ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯನಿರ್ಮಿತಿ ಕೇಂದ್ರದಲ್ಲಿ ಡಿಪ್ಲೊಮಾ ಪದವಿ ಪೂರ್ಣಗೊಳಿಸದವರು ಇನ್ನೂ ಹಲವು ಮಂದಿ ಇದ್ದಾರೆ. ಶಿಕ್ಷೆ ನನಗೆ ಮಾತ್ರ ಏಕೆ..?, ಹೀಗೆಂದು ಪ್ರಶ್ನಿಸಿದವರು ವಿವಾದಿತ ನೌಕರ ಕೆ.ಪಿ.ಶ್ರೀಧರ್.
ನಿಗದಿತ ವಿದ್ಯಾಭ್ಯಾಸ ಪೂರೈಸದೆ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್‌ಗಳ ಪ್ರಕರಣದ ವಿಚಾರಣೆ ವೇಳೆ ಕೇಂದ್ರದ ಹೆಚ್ಚುವರಿ ಯೋಜನಾ ವ್ಯವಸ್ಥಾಪಕರಾಗಿದ್ದ ಹರ್ಷ ಅವರು ಕೆ.ಪಿ.ಶ್ರೀಧರ್ ಅವರನ್ನು ವಿಚಾರಣೆಗೊಳಪಡಿಸಿದಾಗ ಈ ಸತ್ಯ ಹೊರಬಂದಿತು.ಶ್ರೀಧರ್‌ರವರ ವಿದ್ಯಾಭ್ಯಾಸದ ಮಾಹಿತಿಯನ್ನು ಕೇಳಿದ ಸಮಯದಲ್ಲಿ ಅವರು ಪದವಿ ಪ್ರಮಾಣಪತ್ರವನ್ನು ನೀಡದೆ ಕೋರ್ಸ್ ಕಂಪ್ಲೀಷನ್ ಸರ್ಟಿಫಿಕೇಟ್ ನೀಡಿದ್ದರು. ಅದರ ಬಗ್ಗೆ ವಿಚಾರಿಸಿದಾಗ ಕೆಲವು ವಿಷಯಗಳಲ್ಲಿ ಉತ್ತೀರ್ಣವಾಗಿಲ್ಲವೆಂದು ಹೇಳಿದರು. ಆಗ ಪೂರ್ಣ ಪ್ರಮಾಣದ ಪದವಿ ಪ್ರಮಾಣಪತ್ರ ಪಡೆದು ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದಾಗ ಶ್ರೀಧರ್‌ರವರು ಈ ಸಂಸ್ಥೆಯಲ್ಲಿ ಇನ್ನೂ ಹಲವು ಮಂದಿ ಡಿಪ್ಲೊಮಾ ಪದವಿ ಮುಗಿಸಿರುವುದಿಲ್ಲ. ಶಿಕ್ಷೆ ನನಗೆ ಮಾತ್ರ ಯಾಕೆ ಎಂದು ಪ್ರಶ್ನಿಸಿದ್ದರು.
