ಶಿವಲಿಂಗದಲ್ಲಿ ಅದ್ವಿತೀಯ ಶಕ್ತಿಯಿದೆ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Mar 22, 2026, 02:15 AM IST
ಮೋದಕ ಸಂವತ್ಸರದ ಸಮಾರೋಪದಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ರಾಜಮಾನ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಶಿವಲಿಂಗದಲ್ಲಿ ಅದ್ವಿತೀಯ ಶಕ್ತಿಯಿದೆ. ಶಿವನ ಬಣ್ಣ ಶುದ್ಧ ಸ್ಪಟಿಕದ ಬಣ್ಣ ಅಂದರೆ ಪಾರದರ್ಶಕವಾದದ್ದು.

ರಾಜಮಾನ್ಯ, ಸಿಂಧೂರಶ್ರೀ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ

ಕನ್ನಡಪ್ರಭ ವಾರ್ತೆ ಸಿದ್ದಾಪುರಶಿವಲಿಂಗದಲ್ಲಿ ಅದ್ವಿತೀಯ ಶಕ್ತಿಯಿದೆ. ಶಿವನ ಬಣ್ಣ ಶುದ್ಧ ಸ್ಪಟಿಕದ ಬಣ್ಣ ಅಂದರೆ ಪಾರದರ್ಶಕವಾದದ್ದು. ಸ್ಪಟಿಕಲಿಂಗ ಆ ಕಾರಣದಿಂದ ಎಲ್ಲಕ್ಕಿಂತ ವಿಶೇಷ. ಸ್ಪಟಿಕದಂಥ ಪರಿಶುದ್ಧ ಮನಸ್ಸನ್ನು ಕರುಣಿಸು ಎಂದು ನಾವು ದೇವರಲ್ಲಿ ಕೋರಬಹುದಾಗಿದೆ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಮಹಾಸ್ವಾಮಿಗಳು ನುಡಿದರು.ತಾಲೂಕಿನ ಕಲಗದ್ದೆಯ ಶ್ರೀ ನಾಟ್ಯವಿನಾಯಕ, ಲಲಿತಾ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಕಳೆದ ೮ ತಿಂಗಳಿನಿಂದ ನಡೆಯುತ್ತ ಬಂದ ಮೋದಕ ಸೇವಾಸಂವತ್ಸರದ ಮಹಾ ಸಮಾರೋಪದಲ್ಲಿ ರಾಜಮಾನ್ಯ ಹಾಗೂ ಸಿಂಧೂರಶ್ರೀ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.ಆಶೆ ಪ್ರಬಲವಾಗಿದ್ದರೆ ಸಂಕಲ್ಪ, ಸಂಕಲ್ಪ ಗಟ್ಟಿಯಾಗಿದ್ದರೆ ಸಾಧನೆ, ಸಾಧನೆ ಧೃಡವಾಗಿದ್ದರೆ ಸಿದ್ಧಿ. ಯಾವುದೇ ಕಾರ್ಯ ಕೈಗೂಡಲು ಈ ನಾಲ್ಕು ಅತ್ಯಗತ್ಯ. ಶ್ರೀ ಶಂಕರರ ಸಂಕಲ್ಪ ಧೃಡವಾಗಿರುವುದಕ್ಕೆ ಶ್ರೀ ಮಠವು ಸಾವಿರಾರು ವರ್ಷಗಳಿಂದ ಕ್ರಿಯಾಶೀಲವಾಗಿ ನಡೆದುಕೊಂಡುಬಂದಿದೆ. ಮುಂದಿನ ಸಹಸ್ರ ವರ್ಷಗಳಲ್ಲೂ ಮುನ್ನಡೆಯಲಿದೆ. ವಿನಾಯಕ ಹೆಗಡೆ ಗಟ್ಟಿಯಾದ ಸಂಕಲ್ಪದಿಂದ ಶ್ರೀ ನಾಟ್ಯವಿನಾಯಕ, ನಂತರದಲ್ಲಿ ಶ್ರೀ ಲಲಿತಾ ರಾಜರಾಜೇಶ್ವರಿ, ಈಗ ಶ್ರೀ ಕಾಮೇಶ್ವರ ದೇವರುಗಳನ್ನು ಗುರು ಸಹಿತವಾಗಿ ಈ ಸ್ಥಳದಲ್ಲಿ ಸಾನಿಧ್ಯಗೊಳಿಸಿದ್ದಾರೆ. ಈ ಕ್ಷೇತ್ರವು ಭಕ್ತರ ಸಕಲ ಇಷ್ಟಾರ್ಥಗಳನ್ನು ಕರುಣಿಸಲಿ ಎಂದರು.