ಉಡುಪಿ: ಉಡುಪಿ ರಂಗಭೂಮಿ ಸಂಸ್ಥೆ ವತಿಯಿಂದ ಮಾ. 4ರಂದು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ವಾರ್ಷಿಕ ‘ರಂಗಭೂಮಿ ಪ್ರಶಸ್ತಿ -2025’ನ್ನು ಹಿರಿಯ ರಂಗಕರ್ಮಿ, ನಾಟಕಕಾರ, ದೇಸಿ ಚಿಂತನೆಗಳ ರಾಯಭಾರಿ ಪ್ರಸನ್ನ ಅವರಿಗೆ ಪ್ರದಾನ ಮಾಡಲಾಗುವುದು.
ಪ್ರಸನ್ನರು ಲೇಖಕರಾಗಿಯೂ ಮಹತ್ವದ ಕೆಲಸ ಮಾಡಿದ್ದಾರೆ. ನೌಟಂಕಿ, ಸ್ವಯಂವರ, ತದ್ರೂಪಿ, ನಾಶವಾಯ್ತೆ ಲಂಕಾದ್ರಿಪುರ ಮೊದಲಾದ ನಾಟಕಗಳನ್ನೂ ಪ್ರಸನ್ನರು ರಚಿಸಿದ್ದಾರೆ. ಹೆಗ್ಗೋಡಿನ ‘ಕವಿ ಕಾವ್ಯ ಟ್ರಸ್ಟ್’ ಮೂಲಕ ಅವರು ಕನ್ನಡದ ಸಾಂಸ್ಕೃತಿಕ ಕೆಲಸಕ್ಕೆ, ಕೆ.ವಿ. ಸುಬ್ಬಣ್ಣರ ಜೊತೆಗೂಡಿ ರುಜುವಾತು ಪತ್ರಿಕೆಗೆ ಹೊಸರೂಪ ನೀಡಲೂ ನೆರವಾಗಿದ್ದರು.
ದೇಸೀ ಚಿಂತನೆಗಳ ರಾಯಭಾರಿಯಾಗಿ ಹೆಗ್ಗೋಡಿನ ಬಳಿ ಆರಂಭಿಸಿದ ಚರಕ ಸಂಸ್ಥೆಯ ಮೂಲಕ ಕೈಮಗ್ಗದ ಉತ್ಪನ್ನಗಳಿಗೆ ಮಾರುಕಟ್ಟೆಗೆ ಒತ್ತು ನೀಡುತಿದ್ದಾರೆ. ಗಾಂಧಿ ಪ್ರತಿಪಾದಿಸುತ್ತಿದ್ದ ಗ್ರಾಮಸ್ವರಾಜ್ಯದ ಚಿಂತನೆಗಳನ್ನು ಪ್ರಸನ್ನರು ತಮ್ಮ ದೇಶಿ ಆಹಾರ ಪದ್ಧತಿ, ದೇಶಿ ಜೀವನ ಪದ್ಧತಿ, ಯಂತ್ರಗಳನ್ನು ಕಳಚೋಣ ಬನ್ನಿ, ಶೂದ್ರರಾಗೋಣ ಬನ್ನಿ ಮೊದಲಾದ ಕೃತಿಗಳ ಮೂಲಕವೂ ದಾಖಲಿಸಿದ್ದಾರೆ.ಇಂತಹ ಬಹುರೂಪಿ ಪ್ರಸನ್ನರಿಗೆ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಫೆಲೋಶಿಪ್, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಭೋಪಾಲ್ ನ ಭಾರತ ಭವನದ ಫೆಲೋಶಿಪ್, ಪುತಿನ ಟ್ರಸ್ಟ್ ಪುರಸ್ಕಾರ, ಚದುರಂಗ ಪ್ರಶಸ್ತಿ ಮೊದಲಾದ ಪುರಸ್ಕಾರಗಳು ಸಂದಿವೆ.