ರಂಗಭೂಮಿ ಬದುಕಿಗೆ ಹತ್ತಿರವಾದದ್ದು: ಸುಬ್ರಾಯ ಮತ್ತಿಹಳ್ಳಿ

KannadaprabhaNewsNetwork |  
Published : Aug 17, 2026, 02:45 AM IST
ಸಿದ್ದಾಪುರದ ಶಂಕರಮಠದಲ್ಲಿ ಗಾಂಜಾ ಗ್ಯಾಂಗ್ ನಾಟಕದ ಮೊದಲ ಪ್ರದರ್ಶನವನ್ನು ಸುಬ್ರಾಯ ಮತ್ತಿಹಳ್ಳಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಇಡೀ ಸಮಾಜ ಸಂಸ್ಕೃತಿಯಿಂದ ದೂರವಾಗಿ ಹಣದ ಬೆನ್ನತ್ತಿರುವ ಸಂದರ್ಭದಲ್ಲಿ ರಂಗಭೂಮಿಯು ಸಮಾಜದ ವಾಸ್ತವವನ್ನು ಬಿಂಬಿಸುವ ಕನ್ನಡಿಯಾಗಿದೆ.

ಗಾಂಜಾ ಗ್ಯಾಂಗ್ ನಾಟಕ ಪ್ರದರ್ಶನ ಯಶಸ್ವಿ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ರಂಗಸೌಗಂಧ ಸಂಸ್ಥೆಯು ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ತನ್ನ 2026–27ರ ರಂಗಸಂಚಾರಕ್ಕಾಗಿ ಸಿದ್ಧಗೊಳಿಸಿದ ಹಿರಿಯ ಪತ್ರಕರ್ತ, ಸಾಹಿತಿ ಗಂಗಾಧರ ಕೊಳಗಿ ಅವರ ಗಾಂಜಾ ಗ್ಯಾಂಗ್ ಕಾದಂಬರಿ ಆಧಾರಿತ ನಾಟಕ ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ಸಭಾ ಕಾರ್ಯಕ್ರಮ ಉದ್ಘಾಟಿಸಿ, ಕಾದಂಬರಿಯನ್ನು ರಂಗರೂಪಕ್ಕೆ ತಂದ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ, ರಂಗಭೂಮಿ ಬದುಕಿಗೆ ಹತ್ತಿರವಾದದ್ದು. ಇಡೀ ಸಮಾಜ ಸಂಸ್ಕೃತಿಯಿಂದ ದೂರವಾಗಿ ಹಣದ ಬೆನ್ನತ್ತಿರುವ ಸಂದರ್ಭದಲ್ಲಿ ರಂಗಭೂಮಿಯು ಸಮಾಜದ ವಾಸ್ತವವನ್ನು ಬಿಂಬಿಸುವ ಕನ್ನಡಿಯಾಗಿದೆ. ಎಲ್ಲರ ಅಂಗೈಯಲ್ಲಿ ರಂಜನೆ ಬಂದಿದೆ. 90ರ ದಶಕದಲ್ಲಿ ಶರಾವತಿ ಕಣಿವೆ ಭಾಗದಲ್ಲಿ ನಡೆದ ಗಾಂಜಾ ದಂಧೆ ಹಾಗೂ ವ್ಯವಸ್ಥೆಯ ಭ್ರಷ್ಟತೆಯನ್ನು ಗಂಗಾಧರ ಕೊಳಗಿಯವರು ಕಾದಂಬರಿಯ ಮೂಲಕ ಸಮಾಜದ ಮುಂದೆ ತಂದಿದ್ದರು. ಅದನ್ನು ನಿರ್ದೇಶಕರು ಅತ್ಯಂತ ಸಮರ್ಥವಾಗಿ ರಂಗದ ಮೇಲೆ ತಂದಿದ್ದಾರೆ. ಒಂದು ನಾಟಕವನ್ನು ಕಟ್ಟುವಲ್ಲಿ ಮೂಲ ಕೃತಿ, ರಂಗಪಠ್ಯ, ನಿರ್ದೇಶನ ಎನ್ನುವ ಮೂರು ದ್ವನಿಗಳಿರುತ್ತವೆ. ಅವು ಸಮರ್ಪಕವಾಗಿದ್ದಾಗ ನಾಟಕ ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮೂಲ ಕೃತಿಕಾರ ಗಂಗಾಧರ ಕೊಳಗಿ ಮಾತನಾಡಿ ಮೊಬೈಲ್, ಇಂಟರ್ನೆಟ್ ಇಲ್ಲದ ಕಾಲದಲ್ಲಿ ಜೀವದ ಹಂಗು ತೊರೆದು ಪಶ್ಚಿಮ ಘಟ್ಟದ ದಂಡಾರಣ್ಯದಲ್ಲಿ ನಡೆದ ನೈಜ ಘಟನೆಗಳನ್ನು, ಅಲ್ಲಿನ ಮಾಫಿಯಾವನ್ನು ಕಣ್ಣಾರೆ ಕಂಡು ಈ ಕೃತಿ ರಚಿಸಿದ್ದೆ. ಇಂದು ಈ ಕೃತಿಗೆ ರಂಗಭೂಮಿಯ ಮೂಲಕ ಮರುಹುಟ್ಟು ಸಿಕ್ಕಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ ಮಾತನಾಡಿದರು.

