ನೌಕರರ ಹಿತವೇ ಸಂಘದ ಧ್ಯೇಯ

KannadaprabhaNewsNetwork |  
Published : Feb 05, 2026, 01:30 AM IST
4ಕೆಡಿವಿಜಿ3-ದಾವಣಗೆರೆಯಲ್ಲಿ ಬುಧವಾರ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶನಿ ಗೌಡ, ಖಜಾಂಚಿ ಡಾ.ವೀಣಾ ಕೃಷ್ಣಮೂರ್ತಿ, ಎಂ.ಆಶಾ ರಾಣಿ, ಶೋಭ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.................4ಕೆಡಿವಿಜಿ4-ದಾವಣಗೆರೆಯಲ್ಲಿ ಬುಧವಾರ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶನಿ ಗೌಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರಿ ಮಹಿಳಾ ನೌಕರರ ಸರ್ವತೋಮುಖ ಅಭಿವೃದ್ಧಿಗಾಗಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಸ್ಥಾಪಿಸಿ, ಬೀದರ್‌ನಿಂದ ಚಾಮರಾಜನಗರವರೆಗೆ ರಾಜ್ಯಾದ್ಯಂತ ಎಲ್ಲ ಜಿಲ್ಲೆ ಪ್ರವಾಸ ಮಾಡಿ, ಡಿ ಗ್ರೂಪ್‌ನಿಂದ ಎ ಗ್ರೂಪ್‌ವರೆಗಿನ ಮಹಿಳಾ ನೌಕರರು, ಅಧಿಕಾರಿಗಳನ್ನು ಸಂಘಟಿಸಲಾಗುತ್ತಿದೆ ಎಂದು ಸಂಘದ ರಾಜ್ಯಾಧ್ಯಕ್ಷೆ ರೋಶಿನಿ ಗೌಡ ಹೇಳಿದ್ದಾರೆ.

- ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ರಾಜ್ಯಾಧ್ಯಕ್ಷೆ

- - -

- ನೌಕರರ ರಕ್ಷಣೆಗೆ ಕಾನೂನು, ಒಪಿಎಲ್‌ ಜಾರಿ ಮಾಡಬೇಕು

- ಮಾತೃತ್ವ ರಜೆ 1 ವರ್ಷಕ್ಕೆ ವಿಸ್ತರಿಸಬೇಕು: ರೋಶನಿ ಗೌಡ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸರ್ಕಾರಿ ಮಹಿಳಾ ನೌಕರರ ಸರ್ವತೋಮುಖ ಅಭಿವೃದ್ಧಿಗಾಗಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಸ್ಥಾಪಿಸಿ, ಬೀದರ್‌ನಿಂದ ಚಾಮರಾಜನಗರವರೆಗೆ ರಾಜ್ಯಾದ್ಯಂತ ಎಲ್ಲ ಜಿಲ್ಲೆ ಪ್ರವಾಸ ಮಾಡಿ, ಡಿ ಗ್ರೂಪ್‌ನಿಂದ ಎ ಗ್ರೂಪ್‌ವರೆಗಿನ ಮಹಿಳಾ ನೌಕರರು, ಅಧಿಕಾರಿಗಳನ್ನು ಸಂಘಟಿಸಲಾಗುತ್ತಿದೆ ಎಂದು ಸಂಘದ ರಾಜ್ಯಾಧ್ಯಕ್ಷೆ ರೋಶಿನಿ ಗೌಡ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರಲ್ಲಿ ಶೇ.50ಕ್ಕಿಂತ ಹೆಚ್ಚು ಮಹಿಳೆಯರೇ ಇದ್ದು, ಮಹಿಳಾ ನೌಕರರ ಧ್ವನಿಯಾಗಿ, ಆ ನೌಕರರ ಧ್ವನಿಯಾಗಲು ಸಂಘ ಅಸ್ತಿತ್ವಕ್ಕೆ ಬಂದಿದೆ. ಈಗಾಗಲೇ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಸಂಘವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಪದಾಧಿಕಾರಿಗಳು ಪ್ರವಾಸ ಕೈಗೊಂಡಿದ್ದೇವೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ಸರ್ಕಾರಿ ಮಹಿಳಾ ನೌಕರರಲ್ಲಿ ನಾಯಕತ್ವ ಬೆಳೆಸುವುದು, ಮಹಿಳಾ ನೌಕರರ ಸಮಸ್ಯೆ ನಿವಾರಿಸುವುದು, ಈ ನೌಕರರ ಕುಂದುಕೊರತೆಗಳಿಗೆ ಸ್ಪಂದಿಸುವುದು, ಸಮಸ್ಯೆಗಳ ಪರಿಹಾರಕ್ಕೆ ಸಂಘ ಶ್ರಮಿಸುತ್ತದೆ. ಶೇ.50ಕ್ಕೂ ಹೆಚ್ಚಿರುವ ಮಹಿಳಾ ನೌಕರರ ನೋಂದಣಿ ಅಭಿಯಾನ ಭಾಗವಾಗಿ ಪ್ರವಾಸ ಕೈಗೊಂಡಿದ್ದೇವೆ. ಈವರೆಗೆ 20 ಜಿಲ್ಲೆ ಸಂಪರ್ಕಿಸಿ, ಸಂಘಟನೆ ಮಾಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅಧಿಕಾರಿ, ನೌಕರರು ಸಂಘದ ಸದಸ್ಯತ್ವ ಪಡೆಯಬೇಕು. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗಸ್ಥ ಮಹಿಳೆಯರ ಸಂವಿಧಾನಿಕ ಹಕ್ಕುಗಳನ್ನು ಪ್ರತಿಪಾದಿಸಲು, ಸಾಂಘಿಕ ಹಕ್ಕುಗಳ ಧ್ವನಿಯಾಗಿ ಸಂಘ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಸಂಘಕ್ಕೆ ಸೇರಲು ಮುಕ್ತ ಅವಕಾಶ:

