ಸೋಮರಡ್ಡಿ ಅಳವಂಡಿ ಕೊಪ್ಪಳ
ತೊಗಲು ಗೊಂಬೆಯಾಡಿಸುತ್ತಲೇ 85 ವಸಂತ ಪೂರೈಸಿರುವ ಭೀಮವ್ವನಿಗೆ ಪದ್ಮಶ್ರೀ ಗೌರವ ಬಂದಿದ್ದು, ಜಿಲ್ಲೆಯ ಜನರ ಸಂತಸ ಹೆಚ್ಚಿಸಿತು ಮತ್ತು ಮೊದಲ ಬಾರಿಗೆ ಜಿಲ್ಲೆಗೆ ಪದ್ಮಶ್ರೀ ಗೌರವ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ.
ಕೊಪ್ಪಳ ಬಳಿ ಬೃಹತ್ ಕಾರ್ಖಾನೆ ಸ್ಥಾಪಿಸುವುದಕ್ಕೆ ರಾಜ್ಯ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅಸ್ತು ಎಂದಿದ್ದು ಜಿಲ್ಲೆಯ ಜನರ ನಿದ್ದೆಗೆಡಿಸಿತು. ಇದರ ವಿರುದ್ಧ ದೊಡ್ಡ ಆಂದೋಲನವೇ ಆಯಿತು. ಖುದ್ದು ಶ್ರೀಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಹೋರಾಟವಾಯಿತು. ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಜಂಟಿಯಾಗಿ ಅನಿರ್ಧಿಷ್ಟಾವಧಿ ಧರಣಿ ಕಳೆದ 70 ದಿನಗಳಿಂದ ನಡೆಸುತ್ತಿದ್ದಾರೆ.ಜತೆಗೆ ಮೆಕ್ಕೆಜೋಳ ಬೆಲೆ ಕುಸಿತ, ಬಾಳೆ ಹಣ್ಣಿನ ಬೆಲೆ ಕುಸಿತ ಸೇರಿದಂತೆ ರೈತರ ಉತ್ಪನ್ನಗಳ ಬೆಲೆ ಕುಸಿತ ಗಾಯಕ್ಕೆ ನೆರೆಯ ಬರೆ ಕೋಟ್ಯಂತರ ಹಾನಿಯಾಗುವಂತಾಯಿತು.
ಮೂರು ರಾಜ್ಯೋತ್ಸವ ಪ್ರಶಸ್ತಿ: ಪ್ರಸಕ್ತ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಕೊಪ್ಪಳ ಜಿಲ್ಲೆಗೆ ಜಾಕ್ ಪಾಟ್ ಹೊಡೆದಿದೆ. ಸ್ಥಳೀಯರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಇರುವುದರಿಂದ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಅಕಾಡಮಿಗಳಲ್ಲಿ ಸಾಕಷ್ಟು ಪ್ರಾಶಸ್ತ್ಯ ದೊರೆತಿದೆ.ಸಹಕಾರ ಕ್ಷೇತ್ರದ ಶೇಖರಗೌಡ ಮಾಲಿಪಾಟೀಲ್, ಶಿವರಾಯಪ್ಪ ಚೌಡ್ಕಿ ಹಾಗೂ ದೇವೇಂದ್ರಕುಮಾರ ಪತ್ತಾರ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿ.
ಅಕ್ರಮ ಮರಳು ದಂಧೆಗೆ ಬ್ರೇಕ್: ಹಿರೇಹಳ್ಳದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಯ ಕುರಿತು ಕನ್ನಡ ಪ್ರಭ ಸರಣಿ ವರದಿ ಮೂಲಕ ಗಮನ ಸೆಳೆದಾಗ ಜಿಲ್ಲಾಡಳಿತ ಕಠಿಣ ಕ್ರಮಕೈಗೊಂಡಿತು. ಹಿರೇಹಳ್ಳದಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿ ಅಲ್ಲಿದ್ದ ಬೋಟ್ ಗಳನ್ನು ಪುಡಿ,ಪುಡಿ ಮಾಡಲಾಯಿತು. ಹಲವರ ಮೇಲೆ ಎಫ್ ಐ ಆರ್ ದಾಖಲಿಸಲಾಯಿತು.₹2500 ಕೋಟಿ ಕಾಮಗಾರಿ: ಸಿಎಂ ಸಿದ್ದರಾಮಯ್ಯ ಕೊಪ್ಪಳ ನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ವಿವಿಧ ₹2500 ಕೋಟಿ ಕಾಮಗಾರಿಗೆ ಚಾಲನೆ ನೀಡಿದರು.