ಗಾಂಜಾ ಗ್ಯಾಂಗ್ ನಾಟಕವನ್ನು ಗಣಪತಿ ಹೆಗಡೆ ಹುಲಿಮನೆ ನಿರ್ದೇಶಿಸಿದ್ದು, ರಾಜೇಂದ್ರ ಕೊಳಗಿ ಹಾಡು ರಚಿಸಿ, ಸಂಗೀತ ನೀಡಿದ್ದರು. ಸಂಜಯ ಭಟ್ ಬಿಳಗಿ (ತಬಲಾ), ಶ್ರೀಪಾದ ಹೆಗಡೆ ಕೋಡನಮನೆ (ವಿನ್ಯಾಸ) ಸಾಥ್ ನೀಡಿದರು. ಗಣಪತಿ ಹೆಗಡೆ ಗುಂಜಗೋಡು, ನಾಗಪತಿ ಭಟ್ಟ ವಡ್ಡಿನಗದ್ದೆ, ರಾಮು ಅಂಕೋಲೇಕರ, ರಮೇಶ ಭಟ್ಟ ಲಕ್ಕಿಜಡ್ಡಿ, ಐ.ಕೆ. ನಾಯ್ಕ ಸುಂಗೊಳ್ಳಿಮನೆ, ಪ್ರವೀಣಾ ಹೆಗಡೆ ಗುಂಜಗೋಡು, ಶುಭಾ ರಮೇಶ ಲಕ್ಕಿಜಡ್ಡಿ, ಅಜಿತ ಭಟ್ಟ ಹೆಗ್ಗಾರಳ್ಳಿ, ಪೂರ್ಣಚಂದ್ರ ಹೆಗಡೆ ಹುಲಿಮನೆ, ಶಮಂತ ಹೆಗಡೆ ಶಿರಳಗಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಪಂಚಮಿ ವಡ್ಡಿನಗದ್ದೆ ಪ್ರಾರ್ಥಿಸಿದರು. ರಂಗಸೌಗಂಧದ ಮುಖ್ಯಸ್ಥ ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿದರು. ಶ್ರೀಪಾದ ಹೆಗಡೆ ಕೋಡನಮನೆ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನಿಖೆ ಬಳಿಕ ಶೂಟೌಟ್‌ ಪ್ರಕರಣಕ್ಕೆ ಸ್ಪಷ್ಟತೆ: ಡಿಕೆಶಿ
ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ: ಪ್ರಭಾಕರ ಜೋಶಿ