ಪುರುಷ ಪ್ರಧಾನ ಸಂಘಟನೆಗಳು ಮಹಿಳಾ ಸಂಘಟನೆಗಳ, ಸ್ತ್ರೀಯರ ಸಮಸ್ಯೆ ಬಗ್ಗೆ ಪ್ರಮುಖವಾಗಿ ಪರಿಗಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳಾ ನೌಕರರ ಸರ್ವಾಂಗೀಣ ಅಭಿವೃದ್ಧಿಗಾಗಿ ಎಂಬ ಗುರಿ, ಧ್ಯೇಯದಿಂದ 2 ವರ್ಷಗಳ ಹಿಂದೆ ಸಂಘ ಅಸ್ತಿತ್ವಕ್ಕೆ ಬಂದಿದೆ. ರಾಜ್ಯಾದ್ಯಂತ ಮಹಿಳಾ ನೌಕರರಿಂದ ಉತ್ತಮ ಸ್ಪಂದನೆ ಸಿಗುತ್ತಿರುವುದು ನಮ್ಮ ಉತ್ಸಾಹ ಹೆಚ್ಚಿಸಿದೆ. ಪ್ರತಿ ಜಿಲ್ಲೆಯ ಎಲ್ಲ ಇಲಾಖೆಗಳ ಮಹಿಳಾ ಅಧಿಕಾರಿ, ನೌಕರರು ಸಂಘಕ್ಕೆ ಸೇರಲು ಮುಕ್ತ ಅವಕಾಶ ಇದೆ ಎಂದು ಹೇಳಿದರು.

ಸೆ.13 ಮಹಿಳಾ ಸರ್ಕಾರಿ ನೌಕರರ ದಿನ:

ಮಹಿಳಾ ನೌಕರರಿಗೆ ಮಾತೃತ್ವ ರಜೆಯನ್ನು 1 ವರ್ಷಕ್ಕೆ ವಿಸ್ತರಿಸುವುದು, ಗರ್ಭಿಣಿ ನೌಕರರಿಗೆ ವೈದ್ಯಕೀಯ ಪರೀಕ್ಷೆಗಾಗಿ ಮಾಸಿಕ ಒಂದು ದಿನ ವೇತನ ಸಹಿತ ರಜೆ, ಮಹಿಳಾ ನೌಕರರಿಗೆ ಹಬ್ಬದ ಮುಂಗಡ ₹50 ಸಾವಿರಕ್ಕೆ ಹೆಚ್ಚಳ, 8ನೇ ವೇತನ ಆಯೋಗ ಜಾರಿ, ಎನ್‌ಪಿಎಸ್‌ ರದ್ದುಪಡಿಸಿ, ಒಪಿಎಸ್ ಮರುಜಾರಿ, ರಾಜ್ಯ ಸರ್ಕಾರಿ ನೌಕರರ ಸಂಘ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮೇರಿ ದೇವಾಸಿಯಾರ ಜನ್ಮದಿನವಾದ ಸೆ.13ರಂದು ಮಹಿಳಾ ಸರ್ಕಾರಿ ನೌಕರರ ದಿನವೆಂದು ಘೋಷಿಸುವಂತೆ ಸರ್ಕಾರಕ್ಕೆ ಸಂಘ ಒತ್ತಾಯಿಸುತ್ತದೆ ಎಂದು ವಿವರಿಸಿದರು.

