ಆಧುನಿಕ ವಚನಕಾರರಿಂದ ಬದುಕಿನ ಮೌಲ್ಯ ಅನಾವರಣ: ಕುವೆಂಪು ವಿವಿ ಕನ್ನಡ ಭಾರತಿಯ ಡಾ.ನವೀನ್‌ ಮಂಡಗದ್ದೆ

KannadaprabhaNewsNetwork |  
Published : Jan 10, 2025, 12:49 AM IST
ಪೋಟೋ 09ಎಸ್‌ಎಂಜಿಕೆಪಿ03ಶಿವಮೊಗ್ಗದ ಶಂಕರಘಟ್ಟದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಡಿ. ದೇವರಾಜ ಅರಸು ಅವರ ಸ್ಮಾರಕ ಮಹಿಳೆಯರ ಸ್ನಾತಕೋತ್ತರ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಆಯೋಜಿಸಿದ್ದ ಮಧುರ ಅಶೋಕಕುಮಾರ್ ದತ್ತಿ, ಹಾಲಮ್ಮ ಕೋಂ ಕೋರಿ ರುದ್ರಪ್ಪ ದತ್ತಿ ಮತ್ತು ಕೆ.ಆರ್. ವೀರಣ್ಣ ದತ್ತಿ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಉದ್ಘಾಟಿಸಿದರು. | Kannada Prabha

ಸಾರಾಂಶ

ಆಧುನಿಕ ವಚನಕಾರರು ಸಮಾಜಕ್ಕೆ ಬದುಕಿನ ಮೌಲ್ಯ ಕಟ್ಟಿಕೊಟ್ಟಿದ್ದಾರೆ ಎಂದು ಕುವೆಂಪು ವಿಶ್ವವಿದ್ಯಾಲಯ ಕನ್ನಡ ಭಾರತಿ ಉಪನ್ಯಾಸಕ ಡಾ.ನವೀನ್‌ ಮಂಡಗದ್ದೆ ಹೇಳಿದರು. ಶಿವಮೊಗ್ಗದಲ್ಲಿ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದತ್ತಿ ಉಪನ್ಯಾಸ ಕಾರ್ಯಕ್ರಮ । ಆಧುನಿಕ ವಚನಕಾರರ ಬಗ್ಗೆ ಮಾತು

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆಧುನಿಕ ವಚನಕಾರರು ಸಮಾಜಕ್ಕೆ ಬದುಕಿನ ಮೌಲ್ಯ ಕಟ್ಟಿಕೊಟ್ಟಿದ್ದಾರೆ ಎಂದು ಕುವೆಂಪು ವಿಶ್ವವಿದ್ಯಾಲಯ ಕನ್ನಡ ಭಾರತಿ ಉಪನ್ಯಾಸಕ ಡಾ.ನವೀನ್‌ ಮಂಡಗದ್ದೆ ಹೇಳಿದರು.

ಶಂಕರಘಟ್ಟದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಡಿ.ದೇವರಾಜ ಅರಸು ಅವರ ಸ್ಮಾರಕ ಮಹಿಳೆಯರ ಸ್ನಾತಕೋತ್ತರ ವಿದ್ಯಾರ್ಥಿನಿಲಯದಲ್ಲಿ ಬುಧವಾರ ಆಯೋಜಿಸಿದ್ದ ಮಧುರ ಅಶೋಕಕುಮಾರ್ ದತ್ತಿ, ಹಾಲಮ್ಮ ಕೋಂ ಕೋರಿ ರುದ್ರಪ್ಪ ದತ್ತಿ ಮತ್ತು ಕೆ.ಆರ್. ವೀರಣ್ಣ ದತ್ತಿ ಕಾರ್ಯಕ್ರಮದಲ್ಲಿ ಆಧುನಿಕ ವಚನಕಾರರು ಕುರಿತು ಮಾತನಾಡಿದರು.