ಪ್ರೇರಣಾ ಸಂಸ್ಥೆ ವಿವಾದ: ಕೊಪ್ಪಳ ನಗರದಲ್ಲಿ ಕ್ರಷರ್ ಮಾಲಿಕರು ಜಂಟಿಯಾಗಿ ಆರಂಭಿಸಿದ ಪ್ರೇರಣಾ ಸಂಸ್ಥೆ ದೊಡ್ಡ ವಿವಾದಕ್ಕೆ ಕಾರಣವಾಯಿತು. ಅದರಲ್ಲೂ ಸಂಸದ ರಾಜಶೇಖರ ಹಿಟ್ನಾಳ ವಿರುದ್ಧ ಗುತ್ತಿಗೆದಾರರು ದೊಡ್ಡ ಪ್ರತಿಭಟನೆ ನಡೆಸಿದರು, ಕೊನೆಗೆ ಸಂಧಾನದಲ್ಲಿ ಸಮಸ್ಯೆ ಇತ್ಯರ್ಥವಾಯಿತಾದರೂ ಈಗಲೂ ಒಳಗೊಳಗೆ ಕುದಿಯುತ್ತಿದೆ.ಮಣಿದ ಸಂಸದರು: ಕೊಪ್ಪಳ ನಗರದ ರೈಲ್ವೆ ಗೇಟ್ 63ಕ್ಕೆ ಸೇತುವೆ ನಿರ್ಮಾಣವಾಗಿದ್ದರೂ ಸಂಚಾರ ಮುಕ್ತ ಮಾಡದೆ ಇರುವುದನ್ನು ವಿರೋಧಿಸಿ ಮಹಿಳೆಯರು ಹೋರಾಟ ಮಾಡಿದ ಪರಿಣಾಮ ಸಂಸದ ರಾಜಶೇಖರ ಹಿಟ್ನಾಳ ಸ್ಪಂದಿಸಿ, ಸಂಚಾರ ಮುಕ್ತ ಮಾಡಿದರು.
ಸಂಕಷ್ಟದಲ್ಲಿ ರೈತ: ಈರುಳ್ಳಿ,ಮೆಕ್ಕೆಜೋಳ ಹಾಗೂ ಬಾಳಹಣ್ಣು ಸೇರಿದಂತೆ ರೈತರ ಉತ್ಪಾದನೆಯ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೆ ಪ್ರಸಕ್ತ ವರ್ಷ ರೈತರು ಗೋಳಾಡಿದರು. ತೀವ್ರ ಸಂಕಷ್ಟ ಎದುರಿಸಿದರು. ಬೆಲೆ ಕುಸಿತದ ವಿರುದ್ಧ ಹೋರಾಟ ಮಾಡಿದರೂ ಪ್ರಯೋಜನ ಆಗಲಿಲ್ಲ. ರೈತರ ಬಹುತೇಕ ಉತ್ಪನ್ನಗಳಿಗೆ ಪ್ರಸಕ್ತ ವರ್ಷ ದರ ಸಿಗದೆ ಇರುವುದು ಮಾತ್ರ ರೈತರ ನೋವಿಗೆ ಕಾರಣವಾಯಿತು.ಹಿರೇಬೆಣಕಲ್ ಗೆ ಕಾಯಕಲ್ಪ: ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಕರ್ನಾಟಕ ಏಳು ಅದ್ಭುತಗಳ ಪಟ್ಟಿಯಲ್ಲಿರುವ ಹಿರೇಬೆಣಕಲ್ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕಾಯಕಲ್ಪ ಮಾಡಿ ₹80 ಲಕ್ಷ ಬಿಡುಗಡೆ ಮಾಡಿರುವುದನ್ನು ಖುದ್ದು ಪ್ರವಾಸೋಧ್ಯಮ ಸಚಿವ ಎಚ್.ಕೆ. ಪಾಟೀಲ್ ಅವರೇ ಹೇಳಿದರು. ಅಷ್ಟೇ ಅಲ್ಲ ಈ ಕುರಿತು ಆದೇಶ ಮಾಡಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಕೊಪ್ಪಳ ನಗರದಲ್ಲಿ ಈಗಾಗಲೇ ಇರುವ ಕಿಮ್ಸ್ ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರಾಜ್ಯ ಸರ್ಕಾರ ಅಸ್ತು ಎಂದಿತು. ಅಷ್ಟೇ ಅಲ್ಲ ಬಜೆಟ್ ನಲ್ಲಿ ₹200 ಕೋಟಿ ಅನುದಾನ ಘೋಷಣೆ ಮಾಡಲಾಯಿತು.ತುಂಗಭದ್ರಾ ನದಿಗೆ ಆರತಿ: ಪ್ರಸಕ್ತ ವರ್ಷ ಶ್ರೀ ಹುಲಿಗೆಮ್ಮ ದೇವಸ್ಥಾನದ ಬಳಿ ತುಂಗಭದ್ರಾ ನದಿಗೆ ಆರತಿ ಮಹೋತ್ಸವ ಪ್ರಾರಂಭಿಸಲಾಯಿತು. ಮೊದಲ ವರ್ಷ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಹಾಲು ಒಕ್ಕೂಟಕ್ಕೆ ಅಧ್ಯಕ್ಷ : ರಾಬಕೊವಿ ಹಾಲು ಒಕ್ಕೂಟಕ್ಕೆ ಇದೇ ಮೊದಲ ಬಾರಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಕೆಆರ್ ಐಡಿಎಲ್ ಸಿಬ್ಬಂದಿಯ ಮನೆ ಮೇಲೆ ದಾಳಿ ಮಾಡಿದಾಗ ಬರೋಬ್ಬರಿ ₹100 ಕೋಟಿ ಅಂದಾಜು ಅಸ್ತಿಯ ಲೆಕ್ಕಾಚಾರ ನಾಡಿನಾದ್ಯಂತ ದೊಡ್ಡ ಸುದ್ದಿಯಾಯಿತು.ಅದರಲ್ಲೂ ಕಸಗೂಡಿಸುತ್ತಿದ್ದವನ ಬಳಿ ನೂರು ಕೋಟಿ ಆಸ್ತಿ ಎನ್ನುವ ತಲೆಬರಹ ಭಾರಿ ಸದ್ದು ಮಾಡಿದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು.
