ಕೊಪ್ಪಳ: ಎಲ್ಲೋ ಸ್ವಿಚ್ ಇದೆ, ಇನ್ನೆಲ್ಲೋ ಲೈಟ್ ಉರಿಯುತ್ತಿದೆ!
ಇದು, ಯತ್ನಾಳ ಬಂಡಾಯದ ಕುರಿತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರ ಮಾರ್ಮಿಕ ಹೇಳಿಕೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಹೇಳಿದಾಗ, ಯಾವ ಗುಂಪಿನಿಂದ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಯತ್ನಾಳ್‌ರ ಹೋರಾಟಕ್ಕೆ ಸಂಬಂಧಿಸಿದಂತೆ ಎಲ್ಲೋ ಸ್ವಿಚ್ ಇದೆ, ಇನ್ನೆಲ್ಲೋ ಲೈಟ್ ಉರಿಯುತ್ತಿದೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ ಅವರ ಕುರಿತು ಕ್ರಮವಹಿಸಲು ರಾಷ್ಟ್ರೀಯ ನಾಯಕರು ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಬ್ಯೂಸಿ ಇದ್ದರು. ಇನ್ಮುಂದೆ ರಾಜ್ಯದ ಕುರಿತು ಗಮನ ಹರಿಸಲಿದ್ದಾರೆ. ಯತ್ನಾಳ ಅವರ ವಿಷಯವನ್ನು ರಾಷ್ಟ್ರೀಯ ನಾಯಕರು ನೋಡಿಕೊಳ್ಳುತ್ತಾರೆ ಎಂದರು.
ವಕ್ಫ್ ಬೋರ್ಡ್ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ನಡೆಸುತ್ತಿದೆ. ಇದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಅದರ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು. ಸದನ ಒಳಗೆ ಮತ್ತು ಹೊರಗೂ ಪ್ರತಿಭಟನೆಯನ್ನು ತೀವ್ರಗೊಳಿಸಿ, ರಾಜ್ಯದ ರೈತರ ಮತ್ತು ಮಠಗಳ ಹಿತ ಕಾಪಾಡಲಾಗುವುದು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ವಕ್ಫ್ ಆಸ್ತಿಯ ರಕ್ಷಣೆ ಕಾರ್ಯ ನಡೆದಿದೆ ಎಂದು ವಕ್ಫ್ ಖಾತೆಯ ಸಚಿವ ಜಮೀರ್ ಅಹಮದ್ ಅವರೇ ಹೇಳಿದ್ದಾರೆ. ಹಾಗಾದರೆ ಇದಕ್ಕೆ ಮುಖ್ಯಮಂತ್ರಿ ಕುಮ್ಮಕ್ಕು ಇದೆಯಾ ಎನ್ನುವುದನ್ನು ಸಿದ್ದರಾಮಯ್ಯ ಅವರೇ ಹೇಳಬೇಕು ಎಂದರು.
ಉಪ ಚುನಾವಣೆಯಲ್ಲಿ ಗೆದ್ದಾಕ್ಷಣ ಕಾಂಗ್ರೆಸ್ ಸರ್ಕಾರದ ಮೇಲೆ, ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಇರುವ ಎಲ್ಲ ಕೇಸ್‌ಗಳಿಗೂ ನ್ಯಾಯ ಸಿಕ್ಕಿತು ಎಂದಲ್ಲ. ಹಾಗೇನಾದರೂ ಎನ್ನುವುದಾದರೆ ಸಿದ್ದರಾಮಯ್ಯ ಅವರು ಮೊದಲು ಕೋರ್ಟ್‌ಗೆ ಅಪ್‌ಡೇಟ್ ಹಾಕಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.ರಾಜ್ಯ ಸೇರಿದಂತೆ ದೇಶದಾದ್ಯಂತ ನಡೆದ ಉಪಚುನಾವಣೆಯ ಫಲಿತಾಂಶ ಗಮನಿಸಿ, ಅದರಲ್ಲಿ ಯಾವ ಸರ್ಕಾರ ಇರುತ್ತದೆಯೋ ಅದೇ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ. ನಮ್ಮ ಸರ್ಕಾರ ಇದ್ದಾಗಲೂ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದೆ. ಹೀಗಾಗಿ, ಇದಕ್ಕೇನೂ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಶಾಸಕರಾದ ದೊಡ್ಡನಗೌಡ ಪಾಟೀಲ್, ಹೇಮಲತಾ ನಾಯಕ, ಜನಾರ್ದನ ರೆಡ್ಡಿ, ಮಾಜಿ ಸಚಿವ ಹಾಲಪ್ಪ ಆಚಾರ್, ಡಾ. ಬಸವರಾಜ ಕ್ಯಾವಟರ ಇದ್ದರು.