ಗದಗ:ಪಂಚಮಸಾಲಿ ಸಮದಾಯದವರು ಜಾತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಬೇಕು. ಈ ವಿಷಯದಲ್ಲಿ ನಮ್ಮ ಸಮುದಾಯದ ಇಬ್ಬರೂ ಸ್ವಾಮೀಜಿಗಳು ತಿಳಿಸಿದಂತೆ ಎಲ್ಲರೂ ಬರೆಸಬೇಕು ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಸಚಿವರಿಗೆ ಅಭಿನಂದನೆ: ಕಾಂಗ್ರೆಸ್ಸಿನಲ್ಲಿರುವ ವೀರಶೈವ -ಲಿಂಗಾಯತ ಸಚಿವರು ಪ್ರಥಮ ಬಾರಿಗೆ ಲಿಂಗಾಯತರ ಪರವಾಗಿ ಧ್ವನಿ ಎತ್ತಿದ್ದಾರೆ, ಅವರಿಗೆ ಅಭಿನಂದನೆಗಳು. ಅದರಲ್ಲಿಯೂ ಸಚಿವ ಎಂ.ಬಿ. ಪಾಟೀಲ ಟೇಬಲ್ ಗುದ್ದಿ ಮಾತನಾಡಿದ್ದಾರೆ. ಇನ್ನುಳಿದಂತೆ ಈಶ್ವರ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ, ಎಚ್.ಕೆ. ಪಾಟೀಲ ಧ್ವನಿ ಎತ್ತಿದ್ದು ಸ್ವಾಗತಾರ್ಹ. ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಮೊಟ್ಟಮೊದಲ ಬಾರಿಗೆ ಸಮಾಜದ ಒಳಿತಿಗಾಗಿ ಧ್ವನಿ ಎತ್ತಿರುವುದಕ್ಕೆ ಸಂತಸವಿದೆ. ರಾಜಕಾರಣ ಇರುತ್ತೆ, ಹೋಗುತ್ತೆ. ಆದರೆ, ರಾಜಕಾರಣಕ್ಕಾಗಿ ಧರ್ಮ, ಸಂಸ್ಕ್ರತಿಯನ್ನು ಮಾರಿಕೊಳ್ಳಬಾರದು ಎಂದರು.
ಅಭಿವೃದ್ಧಿಯಿಂದ ರಾಜ್ಯ ವಂಚಿತವಾಗಿದೆ. ಇದನ್ನು ನಾವು ಆರೋಪ ಮಾಡಿದರೆ ರಾಜಕೀಯ ಅಂತ ಹೇಳುತ್ತಾರೆ. ಆದರೆ, ಕಾಂಗ್ರೆಸ್ಸಿನ ರಾಜು ಕಾಗೆ, ನಾರಾಯಣಸ್ವಾಮಿ ಸೇರಿದಂತೆ ಅನೇಕ ಹಿರಿಯರು ನಾವು ಅಸಹಾಯಕರಾಗಿದ್ದೇವೆ ಅಂತ ಹೇಳುತ್ತಿದ್ದಾರೆ ಎಂದರು.ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಜೇಬಿನಲ್ಲಿ ಸಂವಿಧಾನದ ಸಣ್ಣ ಪುಸ್ತಕವನ್ನೇ ಇಟ್ಟುಕೊಂಡು ಓಡಾಡುತ್ತಾರೆ. ಸಂವಿಧಾನವನ್ನು ಗಾಳಿಗೆ ತೂರಿ ತುರ್ತು ಪರಿಸ್ಥಿತಿ ಹೇರಿದ ಪಕ್ಷದವರು ಸಂವಿಧಾನ ಹಿಡಿದು ಓಡಾಡುತ್ತಿರುವುದು ವಿಪರ್ಯಾಸ ಎಂದು ಸಿ.ಸಿ. ಪಾಟೀಲ ವಾಗ್ವಾಳಿ ನಡೆಸಿದರು.
ಅಕ್ರಮ ಕಟ್ಟಡ ಉದ್ಘಾಟನೆ: ಗದಗ ನಗರದ ರಾಜಕಾಲುವೆ ಮುಚ್ಚಿ ಅದರ ಮೇಲೆ ಕಟ್ಟಡ ನಿರ್ಮಿಸಿರುವ ಸರ್ಕಾರದ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಕ್ಷೇಪಣೆ ಸಲ್ಲಿಸಬೇಕಿತ್ತು. ಅದನ್ನು ಬಿಟ್ಟು ಅವರೇ ಅತ್ಯಂತ ಸಣ್ಣ ಯೋಜನೆಯ ಉದ್ಘಾಟನೆ ಮಾಡಿದರು. ಈಗಾಗಲೇ ಉದ್ಘಾಟನೆಯಾಗಿರುವ ಯೋಜನೆಯನ್ನು ಮತ್ತೊಮ್ಮೆ ಸಿಎಂ ಕಡೆಯಿಂದ ಉದ್ಘಾಟಿಸಿದ್ದು ಏತಕ್ಕಾಗಿ ಎಂದು ಸಿ.ಸಿ. ಪಾಟೀಲ ವ್ಯಂಗ್ಯವಾಡಿದರು.ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ಧಣ್ಣ ಪಲ್ಲೇದ, ಎಂ.ಎಸ್. ಕರಿಗೌಡ್ರ, ಶಾಂತಣ್ಣ ಮುಳವಾಡ, ಸಿ.ಕೆ. ಮಾಳಶೆಟ್ಟಿ, ನಗರಸಭೆಯ ಸದಸ್ಯರಾದ ಮಹಾಂತೇಶ ನಲವಡಿ, ಪ್ರಕಾಶ ಅಂಗಡಿ, ವಿಜಯಲಕ್ಷ್ಮಿ ದಿಂಡೂರ, ಅಯ್ಯಪ್ಪ ಅಂಗಡಿ, ರಾಮನಗೌಡ ದಾನಪ್ಪನಗೌಡ್ರ, ಅಮರನಾಥ ಬೆಟಗೇರಿ, ಶಿವರಾಜಗೌಡ ಹಿರೇಮನಿಪಾಟೀಲ, ಬಸವರಾಜ ಗಡ್ಡೆಪ್ಪನವರ ಉಪಸ್ಥಿತರಿದ್ದರು.
ಒಂದು ಸರ್ಕಾರ ರಾಜ್ಯದ ಅಭಿವೃದ್ಧಿ ಮಾಡಬೇಕು. ಆದರೆ ಕಾಂಗ್ರೆಸ್ ಸರ್ಕಾರ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಎಣಿಸುತ್ತಿದೆ. ಇದು ಅತ್ಯಂತ ಹಾಸ್ಯಾಸ್ಪದ. ಇದೊಂದು ಗುಂಡಿ ಎಣಿಸುವ ಸರ್ಕಾರವಾಗಿದೆ. ತಕ್ಷಣವೇ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಬೇಕು. ಅದು ಬಿಟ್ಟು ಗುಂಡಿ ಎಣಿಸುತ್ತಾ ಕುಳಿತರೆ ಹೇಗೆ? ಎಂದು ಶಾಸಕ ಸಿ.ಸಿ. ಪಾಟೀಲ ಪ್ರಶ್ನಿಸಿದರು.