ಅಣು ಸ್ಥಾವರಕ್ಕೆ ರೆಡ್ ಸಿಗ್ನಲ್: ಕೊಪ್ಪಳ ಬಳಿ ಅಣುಸ್ಥಾವರ ಸ್ಥಾಪನೆಯ ಕುರಿತು ನಡೆದಿದ್ದ ಪ್ರಯತ್ನಕ್ಕೆ ಸಚಿವ ಸಂಪುಟ ಸಭೆಯಲ್ಲಿ ರೆಡ್ ಸಿಗ್ನಲ್ ಸಿಕ್ಕಿದೆ.ದಡ್ಡ ವಿದ್ಯಾರ್ಥಿಗಳಿಗೆ ಟೀಸಿ: ದಡ್ಡ ವಿದ್ಯಾರ್ಥಿಗಳಿಗೆ ಟೀಸಿ ಎನ್ನುವ ತಲೆಬಹರದಡಿ ಕನ್ನಡಪ್ರಭ ಪ್ರಕಟಿಸಿದ ವಿಶೇಷ ವರದಿ ರಾಜ್ಯಾದ್ಯಂತ ಭಾರಿ ಸದ್ದು ಮಾಡಲಾಯಿತು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸುತ್ತಿದೆ.
ಗಮನ ಸೆಳೆದ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಕಾರ್ಯಾಗಾರ: 20265 ವರ್ಷದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುರ್ವಣ ನ್ಯೂಸ್ ಹಮ್ಮಿಕೊಂಡಿದ್ದ 2 ಕಾರ್ಯಾಗಾರಗಳು ಗಮನ ಸೆಳೆದವು. ಮಕ್ಕಳಲ್ಲಿ ಅರಣ್ಯ ಮತ್ತು ಪ್ರಾಣಿ ಸಂಕುಲಗಳ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಯಿತು.40 ಪ್ಲಸ್ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಿವಿಸಿ ಫೌಂಡೇಶನ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕುಷ್ಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ ಕಾರ್ಯಾಗಾರದಲ್ಲಿ ಬರೋಬ್ಬರಿ 2 ಸಾವಿರಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಇಡೀ ದಿನ ಸನ್ಮಾರ್ಗ ಗೆಳೆಯರ ಬಳಗದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಯಶಸ್ವಿಯಾಗಿ ನಡೆಸಲಾಯಿತು.
ಹರಿದ ನೆರವು: ಪಿಯುಸಿಯಲ್ಲಿ ಶೇ.98 ರಷ್ಟು ಅಂಕ ಗಳಿಸಿ ಹೆಚ್ಚಿನ ಓದಿಗೆ ಅಡ್ಡಿ ಎನ್ನುವ ತಲೆಬಹರದಡಿ ಕನ್ನಡಪ್ರಭ ಪ್ರಕಟಿಸಿದ ವಿಶೇಷ ವರದಿಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತಲ್ಲದೆ ಪ್ರತಿಭಾನ್ವಿತ ವಿದ್ಯಾರ್ಥಿನಿ ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಭೂಮಿಕಾ ಮೇಟಿ ಅವರಿಗೆ ಸಾಕಷ್ಟು ನೆರವು ಹರಿದು ಬಂದಿತು. ಉನ್ನತ ಶಿಕ್ಷಣಕ್ಕೆ ಇದ್ದ ಸಮಸ್ಯೆ ನಿವಾರಣೆಯಾಯಿತು.