ಕನ್ನಡಪ್ರಭ ವಾರ್ತೆ ಉಳ್ಳಾಲ
ವಿಶೇಷ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಗೌರವಿಸುವ ಉಳ್ಳಾಲ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ಉದ್ಯಮಿ ರಾಧಾಕೃಷ್ಣ ರೈ ಹೇಳಿದರು.ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ತೊಕ್ಕೊಟ್ಟಿನ ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ನಡೆದ ‘ತಿಂಗಳ ಬೆಳಕು- ಗೌರವ ಅತಿಥಿ’ ಕಾರ್ಯಕ್ರಮದ ಐದನೇ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನೀಟ್ ಪರೀಕ್ಷೆಯಲ್ಲಿ 720ರಲ್ಲಿ 647 (28,782 ಆಲ್ ಇಂಡಿಯಾ ರಾಂಕ್) ಅಂಕ ಗಳಿಸಿ ಮಂಗಳೂರು ಕೆಎಂಸಿಯಲ್ಲಿ ಎಂಬಿಬಿಎಸ್ ಮೆರಿಟ್ ಸೀಟು ಪಡೆದಿರುವ ಕೊಣಾಜೆ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ತನ್ವಿ ಮುಟ್ಟಿಂಜ ಮಾತನಾಡಿ ಇಷ್ಟ ಪಟ್ಟು ಓದಿದರೆ ವಿದ್ಯೆ ಎಂದಿಗೂ ಕಷ್ಟಕರ ಅಲ್ಲ. ಓದುವ ವಾತಾವರಣ ಶಾಂತವಾಗಿರಬೇಕು. ನನಗೆ ಅಪ್ಪ ಅಮ್ಮ ನಿರಂತರ ಪ್ರೋತ್ಸಾಹಿಸಿ ಹುರಿದುಂಬಿಸಿದ್ದಾರೆ ಎಂದರು.ಪ್ರತಿಭಾನ್ವಿತ ವಿದ್ಯಾರ್ಥಿನಿ ತನ್ವಿ ಮುಟ್ಟಿಂಜ, ಎಳೆಯ ವಯಸ್ಸಿನಲ್ಲಿ ಈಜು ಕ್ರೀಡೆಯಲ್ಲಿ ನೋಬಲ್ ವರ್ಲ್ಡ್ ರೆಕಾರ್ಡ್ ಮಾಡಿರುವ ಈಜುಪಟು ಹ್ಯಾಡ್ರಿಯನ್ ವೇಗಸ್, ಉದ್ಯಮಿ ರಾಧಾಕೃಷ್ಣ ರೈ ಅವರನ್ನು ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಸಂತ್ ಎನ್. ಕೊಣಾಜೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಆರೀಫ್ ಯು.ಆರ್., ಕೋಶಾಧಿಕಾರಿ ಬಶೀರ್ ಕಲ್ಕಟ್ಟ ,ಕಾರ್ಯಕಾರಿ ಸಮಿತಿ ಸದಸ್ಯ ಆಸೀಫ್ ಬಬ್ಬುಕಟ್ಟೆ, ಪತ್ರಕರ್ತರಾದ ಜಯಂತ್ ಸಂಕೋಳಿಗೆ, ಗಂಗಾಧರ್ ನೀರಾರಿ ಉಪಸ್ಥಿತರಿದ್ದರು.ಸಂಘದ ಉಪಾಧ್ಯಕ್ಷರಾದ ದಿನೇಶ್ ನಾಯಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ ಪೊಯ್ಯತ್ತಬೈಲು ನಿರೂಪಿಸಿ, ವಂದಿಸಿದರು. ಪತ್ರಕರ್ತೆ ಸುಶ್ಮಿತಾ ಸಾಮಾನಿ ಸನ್ಮಾನಿತರ ಅಭಿನಂದನಾ ಪತ್ರ ವಾಚಿಸಿದರು.
ಈಜಿನಲ್ಲಿ ಇನ್ನಷ್ಟು ಸಾಧನೆಗೈದು ಗಿನ್ನೆಸ್ ರೆಕಾರ್ಡ್ ಮಾಡುವ ಮಹದಾಸೆ ಇದೆ. ದೈಹಿಕ ಕ್ಷಮತೆಗಾಗಿ ಮಿತ ಆಹಾರ ಸೇವನೆ ಅದರಲ್ಲೂ ಮನೆಯಲ್ಲಿ ತಯಾರಿಸಿದ ಖಾದ್ಯಗಳನ್ನೇ ಸೇವಿಸುತ್ತೇನೆ ಎಂದು ಈಜು ಪಟು ಹ್ಯಾಡ್ರಿಯನ್ ವೇಗಸ್ ಹೇಳಿದರು.