ಕರಾವಳಿಯ ಯುವಕನೀಗ ಇಂಡೋನೇಷ್ಯಾ ಕ್ರಿಕೆಟಿಗ!

KannadaprabhaNewsNetwork |  
Published : Nov 26, 2023, 01:15 AM IST
ಕರಾವಳಿಯ ಯುವಕನೀಗಇಂಡೋನೇಷ್ಯಾ ಕ್ರಿಕೆಟಿಗ! | Kannada Prabha

ಸಾರಾಂಶ

ಕುಕ್ಕಿಪ್ಪಾಡಿಯ ಕೃಷಿಕ ಮಹಾಬಲ ಶೆಟ್ಟಿ ಪುಷ್ಪಾ ದಂಪತಿಯ ಮೂವರು ಪುತ್ರರ ಪೈಕಿ ಕಿರಿಯವನಾದ ಧನೇಶ್, ಬಾಲ್ಯದಿಂದಲೂ ಕ್ರಿಕೆಟ್ ಆಸಕ್ತಿಯಲ್ಲೇ ಬೆಳೆದವರು. ಹೆತ್ತವರ ಶಿಸ್ತಿನ ಬೇಲಿಯನ್ನೂ ಜಿಗಿದು ಬ್ಯಾಟು ಹಿಡಿದದ್ದೇ ಹೆಚ್ಚು. ಸಿದ್ಧಕಟ್ಟೆಯ ಸಂತ ಬಾರ್ತಲೋಮಿಯ ಪ್ರಾಥಮಿಕ ಶಾಲೆ, ವಾಮದಪದವು ಸರ್ಕಾರಿ ಹೈಸ್ಕೂಲ್, ಎಸ್.ವಿ.ಎಸ್. ಬಂಟ್ವಾಳದಲ್ಲಿ ಪಿಯುಸಿ, ಮೂಡುಬಿದಿರೆಯ ಎಸ್.ಎನ್.ಎಂ. ಪಾಲಿಟೆಕ್ನಿಕ್ನಲ್ಲಿ ಇಸಿ ಡಿಪ್ಲೊಮಾ ಪಡೆದ ಧನೇಶ್ ಬಳಿಕ ದೂರಶಿಕ್ಷಣದಲ್ಲಿ ಎಂಜಿನಿಯರಿಂಗ್ ಪದವೀಧರರಾದರು.

ಗಣೇಶ್ ಕಾಮತ್

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಶಾಲಾ ಕಾಲೇಜು ದಿನಗಳಲ್ಲಿ ಬೆಳೆಸಿಕೊಂಡ ಕ್ರಿಕೆಟ್ ಆಸಕ್ತಿ, ಮನದಾಳದ ಆಸೆಕಟ್ಟಿಕೊಂಡ ಕನಸು ಕೊನೆಗೂ ನನಸಾಗಿದೆ. ಗ್ರಾಮೀಣ ಯುವಕನೋರ್ವ ವಿದೇಶಕ್ಕೆ ತೆರಳಿ ತನ್ನ ಬದುಕನ್ನು ಕಟ್ಟಿಕೊಳ್ಳುವ ಜತೆಗೆ ಬಹುಕಾಲದ ಕನಸನ್ನೂ ನನಸಾಗಿಸಿಕೊಂಡಿದ್ದಾನೆ. ಓರ್ವ ಕ್ರಿಕೆಟ್ ಆಟಗಾರನಾಗಬೇಕು ಎಂದಿದ್ದ ಬಂಟ್ವಾಳ ಕುಕ್ಕಿಪ್ಪಾಡಿ, ಹುಣಸೆಬೆಟ್ಟು ನಿವಾಸಿ ಧನೇಶ್ ಶೆಟ್ಟಿ ಇದೀಗ ದೂರದ ಇಂಡೋನೇಷ್ಯಾದಲ್ಲಿ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಸಾಧನೆಯ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಕುಕ್ಕಿಪ್ಪಾಡಿಯ ಕೃಷಿಕ ಮಹಾಬಲ ಶೆಟ್ಟಿ ಪುಷ್ಪಾ ದಂಪತಿಯ ಮೂವರು ಪುತ್ರರ ಪೈಕಿ ಕಿರಿಯವನಾದ ಧನೇಶ್, ಬಾಲ್ಯದಿಂದಲೂ ಕ್ರಿಕೆಟ್ ಆಸಕ್ತಿಯಲ್ಲೇ ಬೆಳೆದವರು. ಹೆತ್ತವರ ಶಿಸ್ತಿನ ಬೇಲಿಯನ್ನೂ ಜಿಗಿದು ಬ್ಯಾಟು ಹಿಡಿದದ್ದೇ ಹೆಚ್ಚು. ಸಿದ್ಧಕಟ್ಟೆಯ ಸಂತ ಬಾರ್ತಲೋಮಿಯ ಪ್ರಾಥಮಿಕ ಶಾಲೆ, ವಾಮದಪದವು ಸರ್ಕಾರಿ ಹೈಸ್ಕೂಲ್, ಎಸ್.ವಿ.ಎಸ್. ಬಂಟ್ವಾಳದಲ್ಲಿ ಪಿಯುಸಿ, ಮೂಡುಬಿದಿರೆಯ ಎಸ್.ಎನ್.ಎಂ. ಪಾಲಿಟೆಕ್ನಿಕ್ನಲ್ಲಿ ಇಸಿ ಡಿಪ್ಲೊಮಾ ಪಡೆದ ಧನೇಶ್ ಬಳಿಕ ದೂರಶಿಕ್ಷಣದಲ್ಲಿ ಎಂಜಿನಿಯರಿಂಗ್ ಪದವೀಧರರಾದರು.ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಉದ್ಯೋಗಿಯಾಗಿ ವೃತ್ತಿ ಜೀವನ ಆರಂಭಿಸಿದಾಗಲೂ ಮಾರ್ತಳ್ಳಿ ಎಸಿಸಿ ಕ್ರಿಕೆಟ್ ಕ್ಲಬ್ ಪರ ಆಡಿದ್ದರು ಧನೇಶ್. ಬಳಿಕ ಸಾಫ್ಟ್ ವೇರ್ ಉದ್ಯೋಗಿಯಾದಾಗಲೂ ಕ್ರಿಕೆಟ್ ಆಸಕ್ತಿ ಬೆಳೆಯುತ್ತಲೇ ಇತ್ತು. ಉದ್ಯೋಗದ ಕಂಪನಿ ಇಂಡೋನೇಷ್ಯಾದಲ್ಲಿ ದುಡಿಯಲು ಕೊಟ್ಟ ಅವಕಾಶ ಧನೇಶ್‌ಗೆ ಅದೃಷ್ಟದ ಬಾಗಿಲನ್ನೇ ತೆರೆದಿದೆ. ಇಂಡೊನೇಷ್ಯಾದಲ್ಲೂ ತನ್ನ ಆಸಕ್ತಿಯ ಕ್ರಿಕೆಟ್ ಬೆನ್ನಟ್ಟಿ ಜಕಾರ್ತಾದಲ್ಲಿ ಸೌತ್ ಈಸ್ಟ್ ಏಷ್ಯಾದ ಮ್ಯಾವ್‌ಕ್ರಿಸ್ ಕ್ಲಬ್‌ಗೆ ಸೇರಿಕೊಳ್ಳುವಲ್ಲಿ ಯಶಸ್ಸು ಕಂಡ ಅವರು ಸಿಕ್ಕ ಅವಕಾಶದಲ್ಲಿ ಎಲ್ಲರ ಗಮನ ಸೆಳೆದರು.