ಇದರಿಂದ ವಿಚಲಿತರಾದ ಹರ್ಷ ಅವರು ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಎಲ್ಲಾ ಎಂಜಿನಿಯರ್‌ಗಳ ಪದವಿ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಲಾಗಿ ಎಲ್ಲರೂ ತಮ್ಮ ತಮ್ಮ ಸರ್ಟಿಫಿಕೇಟ್‌ಗಳನ್ನು ನೀಡಿದ್ದಾರೆ. ಈ ವಿಚಾರವನ್ನು ಹರ್ಷ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರು ನೀಡಿರುವ ಪದವಿ ಪ್ರಮಾಣಪತ್ರಗಳನ್ನು ದೃಢೀಕರಣಕ್ಕಾಗಿ ಆಯಾ ವಿಶ್ವವಿದ್ಯಾನಿಲಯಗಳಿಗೆ ಶುಲ್ಕದೊಂದಿಗೆ ಸಲ್ಲಿಸಿದ್ದಾರೆ.ದೃಢೀಕರಣ ವರದಿ ಬಹಿರಂಗಪಡಿಸಿಲ್ಲ:
ಅದೇ ಸಮಯಕ್ಕೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾಗಿ ಜಯಪ್ರಕಾಶ್ ಅಧಿಕಾರ ವಹಿಸಿಕೊಂಡಿದ್ದು, ವಿಶ್ವ ವಿದ್ಯಾಲಯಗಳು ಎಂಜಿನಿಯರ್‌ಗಳ ಪದವಿ ಪ್ರಮಾಣಪತ್ರಗಳ ಕುರಿತು ನೀಡಿರುವ ದೃಢೀಕರಣವನ್ನು ಗೌಪ್ಯವಾಗಿಡಲಾಗಿದೆ. ಇದು ಇನ್ನಷ್ಟು ನಕಲಿ ಎಂಜಿನಿಯರ್‌ಗಳು ನಿರ್ಮಿತಿ ಕೇಂದ್ರದಲ್ಲಿರುವ ಅನುಮಾನವನ್ನು ಹೆಚ್ಚುವಂತೆ ಮಾಡಿದೆ.ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ದೂರು ನೀಡಿದ್ದ ಮೂವರು ವಿವಾದಾತ್ಮಕ ನೌಕರರನ್ನಷ್ಟೇ ತನಿಖೆಗೆ ಒಳಪಡಿಸಲಾಗಿದೆ. ಆದರೆ, ವಿವಾದಿತ ನೌಕರ ಕೆ.ಪಿ.ಶ್ರೀಧರ್ ಹೇಳಿಕೆಯನ್ನೂ ಗಂಭೀರವಾಗಿ ಪರಿಗಣಿಸಿ ಪದವಿ ಪ್ರಮಾಣಪತ್ರಗಳ ಸತ್ಯಾಸತ್ಯತೆಯನ್ನು ತನಿಖೆಗೊಳಪಡಿಸಿದೆ. ಅದರ ವಿವರಗಳು ಬಹಿರಂಗಗೊಂಡರೆ ಇನ್ನಷ್ಟು ಪ್ರಕರಣಗಳು ಹೊರಬರುವ ಸಾಧ್ಯತೆಗಳಿವೆ. ಇದೇ ಕಾರಣಕ್ಕೆ ಬಹುಶಃ ಅದನ್ನು ಮುಚ್ಚಿಹಾಕುವ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.
ಹೆಚ್ಚುವರಿ ನೌಕರರ ವಿವರಗಳಿಲ್ಲ:ನಿರ್ಮಿತಿ ಕೇಂದ್ರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ೩೧.೧೨.