ಸೋಮರಡ್ಡಿ ಅಳವಂಡಿ ಕೊಪ್ಪಳ
ನಮಗೆ ಸೂರು ಕೊಡಿ ಎಂದು ಆಗ್ರಹಿಸಿ 2023 ನವೆಂಬರ್ ತಿಂಗಳಲ್ಲಿ ಇಲ್ಲಿನ ನಗರಸಭೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು. ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಅವರ ಮಧ್ಯಸ್ಥಿಕೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರು ನೀಡಿದ ಭರವಸೆಯಿಂದಾಗಿ 28 ದಿನಗಳ ಬಳಿಕ ಧರಣಿ ಕೈಬಿಟ್ಟಿದ್ದರು.
ಆದರೆ, ಮೂರು ವರ್ಷವಾದರೂ ಈಗಲೂ ಸೂರು ದೂರ ಉಳಿಯಿತು, ಇನ್ನೂ ನಿವೇಶನ ನೀಡದೆ ಇರುವುದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಆಶ್ರಯ ಕಾಲನಿಯೇ ಆಗಿಲ್ಲ: ಕೊಪ್ಪಳ ನಗರದಲ್ಲಿ ಕಳೆದ 12 ವರ್ಷಗಳಿಂದ ಒಂದೇ ಒಂದು ಆಶ್ರಯ ಕಾಲನಿಯೂ ನಿರ್ಮಾಣವಾಗಿಲ್ಲ. ಹೀಗಾಗಿಯೇ ಕೊಪ್ಪಳದಲ್ಲಿ ನೆಲೆ ಕಂಡುಕೊಂಡಿದ್ದರೂ ನಿವೇಶನ ಹಾಗೂ ಸೂರಿಲ್ಲದೆ ಸಂಕಷ್ಟದಲ್ಲಿರುವ ಕುಟಂಬಗಳು ಶಪಿಸುತ್ತಲೇ ಜೀವನ ಸಾಗಿಸುತ್ತಿದ್ದಾರೆ.
ಈಡೇರದ ಭರವಸೆ: ಅನಿರ್ದಿಷ್ಟಾವಧಿ ಧರಣಿಯನ್ನು ಕೈಗೊಂಡಾಗ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಹೋರಾಟದ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆ ಆಲಿಸಿ, ಶೀಘ್ರದಲ್ಲಿಯೇ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿ ಮೂರು ವರ್ಷವಾದರೂ ಇದುವರೆಗೂ ಸ್ಪಂದನೆ ಮಾಡದೇ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
24 ಎಕರೆ ಭೂಮಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಿ, ನಿವೇಶನಗಳನ್ನಾದರೂ ಹಂಚಿಕೆ ಮಾಡಿದರೆ ಅದರಲ್ಲಿ ಗುಡಿಸಲನ್ನಾದರೂ ಹಾಕಿಕೊಳ್ಳುತ್ತೇವೆ ಎನ್ನುತ್ತಾರೆ ನಿರಾಶ್ರಿತರು. ಆದರೆ, ಆಡಳಿತ ವ್ಯವಸ್ಥೆ ಮಾತ್ರ ಇದಕ್ಕೆ ಸ್ಪಂದಿಸುತ್ತಲೇ ಇಲ್ಲ ಎನ್ನುವುದು ಅವರ ಅಸಮಾಧಾನ.
ಮನೆ ಇದ್ದವರೇ ರಾಜಕೀಯ ಪ್ರಭಾವ ಬಳಕೆ ಮಾಡಿ, ಪಡೆದುಕೊಂಡು ಬಾಡಿಗೆ ನೀಡಿದ್ದಾರೆ ಎನ್ನುವ ಆರೋಪವೂ ಇದೆ. ಇದರ ಬಗ್ಗೆ ಸಮಗ್ರ ತನಿಖೆ ಮಾಡಿದರೆ ಎಲ್ಲ ಬಣ್ಣವೂ ಬಯಲಾಗುತ್ತದೆ ಎನ್ನಲಾಗುತ್ತದೆ.