ವಿದೇಶ ಪ್ರವಾಸಕ್ಕಾಗಿ ರಾಜ್ಯ ಸರ್ಕಾರಿ ನೌಕರರು ಅರ್ಜಿ ಸಲ್ಲಿಸಿದ 15 ದಿನದೊಳಗೆ ಮಂಜೂರಾತಿ ನೀಡಬೇಕು. 15 ದಿನಗಳ ನಂತರ ಮಂಜೂರಾತಿ ಸ್ವಯಂಚಾಲಿತವಾಗಿ ಜಾರಿಗೊಂಡಿಯೆಂದು ಭಾವಿಸುವುದೆಂದು ಸರ್ಕಾರ ಆದೇಶ ಹೊರಡಿಸಲು ಸಂಘ ಒತ್ತಾಯಿಸಿದೆ. ಕಬ್ಬನ್ ಪಾರ್ಕ್‌ನ ಬಾಲ ಭವನ ಆವರಣದಲ್ಲಿ ಸಂಘದ ಕಚೇರಿ ಸ್ಥಾಪಿಸಿ, ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಶಾಖೆ ಸ್ಥಾಪಿಸಲಾಗಿದೆ ಎಂದರು.

ಸಂಘದಿಂದ ಹಲವಾರು ಒಳ್ಳೆಯ ಕಾರ್ಯಕ್ರಮಗಳ ತಂದಿದ್ದೇವೆ. ಮಹಿಳಾ ನೌಕರರ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯಕ್ರಮ, ಕಾನೂನು ಅರಿವು, ಕುಟುಂಬ– ನೌಕರಿ ಒತ್ತಡ ನಿರ್ವಹಣೆ ಹೇಗೆ? ಎಂಬಿತ್ಯಾದಿ ತರಬೇತಿ ನೀಡಲಾಗಿದೆ. ಡಿ ಗ್ರೂಪ್‌ನಿಂದ ಎ ಗ್ರೂಪ್‌ ಮಹಿಳಾ ನೌಕರರನ್ನು ಸಂಘಟಿಸಿ, ಒಂದೇ ವೇದಿಕೆಗೆ ತರುವ ಗುರಿ ಇದೆ. ರಾಜ್ಯ ಸರ್ಕಾರ ಋತುಚಕ್ರ ರಜೆ ಘೋಷಣೆ ಮಾಡುವಲ್ಲಿ ನಮ್ಮ ಸಂಘವು ನಿರ್ಣಾಯಕ ಪಾತ್ರ ವಹಿಸಿತ್ತು. ಸಿಎಂ, ಡಿಸಿಎಂ, ಸಂಪುಟದ ಸದಸ್ಯರಿಗೆ ಡಿ.4ರಂದು ವಿಧಾನಸೌಧ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ದೊಡ್ಡ ಕಾರ್ಯಕ್ರಮ ಮಾಡಿ, ಕೃತಜ್ಞತೆ ಸಲ್ಲಿಸಿದ್ದೆವು ಎಂದು ರೋಶನಿ ಗೌಡ ಮಾಹಿತಿ ನೀಡಿದರು.

ಈ ಸಂದರ್ಭ ಸಂಘದ ರಾಜ್ಯ ಖಚಾಂಚಿ ಡಾ.ವೀಣಾ ಕೃಷ್ಣಮೂರ್ತಿ, ಎಂ.ಆಶಾರಾಣಿ, ಶೋಭ ಇತರರು ಇದ್ದರು.

- - -

(ಟಾಪ್‌ ಕೋಟ್‌)

ರಾಜ್ಯ ಸರ್ಕಾರಿ ಮಹಿಳಾ ನೌಕರರ ಹಿತ ಕಾಯಲು ನೆರವಾಗುವಂತೆ ವಿವಿಧ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಅವರಿಗೆ ಸಂಘದಿಂದ ಸಲ್ಲಿಸಲಾಗಿದ್ದು, ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸರ್ಕಾರಿ ಮಹಿಳಾ ನೌಕರರ ಮೇಲೆ ದೌರ್ಜನ್ಯವಾದಲ್ಲಿ ಮಹಿಳಾ ನೌಕರರ ಸುರಕ್ಷತೆ ಮತ್ತು ಭದ್ರತೆಗಾಗಿ ಕಾನೂನು ರೂಪಿಸುವಂತೆ ಬೇಡಿಕೆ ಇಟ್ಟಿದ್ದೇವೆ.

- ರೋಶನಿ ಗೌಡ, ರಾಜ್ಯಾಧ್ಯಕ್ಷೆ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ.

- - -

-4ಕೆಡಿವಿಜಿ3.ಜೆಪಿಜಿ:

ದಾವಣಗೆರೆಯಲ್ಲಿ ಬುಧವಾರ ಸುದ್ದಿಗೋಷ್ಠಿ ವೇಳೆ ಸಂಘದ ರಾಜ್ಯಾಧ್ಯಕ್ಷೆ ರೋಶನಿ ಗೌಡ, ಖಜಾಂಚಿ ಡಾ.ವೀಣಾ ಕೃಷ್ಣಮೂರ್ತಿ, ಎಂ.ಆಶಾ ರಾಣಿ, ಶೋಭ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?