* ಆಲ್‌ರೌಂಡರ್‌ ಆಗಿ ಪದಾರ್ಪಣೆ2021ರಲ್ಲಿ ಸಿಂಗಾಪುರದಲ್ಲಿ ಕೌಂಟಿ ಆಡುವ ಕನಸು ನನಸಾಯಿತು. 2022ರ ಐಸಿಎಲ್ ಸಹಿತ ಸೆಲೆಕ್ಷನ್ ರೌಂಡ್ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಧನೇಶ್ ಕೊನೆಗೂ ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಲ್‌ರೌಂಡರ್ ಆಟಗಾರ ಎಂಬ ಅರ್ಹತೆಯೊಂದಿಗೆ ಆಯ್ಕೆಯಾದರು. ನ.20ರಂದು ಕಾಂಬೋಡಿಯಾ ವಿರುದ್ಧ ಟಿ-20 ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾಗಿದೆ. ಮುಂದಿನ ತಿಂಗಳು ಫಿಲಿಪೈನ್ಸ್ ವಿರುದ್ಧ ಸರಣಿಯೂ ನಿಗದಿಯಾಗಿದೆ. ಅದೃಷ್ಟ ಎನ್ನುವುದು ಇಂಡೋನೇಷ್ಯಾದ ತಂಡದ ಕೈ ಹಿಡಿದು ಅರ್ಹತೆ ಲಭಿಸಿದರೆ 2025ರಲ್ಲಿ ನಡೆಯುವ ಐಸಿಸಿ ಟಿ-20 ಟೂರ್ನಿಯಲ್ಲಿ ಕಾಣಿಸಿಕೊಂಡರೂ ಆಶ್ಚರ್ಯವಿಲ್ಲ. ಅಂದ ಹಾಗೆ ಇಂಡೋನೇಷ್ಯಾದ ತಂಡದಲ್ಲೀಗ ಮಹಾರಾಷ್ಟ್ರದ ಪದ್ಮಾಕರ್, ತಮಿಳುನಾಡಿನ ಕಿರುಬ ಶಂಕರ್ ಜತೆ ಕರಾವಳಿಯ ಕನ್ನಡಿಗ ಧನೇಶ್ ಶೆಟ್ಟಿ ಹೀಗೆ ಮೂವರು ಭಾರತೀಯರಿದ್ದಾರೆ ಎನ್ನುವುದೇ ವಿಶೇಷ!ಮುಂಬೈನ ರಣಜಿ ತಂಡದ ಜತೆ ಪಂದ್ಯಗಳನ್ನಾಡುವ ಪ್ರಯತ್ನವೂ ಇಂಡೋನೇಷ್ಯಾ ನಡೆಸುತ್ತಿದೆ. ಸದ್ಯ ಇಂಡೋನೇಷ್ಯಾದ ಕ್ರಿಕೆಟ್ ಬೆಳವಣಿಗೆಗೆ ಹಾತೊರೆಯುತ್ತಿದೆ. ಹಾಗಾಗಿ ಸ್ಥಳೀಯ ಪ್ರತಿಭೆಗಳ ಜತೆ ಹೊರದೇಶದ ಪ್ರತಿಭಾನ್ವಿತರನ್ನೂ ಪರಿಗಣಿಸಿ ಪ್ರೋತ್ಸಾಹಿಸಲಾಗುತ್ತಿದೆ ಎನ್ನುತ್ತಾರೆ ಧನೇಶ್.ತುಂಟಾಟದ ವಿದ್ಯಾರ್ಥಿಯಾಗಿದ್ದ ಧನೇಶ್, ಏರಿದ ಎತ್ತರ, ಮಾಡಿರುವ ಸಾಧನೆಯ ಬಗ್ಗೆ ಖುಷಿಯಿದೆ ಅಂತಾರೆ ಮೂಡುಬಿದಿರೆ ಎಸ್.ಎನ್.ಎಂ. ಪಾಲಿಟೆಕ್ನಿಕ್ ಪ್ರಾಂಶುಪಾಲ ಜೆ.ಜೆ.ಪಿಂಟೋ. ಮಗನ ಒತ್ತಾಸೆಯಂತೆ ಇಂಡೋನೇಷ್ಯಾಕ್ಕೆ ತೆರಳಿ ಆತನ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಪತಿಯ ಜತೆ ಕಣ್ತುಂಬಿಸಿಕೊಂಡ ಖುಷಿಯಲ್ಲಿರುವ ಅಮ್ಮ ಪುಷ್ಪಾ, ಬಾಲ್ಯದಲ್ಲಿ ಮಗನ ತುಂಟಾಟ, ಕ್ರಿಕೆಟ್ ಹುಚ್ಚು ಈ ಮಟ್ಟಕ್ಕೆ ಬೆಳೆಯುತ್ತದೆ ಅಂದುಕೊಂಡಿರಲಿಲ್ಲ. ಅವನ ಇಬ್ಬರು ಅಣ್ಣಂದಿರಿಗೂ ಕ್ರಿಕೆಟ್ ಇಷ್ಟ. ಧನೇಶ್ ಸಿಕ್ಕಿದ ಅವಕಾಶದಲ್ಲಿ ಎಲ್ಲರಿಗೂ ಕೀರ್ತಿ ತರುವಂತಾಗಲಿ ಎಂದು ಹೃದಯ ತುಂಬಿ ಹಾರೈಸುತ್ತಾರೆ.ಇಂಡೋನೇಷ್ಯಾ ನನಗೆ ರಾಷ್ಟ್ರೀಯ ಕ್ರಿಕೆಟ್ ತಂಡ ಪ್ರತಿನಿಧಿಸುವ ಅವಕಾಶ ನೀಡಿದೆ. ಹಾಗಾಗಿ ತಂಡ ಸಾಧನೆಯಿಂದ ಮಿಂಚುವಂತೆ, ಬೆಳೆದು ಉನ್ನತ ಹಂತಕ್ಕೆ ಬರುವಂತೆ ಮಾಡುವುದೇ ನನ್ನ ಮೊದಲ ಆದ್ಯತೆ. ಧೋನಿ , ಜಹೀರ್ ಖಾನ್ ನನ್ನ ಹೀರೋಗಳು. ಭಾರತ ಈ ಬಾರಿ ವಿಶ್ವಕಪ್ ವಂಚಿತವಾಗಿರುವುದಕ್ಕೆ ನೋವಿದೆ. ನನ್ನ ದೇಶದ ತಂಡಕ್ಕೆ ಎಂದಿಗೂ ನನ್ನ ಬೆಂಬಲ. ಟೀಂ ಇಂಡಿಯಾ ಜತೆಗೆ ಇಂಡೋನೇಷ್ಯಾ ತಂಡದಲ್ಲಿ ಆಡುವ ಅವಕಾಶ ಸಿಕ್ಕರೂ ಸಂತೋಷ

। ಧನೇಶ್‌ ಶೆಟ್ಟಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀರಂಗನಾಥಸ್ವಾಮಿ ದೇಗುಲದಲ್ಲಿ ಸೌಕರ್ಯ ಕೊರತೆ
ಯುವಜನರನ್ನು ಸೆಳೆಯುವ ಶಕ್ತಿ ಕುವೆಂಪು ಸಾಹಿತ್ಯಕ್ಕಿದೆ: ತೇಜಸ್ವಿ