ಸಾಹಿತ್ಯದಿಂದ ಸಮಾಜಕ್ಕೆ ಏನು ಉಪಯೋಗ ಎನ್ನುವ ಪ್ರಶ್ನೆಯಿತ್ತು. ವಚನಕಾರರು ತಾವು ಬರೆದಂತೆ ಬದುಕಿದರು. ಸಮಾಜದ ಹಿತ ಕಾಯುತ್ತಲೆ, ವ್ಯಕ್ತಿಯ ವ್ಯಕ್ತಿತ್ವದ ಮೌಲ್ಯ ಕಟ್ಟಿಕೊಡುವ ಪ್ರಯತ್ನ ನಡೆಯಿತು. ಅದನ್ನು ಆಧುನಿಕ ವಚನಕಾರರು ಮುಂದುವರಿಸಿದರು. ಕುವೆಂಪು ಅವರ ಕಿಂಕಿಣಿ, ಬೇಂದ್ರೆ, ಮಹದೇವ ಬಣಕಾರ, ಸಿದ್ದಯ್ಯ ಪುರಾಣಿಕ ಸೇರಿದಂತೆ ಅನೇಕರು ಬಹು ಸಂಸ್ಕೃತಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ಸು ಕಂಡಿದ್ದಾರೆ ಎಂದು ಹೇಳಿದರು.

ದತ್ತಿ ದಾನಿಗಳ ಆಶಯದಂತೆ ಜಾನಪದ ಸಾಹಿತ್ಯದಲ್ಲಿ ಮಹಿಳೆ ವಿಚಾರವಾಗಿ ಉಪನ್ಯಾಸಕ ಡಾ. ಮುತ್ತಯ್ಯ ಮಾತನಾಡಿ, ಮಹಿಳಾಪರವಾಗಿರುವ ಜನಪದ ಸಾಹಿತ್ಯವನ್ನು ಇನ್ನೂ ಅಧ್ಯಯನ ಮಾಡುವ, ಸಂಗ್ರಹಿಸುವ ಕೆಲಸ ಆಗಿಲ್ಲ. ಬಾಯಿಂದ ಬಾಯಿಗೆ ಹರಿದುಬಂದ ಜನಪದ ಸಾಹಿತ್ಯದ ಪೋಷಣೆ ಮಾಡಿದವರು ಮಹಿಳೆಯರು. ಅವರ ನೋವು, ಸಂಕಷ್ಟ, ಅವಮಾನ ಎಲ್ಲವನ್ನೂ ಜನಪದ ಸಾಹಿತ್ಯದ ಮೂಲಕ ಅಭಿವ್ಯಕ್ತಪಡಿಸಿದ್ದರು. ಮಹಿಳೆಯರು ದುಡಿಯುವ ಶಕ್ತಿ ಪಡೆದರೆ ಸಮಾಜದಲ್ಲಿ ಒಳ್ಳೆಯ ಬೆಲೆಯಿದೆ. ಮನೆಯಲ್ಲಿ ತೆಗೆದುಕೊಳ್ಳುವ ತೀರ್ಮಾನದಲ್ಲಿ ಪಾಲು ಬರುತ್ತದೆ. ಆದರೆ ಗ್ರಾಮೀಣ ಬದುಕಿನಲ್ಲಿ ಮಹಿಳೆಯರ ಸ್ಥಿತಿ ಕುರಿತು ಅಧ್ಯಯನ ನಡೆಯಬೇಕು ಎಂದು ವಿವರಿಸಿದರು.

‌ಕಾರ್ಯಕ್ರಮ ಉದ್ಘಾಟಿಸಿ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ದತ್ತಿಗಳು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಚಟುವಟಿಕೆಗಳಿಗೆ ಚೈತನ್ಯ ತುಂಬುತ್ತವೆ. ದಾನಿಗಳು ತಮ್ಮ ಆಪ್ತರನ್ನು ಸ್ಮರಿಸಿಕೊಳ್ಳುವುದು ಒಂದೆಡೆಯಾದರೆ ಉತ್ತಮ ಮೌಲ್ಯಯುತ ವಿಚಾರಗಳನ್ನು ಸಮಕಾಲೀನ ಸಮಾಜಕ್ಕೆ ತಲುಪಿಸುವ ಮಹತ್ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ವಿದ್ಯಾರ್ಥಿನಿಲಯ ಮೇಲ್ವಿಚಾರಕರಾದ ಎನ್. ಚಂದ್ರಕಲಾ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕಾರ್ಯದರ್ಶಿ ಎಂ.ಎಂ.ಸ್ವಾಮಿ, ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ, ಇತರರು ಹಾಜರಿದ್ದರು. ಭಾರ್ಗವಿ ಪ್ರಾರ್ಥಿಸಿ, ಸುಮಾ ಸ್ವಾಗತಿಸಿ, ಸುಪ್ರಿಯಾ ವಂದಿಸಿ, ಕವಿತಾ ನಿರೂಪಿಸಿದರು.

PREV