೨೦೨೨ರಂದು ನಡೆದ ಸರ್ವ ಸದಸ್ಯರ ಸಾಮಾನ್ಯಸಭೆಯಲ್ಲಿ ನಿರ್ಮಿತಿ ಕೇಂದ್ರದ ವಿವಿಧ ಕಾಮಗಾರಿಗಳಲ್ಲಿ ಹೆಚ್ಚುವರಿಯಾಗಿ ಐವರು ಜನತಾಂತ್ರಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಮಾಸಿಕವಾಗಿ ಗೌರವಧನವನ್ನು ನಿರ್ಮಿತಿ ಕೇಂದ್ರದ ಉಳಿತಾಯ ಹಣದಲ್ಲಿ ಪಾವತಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಆದರೆ, ಸಭೆಯ ನಡವಳಿಯಲ್ಲಿ ಆ ಐವರು ಸಿಬ್ಬಂದಿಯ ಹೆಸರು, ಪದನಾಮ ಮತ್ತು ಸೇವೆ ಪ್ರಾರಂಭಿಸಿದ ದಿನಾಂಕದ ಬಗ್ಗೆ ಯಾವುದೇ ವಿವರಗಳು ದಾಖಲಾಗಿಲ್ಲ. ಸಭಾ ನಡವಳಿಯನ್ನು ತನಿಖಾ ತಂಡ ಅವಲೋಕಿಸಿದಾಗ ನಿರ್ಮಿತಿ ಕೇಂದ್ರದ ಸದಸ್ಯ ಕಾರ್ಯದರ್ಶಿಯಾದ ಯೋಜನಾ ವ್ಯವಸ್ಥಾಪಕರು ಐದು ಹೆಚ್ಚುವರಿ ನೌಕರರ ನೇಮಕಾತಿಗೆ ನಿಗದಿತ ಮಾನದಂಡಗಳನ್ನು ಅನುಸರಿಸದೆ, ಅರ್ಹತೆಯನ್ನು ಪರಿಗಣಿಸದೆ, ಸಭೆಯ ಅನುಮೋದನೆಯನ್ನೂ ಪಡೆಯದೆ ಅವರ ಹಂತದಲ್ಲಿಯೇ ಐವರು ಸಿಬ್ಬಂದಿ ನೇಮಕಕ್ಕೆ ಕ್ರಮವಹಿಸಿರುವುದು ಕಂಡುಬಂದಿದೆ. ಕೇವಲ ವೇತನ ಪಾವತಿಗಾಗಿ ಮಾತ್ರ ಅನುಮೋದನೆ ಪಡೆದಿರುವುದು ದೃಢಪಟ್ಟಿದೆ.ಎಲ್ಲವೂ ಅಯೋಮಯ:
ನಿರ್ಮಿತಿ ಕೇಂದ್ರದಲ್ಲಿ ಸೈಟ್ ಎಂಜಿನಿಯರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಸೇರಿದ ದಿನಾಂಕವೇ ಒಂದಾದರೆ, ಹಾಜರಾತಿಗೆ ಸಹಿ ಮಾಡಿರುವ ದಿನವೇ ಮತ್ತೊಂದಾಗಿದೆ. ೫.೯.೨೦೨೨ರಿಂದ ಸೈಟ್ ಎಂಜಿನಿಯರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ೧.೧.೨೦೨೩ರಿಂದ ಹಾಜರಾತಿ ವಹಿಗೆ ಸಹಿ ಮಾಡಿರುವುದಾಗಿ ಬಿ.ಎಲ್.ವೇಣುಗೋಪಾಲ್ ತಿಳಿಸಿದ್ದಾರೆ. ಕರ್ತವ್ಯನಿರ್ವಹಣೆಯ ಕಡತ ಮಂಡನೆ, ಎಂ.ಬಿ.ಪುಸ್ತಕ ಮತ್ತು ಕಚೇರಿ ದಾಖಲೆಗಳಲ್ಲಿ ೧೫ ದಿನಗಳು ಕಳೆದ ನಂತರ ಸಹಿ ಮಾಡಿರುವುದಾಗಿ ತಿಳಿಸಿರುವುದು ಕೇಂದ್ರದ ಆಡಳಿತ ವ್ಯವಸ್ಥೆ ಅಯೋಮಯವಾಗಿರುವುದಕ್ಕೆ ಸಾಕ್ಷಿಯಾಗಿದೆ.ನಿರ್ಮಿತಿ ಕೇಂದ್ರದಿಂದ ಕಾರ್ನಿಕ್ ಸಂಸ್ಥೆಗೆ ನೀಡಲಾಗಿರುವ ಮಾಹಿತಿಯಲ್ಲೂ ಬಿ.ಎಲ್.ವೇಣುಗೋಪಾಲ್ ಡಿಪ್ಲೊಮಾ ಅಂಡ್ ಬಿ-ಟೆಕ್ ಇನ್ ಸಿವಿಲ್ ಎಂದು ನಮೂದು ಮಾಡಲಾಗಿದೆ. ಇದನ್ನು ನೋಡಿದಾಗ ನೇಮಕಾತಿ ಪೂರ್ವದಲ್ಲಿ ವಿದ್ಯಾಭ್ಯಾಸದ ದಾಖಲೆಗಳ ಪರಿಶೀಲನೆ ಯಾವ ರೀತಿ ನಡೆದಿದೆ ಎನ್ನುವುದಕ್ಕೆ ಕೈಗನ್ನಡಿಯಾಗಿದೆ.
