ಕನ್ನಡಪ್ರಭ ವಾರ್ತೆ ಹನೂರುತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಕ್ಷಯ ತದಿಗೆ ಅಮಾವಾಸ್ಯೆ ಪ್ರಯುಕ್ತ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಜರುಗಿತು. ಅಕ್ಷಯ ತದಿಗೆ ಅಮಾವಾಸ್ಯೆ ಪ್ರಯುಕ್ತ ಬೆಳಗ್ಗೆಯಿಂದಲೇ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಮಹಾಮಂಗಳಾರತಿ ಧಾರ್ಮಿಕವಾಗಿ ನಡೆಯಿತು. ಜೊತೆಗೆ ಹುಲಿವಾಹನ ಉತ್ಸವ, ಬಸವ ವಾಹನ ಉತ್ಸವ, ರುದ್ರಾಕ್ಷಿ ಮಂಟಪೋತ್ಸವ, ಬೆಳ್ಳಿ ರಥೋತ್ಸವ ಹಾಗೂ ಹರಕೆ ಹೊತ್ತ ಭಕ್ತರಿಂದ ಉರುಳು ಸೇವೆ, ಪಂಜಿನ ಸೇವೆ, ದೂಪದ ಸೇವೆ ಮತ್ತು ಮುಡಿಸೇವೆ ನಡೆಯಿತು.
ಮಲೆ ಮಾದೇಶ್ವರ ಬೆಟ್ಟಕ್ಕೆ ಅಕ್ಷಯ ತದಿಗೆ ಅಮಾವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಸ್ವಾಮಿಯ ದರ್ಶನ ಮಾಡಲು ಸರತಿ ಸಾಲಿನಲ್ಲಿ ನಿಂತು ಮಳೆಯ ನಡುವೆ ಭಕ್ತಾದಿಗಳು ಮಾದೇಶ್ವರನ ದರ್ಶನ ಪಡೆದರು.ಕಾರ್ಯಕ್ರಮದ ವತಿಯಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಬಂದಂತಹ ಭಕ್ತಾದಿಗಳಿಗೆ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಿಬ್ಬಂದಿ ವರ್ಗದವರು ಅಚ್ಚುಕಟ್ಟಾಗಿ ಸರತಿ ಸಾಲಿನಲ್ಲಿ ಬರುವ ಭಕ್ತಾದಿಗಳಿಗೆ ಉಪಹಾರ ವ್ಯವಸ್ಥೆ ಕಲ್ಪಿಸಿದ್ದರು.
ಆಲಂಬಾಡಿ ಬಸವನಿಗೆ ಪೂಜೆ:ಬೆಟ್ಟದಲ್ಲಿರುವ ಅಲಂಬಡಿ ಬಸವನಿಗೆ ಎಣ್ಣೆ ಹಾಗೂ ಹಾಲಾಭಿಷೇಕ ಮಾಡಿ ರೈತರು ಬೆಳೆದಂತಹ ದವಸ ಧಾನ್ಯಗಳನ್ನು ಆಲಂಬಾಡಿ ಬಸವನಿಗೆ ಎರಚುವ ಮೂಲಕ ಇಷ್ಟಾರ್ಥ ಸಿದ್ಧಿಸುವಂತೆ ಪೂಜೆ ಸಲ್ಲಿಸಿದರು. ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ಕ್ರಮ ಕೈಗೊಳ್ಳಲಾಗಿತ್ತು.
ಮಜ್ಜನ ಬಾವಿ ಮುಳುಗಡೆ: ಮಲೆಮಾದೇಶ್ವರ ಬೆಟ್ಟದಲ್ಲಿ ಸೋಮವಾರ ಬಿದ್ದ ಮಳೆಯಿಂದ ದೇವಾಲಯದ ಸಮೀಪ ಇರುವ ಮಜ್ಜನ ಬಾವಿ ನಂದನವನ ಮುಳುಗಡೆಗೊಂಡಿದ್ದು ಅಲ್ಲಿಂದಲೇ ಅಭಿಷೇಕಕ್ಕಾಗಿ ಮಜ್ಜನ ಬಾವಿಯಲ್ಲಿ ಅರ್ಚಕರು ನೀರು ತರುವಂತೆ ಹಾಗಿತ್ತು.