ಅಂಕೋಲಾ–ಯಲ್ಲಾಪುರ ಮಾರ್ಗದ ವಿದ್ಯಾರ್ಥಿಗಳ ಸಂಕಷ್ಟ
ಹೆದ್ದಾರಿಯಲ್ಲಿ ವಾಹನಗಳಿಗೆ ಕೈ ಬೀಸುವ ವಿದ್ಯಾರ್ಥಿಗಳು
ಪಾಸ್ ಕೊಟ್ಟ ಸರ್ಕಾರ, ಬಸ್ ವ್ಯವಸ್ಥೆ ಮಾಡಿಲ್ಲರಾಘು ಕಾಕರಮಠ
ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿದೆ. ಆದರೆ ಪ್ರಯಾಣಿಸಲು ಬಸ್‌ಗಳೇ ಇಲ್ಲದಿದ್ದರೆ ಆ ಪಾಸ್‌ನಿಂದ ಏನು ಪ್ರಯೋಜನ? ಇದೇ ಪ್ರಶ್ನೆ ಇಂದು ಅಂಕೋಲಾ–ಯಲ್ಲಾಪುರ ಮಾರ್ಗದ ಗ್ರಾಮೀಣ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಒಂದೇ ಒಂದು ಲೋಕಲ್ ಬಸ್ ಇರದೆ ಇರುವುದರಿಂದ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಕಾದು, ಸಿಕ್ಕ ವಾಹನಗಳಿಗೆ ಕೈ ಮಾಡಿ ಶಾಲೆ–ಕಾಲೇಜುಗಳಿಗೆ ತೆರಳುವ ದುಸ್ಥಿತಿ ಎದುರಿಸುತ್ತಿದ್ದಾರೆ.
ಒಂದೇ ಒಂದು ಲೋಕಲ್ ಬಸ್ ಇಲ್ಲದೆ ಇರುವುದರಿಂದ ಅನೇಕ ವಿದ್ಯಾರ್ಥಿಗಳು ಲಾರಿಗಳು, ಖಾಸಗಿ ವಾಹನಗಳು ಹಾಗೂ ಇತರ ಅಪರಿಚಿತ ವಾಹನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಸಮಯಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಾಗದೆ ಪಾಠಗಳಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೂ ಪರಿಣಾಮ ಉಂಟಾಗುತ್ತಿದೆ.
ಪ್ರತಿಯೊಂದು ಹಳ್ಳಿಗಳಲ್ಲಿಯೂ ಲೋಕಲ್ ಬಸ್ ವ್ಯವಸ್ಥೆ ಇದೆ ಆದರೆ ಸಾವಿರಾರು ವಾಹನಗಳು ಓದಾಡುವ ಅಂಕೋಲಾ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೇ ಒಂದು ಲೋಕಲ್ ಬಸ್ ಯಾಕೆ ಇಲ್ಲ ಎನ್ನುವುದು ಇಲ್ಲಿಯ ವಿದ್ಯಾರ್ಥಿಗಳ ಆಕ್ರೋಶದ ಕೂಗಾಗಿದೆ.
ಬಾಕ್ಸ್
--------
ಲೋಕಲ್ ಬಸ್ ಇಲ್ಲದ ಕಾರಣ ವಿದ್ಯಾರ್ಥಿಗಳು ಅಪರಿಚಿತ ಹಾಗೂ ಹೊರರಾಜ್ಯದ ವಾಹನಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಸುರಕ್ಷತೆಯ ದೃಷ್ಟಿಯಿಂದ ಆತಂಕಕಾರಿಯಾಗಿದೆ. ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಶಾಲೆ–ಕಾಲೇಜುಗಳಿಗೆ ತೆರಳುತ್ತಿರುವುದರಿಂದ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಸಾರಿಗೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ.
ಸಂದೀಪ ಅಶೋಕ ನಾಯ್ಕ,ಗ್ರಾಮಸ್ಥ