ಸಾಕ್ಷ್ಯಾಧಾರ ನಾಶ ಸಾಧ್ಯತೆ:ವಿವಾದಿತ ನೌಕರರು ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿರುವುದು ದೃಢಪಟ್ಟಿರುವುದರಿಂದ ನೌಕರರಿಗೆ ಪಾವತಿಯಾಗಿರುವ ಸಂಬಳವನ್ನು ವಸೂಲಿ ಮಾಡಿ ಅವರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸುವಂತೆ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಆಗ್ರಹಿಸಿದ್ದಾರೆ.
ಎಚ್.ಆರ್.ಹರ್ಷ ಅಅವರು ಪ್ರಭಾರ ಯೋಜನಾ ವ್ಯವಸ್ಥಾಪಕರಾಗಿದ್ದ ಅವಧಿಯಲ್ಲಿ ಅಂಕಪಟ್ಟಿ ಮತ್ತು ವಿಶ್ವವಿದ್ಯಾನಿಲಯಗಳ ಪದವಿ ಪ್ರಮಾಣಪತ್ರಗಳ ನೈಜತೆಯ ಪರಿಶೀಲನೆ ನಡೆಸಿದಾಗ ಈ ಅಂಶಗಳು ಕಂಡುಬಂದಿವೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕಿದೆ. ಈ ಪ್ರಕರಣವನ್ನು ಮುಚ್ಚಿಹಾಕಲು ಸಾಕ್ಷ್ಯಾಧಾರಗಳನ್ನು ಹಾಲಿ ಯೋಜನಾ ನಿರ್ದೇಶಕ ಬಿ.ಜಯಪ್ರಕಾಶ್ ನಾಶಪಡಿಸುವ ಸಾಧ್ಯತೆಗಳಿರುವ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.ನಿರ್ಮಿತಿ ಕೇಂದ್ರದಲ್ಲಿ ಡಿಪ್ಲೊಮಾ ಪದವಿ ಮುಗಿಸದ ಇನ್ನಷ್ಟು ಎಂಜಿನಿಯರ್‌ಗಳಿದ್ದಾರೆ. ಇದರ ಬಗ್ಗೆ ಎಲ್ಲರ ಸರ್ಟಿಫಿಕೇಟ್‌ಗಳನ್ನು ದೃಢೀಕರಣಕ್ಕಾಗಿ ಹರ್ಷ ಅವರು ಯೂನಿವರ್ಸಿಟಿಗಳಿಗೆ ಕಳುಹಿಸಿದ್ದರು. ಅದರ ವಿವರಗಳೂ ಬಹಿರಂಗಗೊಳ್ಳಬೇಕು. ಕೇಂದ್ರದಲ್ಲಿರುವ ಎಂಜಿನಿಯರ್‌ಗಳಿಗೆ ಎಸ್ಟಿಮೇಟ್, ಪ್ಲಾನ್ ಹಾಕಲು ಬರೋಲ್ಲ. ಮೈಸೂರಿನಿಂದ ಎಸ್ಟಿಮೇಟ್, ಪ್ಲಾನ್ ಮಾಡಿಸಿಕೊಂಡು ತರುತ್ತಿದ್ದಾರೆ. ನಿರ್ಮಿತಿಕೇಂದ್ರ ಅಕ್ರಮಗಳಿಂದ ಶುದ್ಧೀಕರಣಗೊಳ್ಳಬೇಕು.- ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರ