಳಿಗಾರ ಅವರನ್ನು ಸಡಗರ ಸಂಭ್ರಮದಿಂದ ಕರೆತರಲಾಯಿತು. ಸಿರುಗುಪ್ಪದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪರಿಷತ್ತಿನ ಸದಸ್ಯರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್, ಸೇವಾದಳದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರಗು ತಂದರು. ಪ್ಯಾಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಶುರುಗೊಂಡ ಮೆರವಣಿಗೆ ಅಭಯಾಂಜನೇಯ ದೇವಸ್ಥಾನ ಎದುರುಗಿನ ಸಮ್ಮೇಳನದ ವೇದಿಕೆವರೆಗೆ ಸಾಗಿ ಬಂತು.
ಇದೇ ವೇಳೆ ಮಾತನಾಡಿದ ಅವರು, ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಪರಂಪರೆ ಕುರಿತು ತಿಳಿಸಿಕೊಟ್ಟರು. ಪ್ರಾಸ್ತಾವಿಕ ಮಾತನಾಡಿದ ಸಾಹಿತ್ಯ ಪರಿಷತ್ತಿನ ಸಿರುಗುಪ್ಪ ಘಟಕದ ಅಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು ಸಿರುಗುಪ್ಪದಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಈವರೆಗೆ ಕೈಗೊಂಡಿರುವ ಕನ್ನಡಮುಖಿ ಕಾರ್ಯಗಳು ಕುರಿತು ತಿಳಿಸಿಕೊಟ್ಟರು.
ಆಶಯ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿದ್ದು, ಬಳ್ಳಾರಿ-ವಿಜಯನಗರ ಜಿಲ್ಲೆಗಳ ಜನರು ಸೇರಿ ಯಶಸ್ವಿಗೊಳಿಸಬೇಕಾಗಿದೆ ಎಂದರು.
ಇದೇ ವೇಳೆ ಸಿರಿಸೌರಭ ಸ್ಮರಣ ಸಂಚಿಕೆಯನ್ನು ವೇದಿಕೆಯಲ್ಲಿದ್ದ ಗಣ್ಯರು ಲೋಕಾರ್ಪಣೆಗೊಳಿಸಿದರು. ಸಿರುಗುಪ್ಪ ಕಲಾವಿದರ ತಂಡದವರು ನಾಡಗೀತೆ ಹಾಗೂ ರೈತಗೀತೆಗಳನ್ನು ಪ್ರಸ್ತುತಪಡಿಸಿದರು. ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷ ಲೇಖಕ ಡಾ.ಶಿವಕುಮಾರ ಎಸ್.ಬಳಿಗಾರ ಕುಟುಂಬ ಹಾಗೂ ನಾ.ಸೋಮೇಶ್ವರ ಅವರನ್ನು ಸನ್ಮಾನಿಸಲಾಯಿತು.
ಸಿರುಗುಪ್ಪ ಜಾನಪದ ಸಾಹಿತ್ಯ ಸೊಬಗು ಕುರಿತು ಸಾಹಿತಿ ನಾ.ಮ.ಮರುಳಾರಾಧ್ಯ ನಾಗರಹಾಳು ಹಾಗೂ ಸಿರುಗುಪ್ಪ ತಾಲೂಕಿನ ಐತಿಹಾಸಿಕ ಮಹತ್ವ ಕುರಿತು ಬಿ.ಚಂದ್ರಶೇಖರ ವಿಚಾರ ಮಂಡಿಸಿದರು. ದಮ್ಮೂರು ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ದರಪ್ಪ ನಾಯಕ, ಶಿವಲಿಂಗಪ್ಪ ಹಂದಿಹಾಳು, ದಮ್ಮೂರು ಸೋಮಪ್ಪ, ಕುಂಟನಹಾಳು ಮಲ್ಲಿಕಾರ್ಜುನ ಸ್ವಾಮಿ, ಬಿ.ಎಂ.ಸತೀಶ್ ಉಪಸ್ಥಿತರಿದ್ದರು.