ಕನ್ನಡಪ್ರಭ ವಾರ್ತೆ ತುಮಕೂರುಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಮಾನಸಿಕ ಒತ್ತಡ ಒಳಗಾಗಿ ಆತ್ಮಹತ್ಯೆಯಂತಹ ದಾರಿಗಳನ್ನ ಹಿಡಿಯುತ್ತಿದ್ದು, ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ದೂರ ಮಾಡಲು ಅನುವಾಗುವಂತಹ ಮೌಲ್ಯಯುತ ಹಾಗೂ ಆಧ್ಯಾತ್ಮಿಕ ಚಿಂತನೆಯ ಶಿಕ್ಷಣ ಅವಶ್ಯಕತೆಯಿದೆ ಎಂದು ಬೆಂಗಳೂರಿನ ಇಸ್ಕಾನ್ ಸಂಸ್ಥೆಯ ಯೂಥ್ ವಿಭಾಗದ ನಿರ್ದೇಶಕ ಹಾಗೂ ಆಧ್ಯಾತ್ಮಿಕ ಚಿಂತಕ ಸುವರ್ಣ ಗೌರವ್ ಹರಿದಾಸ್ ಅವರು ಪ್ರತಿಪಾದಿಸಿದರು.ನಗರದ ಅಗಲಕೋಟೆಯ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ತುಮಕೂರು ಜಿಲ್ಲೆಯ ಹಿಂದುಸ್ತಾನ್ ಏರೋನಾಟಿಕ್ ಲಿಮಿಟೆಡ್ ಸಂಸ್ಥೆಯ ಸಹಯೋಗದೊಂದಿಗೆ ಬುಧವಾರ ನಡೆದ ಜಾಗೃತಿ ಅರಿವಿನ ಅಭಿಯಾನದಲ್ಲಿ ಮಾತನಾಡಿದರು.ಭ್ರಷ್ಟಾಚಾರ ಮತ್ತು ದೇಶದ ಆರ್ಥಿಕತೆ, ರಾಜಕೀಯ ಮತ್ತು ಸಾಮಾಜಿಕ ಪ್ರಗತಿಗೆ ಪೂರಕವಾಗುವ ಪ್ರಮುಖ ಅಂಶಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳಲ್ಲಿ ಇಂದು ಉಂಟಾಗುತ್ತಿರುವ ಮಾನಸಿಕ ಖಿನ್ನತೆ ಮತ್ತು ಆತ್ಮಹತ್ಯೆಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಾಲೆ ಮತ್ತು ಕಾಲೇಜು ಹಂತದಲ್ಲಿ ಮೌಲ್ಯಯುತವಾದ ಶಿಕ್ಷಣ ನೀಡುವ ಸಲುವಾಗಿ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯು ಸಾರ್ವಜನಿಕ ಅಭಿಯಾನದಂತ ಕಾರ್ಯಕ್ರಮಗಳ ಮೂಲಕ ಮಹತ್ವದ ಹೆಜ್ಜೆಯನ್ನು ಇಟ್ಟಿದೆ ಎಂದು ಅವರು ತಿಳಿಸಿದರು. ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆಯ ಹೆಲಿಕ್ಯಾಪ್ಟರ್ ಉತ್ಪಾದನಾ ವಿಭಾಗದ ಎಜಿಎಂ ವೆಂಕಟೇಶ್ ಸಿ.ಎಸ್ ಅವರು ಮಾತನಾಡಿ ಭಾರತ ಸರ್ಕಾರದಿಂದ ರಾಷ್ಟ್ರೀಯ ಸಾಂಸ್ಕೃತಿಕ ಚಿಂತನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಎಚ್‌ಎಎಲ್ ವತಿಯಿಂದ ದೇಶಾದ್ಯಂತ ಮೌಲ್ಯಯುತ ಮತ್ತು ಸಂಸ್ಕಾರಯುತವಾದ ಶೈಕ್ಷಣಿಕ ವಿಚಾರಾತ್ಮಕಗಳನ್ನು ತಿಳಿಸುವ ಸಲುವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯ ಡಿಜಿಎಂ ಸೋನಿ ಜೋಸೆಫ್, ಉತ್ಪಾದನಾ ಘಟಕದ ಜನರಲ್ ಮ್ಯಾನೆಜರ್ ಮಂಜುನಾಥ್, ಎಚ್‌ಎಎಲ್ ವಿಸಲೆನ್ಸ್ ಕಮಿಟಿಯ ಈಶಾನ್ ಆಲಿ ಪತ್ವ, ಸಿದ್ಧಾರ್ಥ ಮೆಡಿಕಲ್ ಕಾಲೇಜು ನರ್ಸಿಂಗ್ ವಿಭಾಗದ ಸೂಪರ್ ಡೆಂಟ್ ನಾಗರತ್ನ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.