- ಔಷಧಿ ಸಸ್ಯಗಳ ಕೃಷಿ, ಸುಸ್ಥಿರ ಕಟಾವು, ಪ್ರಾಥಮಿಕ ಸಂಸ್ಕರಣೆ ಮತ್ತು ಮಾರುಕಟ್ಟೆ ಕುರಿತು ಒಂದು ದಿನದ ಕಾರ್ಯಾಗಾರ
ರಾಜ್ಯದಲ್ಲಿ 6 ಸಾವಿರ ಔಷಧಿ ಸಸ್ಯಗಳಿವೆ.ಇದರಲ್ಲಿ 2247 ಸಸ್ಯ ಪ್ರಬೇದಗಳನ್ನು ಗುರುತಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕ ಪ್ರಾಧಿಕಾರದ ಸಲಹೆಗಾರ ಡಾ.ಕೆ.ಎನ್.ಪ್ರಭು ತಿಳಿಸಿದರು.
ಶುಕ್ರವಾರ ಸೌತಿಕೆರೆಯ ಸುವರ್ಣ ವನದಲ್ಲಿ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ಕೊಪ್ಪ ಲ್ಯಾಂಪ್ಸ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಔಷದಿ ಸಸ್ಯಗಳ ಕೃಷಿ, ಸುಸ್ತಿರ ಕಟಾವು, ಪ್ರಾಥಮಿಕ ಸಂಸ್ಕರಣೆ ಮತ್ತು ಮಾರುಕಟ್ಟೆ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.ಔಷಧಿ ಸಸ್ಯಗಳು ಶೇ. 25 ರಷ್ಟು ನಮ್ಮ ತೋಟ, ಹಿತ್ತಲಲ್ಲಿ ಸಿಗಲಿದೆ. ಶೇ.75 ರಷ್ಟು ಕಾಡಿನಿಂದಲೇ ತರ ಬೇಕಾಗಿದೆ. ಈಗ ಔಷಧಿ ಸಸ್ಯಗಳಿಗೆ ಬಹಳ ಬೇಡಿಕೆ ಇದೆ. ಒಂದು ಅಂದಾಜಿನ ಪ್ರಕಾರ ಭಾರತ ದೇಶಕ್ಕೆ 100 ಮೆಟ್ರಿಕ್ ಟನ್ ಔಷಧಿ ಸಸ್ಯಗಳು ಪ್ರತಿ ದಿನ ಬೇಕಾಗುತ್ತದೆ. ಮಲೆನಾಡು ಭಾಗದ ಕಾಡಿನಲ್ಲಿ ಸಿಗುವ ಮುರುಗನ ಹುಳಿ, ಪತ್ರೆ, ಧೂಪಕ್ಕೆ ಬಹಳ ಬೇಡಿಕೆ ಇದೆ. ಆದರೆ, ಪಶ್ಚಿಮಘಟ್ಟದಲ್ಲಿ ಸಿಗುವ ಔಷಧಿ ಸಸ್ಯಗಳು ಎಷ್ಟು ಅಮೂಲ್ಯವಾಗಿದೆ ಎಂಬುದು ಇಲ್ಲಿನ ರೈತರಿಗೆ ತಿಳಿದಿಲ್ಲ.
ಕೊಪ್ಪ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜೇಂದ್ರ ಬಾಬು ಉದ್ಘಾಟಿಸಿ ಮಾತನಾಡಿ, ನಾವು ಪ್ರಕೃತಿ ಮಧ್ಯೆ ಸಹ ಬಾಳ್ವೆ ಮಾಡುತ್ತಿದ್ದೇವೆ. ನಮ್ಮ ಮನೆಗಳ ಸುತ್ತ ಸಿಗುವ ಔಷಧಿ ಗಿಡಗಳನ್ನು ಗುರುತಿಸಿ ಉಪಯೋಗಿಸಿಕೊಳ್ಳಬೇಕಾಗಿದೆ. ಸ್ಥಳೀಯ ಔಷಧಿಗಳನ್ನು ಉಪಯೋಗಿಸಿಕೊಂಡು ಮನೆ ಮದ್ದು ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು. ಕೊಪ್ಪ ಲ್ಯಾಂಪ್ಸ್ ಸೊಸೈಟಿ ಇಂತಹ ಕಾರ್ಯಾಗಾರ ಏರ್ಪಡಿಸಿ ಉತ್ತಮ ಕಾರ್ಯ ಮಾಡುತ್ತಿದೆ. ಕಾರ್ಯಾಗಾರಕ್ಕೆ ಬಂದ ರೈತರು ಇದರ ಉಪಯೋಗ ಪಡೆಯಬೇಕು ಎಂದರು.
ಲ್ಯಾಂಪ್ಸ್ ಸೊಸೈಟಿ ನಿರ್ದೇಶಕ ಶೆಟ್ಟಿಕೊಪ್ಪ ಮಹೇಶ್ ಮಾತನಾಡಿ, ಗಿರಿಜನರು ಅರಣ್ಯದಂಚಿನಲ್ಲಿದ್ದು ಪ್ರಕೃತಿ ಮದ್ಯೆ ಬೆಳೆದಿದ್ದಾರೆ. ಇವರಲ್ಲಿ ಪ್ರತಿಯೊಬ್ಬರೂ ಕಾಡಿನಲ್ಲಿ ಸಿಗುವ ಔಷಧಿ ಗಿಡಗಳನ್ನು ಗುರುತು ಹಿಡಿಯುತ್ತಾರೆ. ಈ ಹಿಂದಿನಿಂದಲೂ ಗ್ರಾಮೀಣ ಪ್ರದೇಶದಲ್ಲಿ ಕಾಯಿಲೆಗಳಿಗೆ ಮನೆ ಮದ್ದು ಉಪಯೋಗಿಸುತ್ತಾ ಬಂದಿದ್ದಾರೆ. ಬುಡಕಟ್ಟು ಜನಾಂಗದವರು, ರೈತರು ಔಷಧಿ ಸಸ್ಯಗಳನ್ನು ಬೆಳೆದು ಮಾರುಕಟ್ಟೆ ಮಾಡಲು ತರಬೇತಿ ಹಮ್ಮಿಕೊಂಡಿದ್ದೇವೆ ಎಂದರು.
-- ಬಾಕ್ಸ್--
ನೆಲ ನೆಲ್ಲಿ ನಮ್ಮ ಮನೆಯ ಹಿತ್ತಲಲ್ಲೇ ಸಿಗುತ್ತದೆ.ಇದನ್ನು ಕಷಾಯ ಮಾಡಿ ಕುಡಿದರೆ ಲಿವರ್ ಗೆ ಒಳ್ಳೆಯದು. ಚಿಕ್ಕ ಮಗುವಿಗೆ ಸಕ್ಕರೆ ಬೆರಸಿ ಕುಡಿಸಿದರೆ ಪಿತ್ತ ಜನಕಾಂಗಕ್ಕೆ ಒಳ್ಳೆಯದು ಎಂದು ಕೊಪ್ಪ ಆರ್ಯವೇದ ಆಸ್ಪತ್ರೆ ವೈದ್ಯ ಡಾ.ಕೃಷ್ಣ ಕಿಶೋರ್ ತಿಳಿಸಿದರು.