ಜನಪ್ರತಿನಿಧಿಗಳ ಭರವಸೆಗಳು ಇದುವರೆಗೂ ಈಡೇರಿಲ್ಲ
ತಾಲೂಕಿನ ಕರ್ಕಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪಾವಿನಕುರ್ವಾ ತೂಗು ಸೇತುವೆ ಸಂಪೂರ್ಣ ಶಿಥಿಲಾವಸ್ಥೆಗೆ ಜಾರಿ ವರ್ಷ ಉರುಳುತ್ತಿದೆ. ಆದರೆ ಸೇತುವೆಯ ಕೆಲಸದ ಬಗ್ಗೆ ಮಾತ್ರ ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಂತಿಲ್ಲ. ಅಲ್ಲದೆ ಕಳೆದ ವರ್ಷ ಉಸ್ತುವಾರಿ ಸಚಿವರು, ಸತೀಶ್ ಜಾರಕಿಹೊಳಿ ಹಾಗೂ ಆರ್.ವಿ. ದೇಶಪಾಂಡೆ ಇವರೆಲ್ಲ ಈ ಸೇತುವೆಯನ್ನು ಖುದ್ದು ವೀಕ್ಷಣೆ ಮಾಡಿದ್ದಾರೆ. ಆಗ ಕೊಟ್ಟ ಭರವಸೆಗಳು ಇದುವರೆಗೂ ಈಡೇರಿಲ್ಲ.
ಮಳೆಗಾಲವಾದ್ದರಿಂದ ಈ ಸೇತುವೆಯ ಮೇಲೆ ಓಡಾಡುವುದು ತೀರಾ ಕಷ್ಟದಾಯವಾಗಿದೆ. ಜೋರು ಗಾಳಿ ಮಳೆ ಬಂದರೆ ಸೇತುವೆ ಆ ಕ್ಷಣಕ್ಕೆ ಕುಸಿದು ಬೀಳುತ್ತದೆಯೋ ಎಂಬ ಭಯ ಮೂಡುತ್ತದೆ. ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿಗೆ ಬಂದು ತಲುಪಿದೆ.ಪಾವಿನಕುರ್ವಾ ತೂಗು ಸೇತುವೆ ಅಲ್ಲಿನ ಜನರ ಬದುಕಿಗೆ ಅಗತ್ಯ ಮತ್ತು ಅವಲಂಬಿತವಾಗಿರುವಂತದ್ದು. ಮೀನುಗಾರರು, ಶಾಲಾ ಮಕ್ಕಳು, ಸಾರ್ವಜನಿಕರು ದೋಣಿಯನ್ನು ದಾಟಿ ಕರ್ಕಿ ಗ್ರಾಪಂ ಮುಖಾಂತರ ಹೊನ್ನಾವರಕ್ಕೆ ಬರಬೇಕು. ಸೇತುವೆಯನ್ನು ದಾಟದೇ ಹೊನ್ನಾವರಕ್ಕೆ ಬರಬೇಕು ಎಂದಾದರೆ ೧೨ರಿಂದ ೧೪ ಕಿಮೀ ಕ್ರಮಿಸಬೇಕಾಗುತ್ತದೆ. ತೂಗು ಸೇತುವೆ ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಸಾಧ್ಯತೆಗಳಿವೆ ಎಂದು ಲೋಕೋಪಯೋಗಿ ಎಂಜಿನಿಯರ್ ಹೇಳಿದ್ದಾರೆ. ಮನವಿ:
ಪಾವಿನಕುರ್ವಾದ ಜನರಿಗೆ ಅಗತ್ಯವಾಗಿ ಬೇಕಾದ ಸೇತುವೆಯನ್ನು ನಿರ್ಮಿಸಲು ಸರ್ಕಾರ ಯಾಕೋ ಮನಸ್ಸನ್ನು ಮಾಡುತ್ತಿಲ್ಲ. ಆದರೆ ಪಾವಿನಕುರ್ವಾದಲ್ಲಿ ರೆಸಾರ್ಟ್ ತಲೆ ಎತ್ತುತ್ತಿವೆ. ಇಲ್ಲಿಗೆ ಜನರು ಬರಬೇಕು, ಇಲ್ಲಿ ಪ್ರವಾಸೋದ್ಯಮ ಹೆಚ್ಚು ಪ್ರಚಲಿತಕ್ಕೆ ಬರಬೇಕು ಎಂದಾದಲ್ಲಿ ಸೇತುವೆಯಂತಹ ಸುಧಾರಣೆಯನ್ನು ಕಾಣಬೇಕಿದೆ.