ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿರುವ ನಂದಿನಿ ಹೈಟೆಕ್ ಉತ್ಪನ್ನ ಘಟಕದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲ ಸಂಘ ಹಾಗೂ ನಂದಿನಿ ಹೈಟೆಕ್ ಉತ್ಪನ್ನ ಘಟಕ ಶೆಟ್ಟಿಹಳ್ಳಿ ಇವರ ವತಿಯಿಂದ ಆಯೋಜಿಸಿದ್ದ ಬಾಲಕಾರ್ಮಿಕ ನಿರ್ಮೂಲನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ದೇಶದಲ್ಲಿ ಒಂದು ಕೋಟಿಗೂ ಹೆಚ್ಚು ಬಾಲಕಾರ್ಮಿಕರಿದ್ದಾರೆ ಎಂದರು. ಇಂತಹ ಸಂದರ್ಭದಲ್ಲಿ ಕೇವಲ ದಿನಾಚರಣೆ ಆಚರಿಸಿ ಜಾಗೃತಿ ಮೂಡಿಸಿದರಷ್ಟೇ ಈ ಅನಿಷ್ಟ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಅದರ ಬದಲು ಮಕ್ಕಳು ದೇಶದ ಆಸ್ತಿ ಅವರ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ನೀಡಬೇಕೆಂಬ ಮನಸ್ಥಿತಿ ಎಲ್ಲರಲ್ಲಿ ಬರಬೇಕಿದೆ ಎಂದು ತಿಳಿಸಿದರು. ಭಾರತದ ಸಂವಿಧಾನ ಸಹ 6ರಿಂದ 14ನೇ ವಯಸ್ಸಿನವರೆಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಲು ನಿಬಂಧನೆ ವಿಧಿಸಿದೆ. ಅದರಂತೆ ಸರ್ಕಾರ ಶಾಲೆಗಳಲ್ಲಿ ಬಿಸಿಯೂಟ ಮತ್ತಿತರ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಿದೆ. ಬಾಲಕಾರ್ಮಿಕ ಪದ್ಧತಿ ತಡೆಗೆ ಸರ್ಕಾರ ಹಲವಿಧ ಸೌಲಭ್ಯ ಒದಗಿಸುವುದರ ಜತೆಗೆ ನೂರಾರು ಕಾನೂನುಗಳನ್ನು ಮಾಡಬಹುದು. ಆದರೆ, ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವ ಹೊಣೆಯಿಂದ ಪಾಲಕರು ತಪ್ಪಿಸಿಕೊಂಡರೆ ಸರ್ಕಾರದ ಆಶಯ ಈಡೇರಲಾರದು ಎಂದು ಅಭಿಪ್ರಾಯಪಟ್ಟರು. ಅನಕ್ಷರತೆ ಮತ್ತು ಆರ್ಥಿಕ ಸಮಸ್ಯೆಯೇ ಬಾಲಕಾರ್ಮಿಕ ಪದ್ಧತಿಗೆ ಮೂಲ ಕಾರಣವಾಗಿದ್ದು, ಸರಕಾರ ಒದಗಿಸಿರುವ 10 ಹಲವು ಸೌಲಭ್ಯಗಳನ್ನು ವಿವಿಧ ಇಲಾಖೆಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಮಾರಕವಾಗಿರುವ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ ಸಮಾಜದ ಅನಿಷ್ಟ ಪದ್ಧತಿಯಾದ ಬಾಲಕಾರ್ಮಿಕತೆ ಕೊನೆಗೊಳಿಸಿ ದೇಶದ ಆಸ್ತಿಯಾದ ಮಕ್ಕಳ ಜೀವನವನ್ನು ಉಜ್ವಲಗೊಳಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಸಲಹೆ ನೀಡಿದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ. ಕೆ. ಹರೀಶ್, ಬಾಲ್ಯಾವಸ್ಥೆ ಹಾಗೂ ಕಿಶೋರಾವ್ಯವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1996 ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತ, 2016-17ರಲ್ಲಿ ಬಾಲಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಕಾಯ್ದೆಯಲ್ಲಿ ಅಪಾಯಕಾರಿ ಅಲ್ಲದ ಕ್ಷೇತ್ರದಲಿ ಕುಟುಂಬದೊಂದಿಗೆ ಶಾಲೆ ವೇಳೆ ಹೊರತುಪಡಿಸಿ ಹಾಗೂ ರಜಾ ದಿನಗಳಲ್ಲಿ ಮಕ್ಕಳು ಕೆಲಸ ಮಾಡಲು ಅವಕಾಶ ನೀಡಲಾಗಿದೆ ಎಂದರು. ಅಲ್ಲದೆ ಅಪಾಯಕಾರಿ ಕ್ಷೇತ್ರದಲ್ಲಿ ಕಾಯ್ದೆಗೆ ವಿರುದ್ಧವಾಗಿ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಂಡಲ್ಲಿ ಅಂತಹ ಮಾಲೀಕರ ಮತ್ತು ಪೋಷಕರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ 25-50 ಸಾವಿರ ರು. ದಂಡ ಮತ್ತು 6 ತಿಂಗಳ ಶಿಕ್ಷೆ ನೀಡಬೇಕೆಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧವಾಗಿದ್ದು, ಯಾರೇ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆಯನ್ನು ಉಲ್ಲಂಘಿಸಿದರೆ ಆರು ತಿಂಗಳಿಂದ ಎರಡು ವರ್ಷದವರೆಗೆ ಶಿಕ್ಷೆ, ದಂಡ ವಿಧಿಸಲಾಗುತ್ತದೆ. ಹಾಗೆಯೇ ಪೋಷಕರಿಗೂ ಶಿಕ್ಷೆ ಆಗಲಿದೆ. ಬಾಲಕಾರ್ಮಿಕ ಪದ್ಧತಿ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.ಶೆಟ್ಟಿಹಳ್ಳಿ ನಂದಿನಿ ಹೈಟೆಕ್ ಉತ್ಪನ್ನ ಘಟಕದ ನಿರ್ದೇಶಕ ಪಿ. ಎಚ್. ರಂಗಸ್ವಾಮಿ ಅಧ್ಯಕ್ಷೀಯ ನುಡಿಗಳನ್ನಾಡಿ ಬಾಲಕಾರ್ಮಿಕ ಪದ್ಧತಿಯೂ ಸಾಮಾಜಿಕ ಪಿಡುಗಾಗಿದ್ದು ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಸಾರ್ವಜನಿಕರು ಮತ್ತು ವಿವಿಧ ಸಂಘಸಂಸ್ಥೆಗಳು ಸಹಕರಿಸಿ ಬಲವಂತವಾಗಿ ಕೆಲಸ ಮಾಡುತ್ತಿರುವ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಬೇಕು ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ವಿ.ಕುಸುಮ, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಡಿ.ಪಿ. ದಿನೇಶ್, ಕಾರ್ಯದರ್ಶಿ ಸಿ. ಬಿ. ಹೇಮಂತ್ ಕುಮಾರ್, ಖಜಾಂಚಿ ಕೆ. ಎಲ್. ಚೇತನ್, ಜಂಟಿ ಕಾರ್ಯದರ್ಶಿ ಎಚ್. ಎಂ. ಸುಶ್ಮಿತಾ, ನಂದಿನಿ ಹೈಟೆಕ್ ಉತ್ಪನ್ನ ಘಟಕದ ವ್ಯವಸ್ಥಾಪಕರಾದ ಟೆ.ಲಕ್ಕಪ್ಪ, ಮುನಿರತ್ನಮ್ಮ ಡಿ.ಎಂ. ಮುನಿರತ್ನಮ್ಮ ಸೇರಿದಂತೆ ಘಟಕದ ಸಿಬ್ಬಂದಿಗಳು ಹಾಗೂ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.