ಸಾನಿಧ್ಯ ವಹಿಸಿದ್ದ ಶಿರಳಗಿ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಶ್ರೀಗಳು ಆಶೀರ್ವಚನ ನೀಡಿ ಜಗತ್ತು ಭಗವಂತನ ನಾಟ್ಯ ರಂಗ. ದೇವರು ದೊಡ್ಡ ದೇವಾಲಯಗಳಿಗೆ, ದೇವರ ಕೋಣೆಗೆ ಮಾತ್ರ ಸೀಮಿತವಾಗಿಲ್ಲ. ಆತ ಎಲ್ಲೆಡೆಗೂ ಇರುತ್ತಾನೆ. ನಮಗೆ ಭಗವಂತನನ್ನು ನೋಡುವ ದೃಷ್ಟಿ ಬರಬೇಕು.ಶಾಂತಿ,ಸಮಾಧಾನ ದೊರೆಯುವ ಸ್ಥಳದಲ್ಲಿ ದೇವರಿದ್ದಾನೆ ಎಂದರು.ರಾಜಮಾನ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪ್ರಸಕ್ತ ದಿನಮಾನದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣ ಭಯ, ಭಕ್ತಿ, ಗುರುಹಿರಿಯರ ಋಣದ ಕುರಿತಾದ ತಿಳುವಳಿಕೆಯ ಕೊರತೆ. ಎಲ್ಲರಿಗೂ ಒಂದಿಲ್ಲೊಂದು ಚಿಂತೆ ಇದ್ದೇ ಇರುತ್ತದೆ. ನೆಮ್ಮದಿ ಹಣದಿಂದ ದೊರೆಯುವುದಿಲ್ಲ. ಈವರೆಗೆ ದೊರೆತ ಎಲ್ಲ ಪ್ರಶಸ್ತಿಗಳಿಗಿಂತ ಪಕ್ಷಪಾತ, ಜಾತಿ, ಮತದ ಹಂಗಿಲ್ಲದ ಈ ಪ್ರಶಸ್ತಿ ಎಲ್ಲಕ್ಕಿಂತ ಮಿಗಿಲಾದದ್ದು ಎಂದು ಭಾವಿಸಿದ್ದೇನೆ. ಈ ಜಿಲ್ಲೆ ನನ್ನ ಆತ್ಮೀಯವಾದ ಜಿಲ್ಲೆ. ಈ ಕ್ಷೇತ್ರದ ಅಭಿವೃದ್ಧಿಗೆ ನನ್ನಿಂದಾದ ಸಹಕಾರ ಸದಾ ಇರುತ್ತದೆ ಎಂದರು.ಮೋದಕ ಸೇವಾ ಸಮಿತಿ ಅಧ್ಯಕ್ಷ, ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಈ ಕ್ಷೇತ್ರ ಒಂದು ಶಕ್ತಿಪೀಠ. ಶ್ರೀಗಳ ಆಶೀರ್ವಾದ, ಭಕ್ತಾದಿಗಳ ಸಹಕಾರದಿಂದ ಈ ಕ್ಷೇತ್ರ ಅಭಿವೃದ್ಧಿಗೊಳ್ಳುತ್ತಿದೆ. ನಮ್ಮಲ್ಲಿನ ಕಲ್ಮಶ ದೂರ ಮಾಡಿಕೊಂಡು ಸಮಾಜದ ಒಳಿತಿಗೆ ನಾವು ಮುಂದಾಗಬೇಕು. ಶಾಸನ ಸಭೆಯನ್ನು ದೇಗುಲವೆಂದು ನಾವೆಲ್ಲ ಭಾವಿಸಿದ್ದೇವೆ. ಅಂಥ ದೇಗುಲದಲ್ಲಿ ಕೆಲವೊಮ್ಮೆ ಬಳಸುವ ಶಬ್ಧಗಳು ವ್ಯತಿರಿಕ್ತವಾಗುತ್ತಿವೆ. ಅಲ್ಲಿ ಒಳ್ಳೆಯ ಮಾತುಗಳು ಬರಲಿ ಎಂದು ಆಶಿಸುತ್ತೇನೆ ಎಂದರು.

ಸಿಂಧೂರಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಹಕಾರಿ, ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿದರು.

ಮೋದಕ ಸೇವಾ ಸ್ವಾಗತ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ ದೊಡ್ಮನೆ ಉಪಸ್ಥಿತರಿದ್ದರು.ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಸ್ವಾಗತಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿದರು. ಮೋಹನ ಹೆಗಡೆ ಹೆರವಟ್ಟಾ, ರಾಘವೇಂದ್ರ ಬೆಟ್ಟಕೊಪ್ಪ ಸನ್ಮಾನಪತ್ರ ವಾಚಿಸಿದರು.ಇದಕ್ಕೂ ಮುನ್ನ ಶ್ರೀಗಳ ಭೀಕ್ಷಾಸೇವೆ, ಮೋದಕ ಹವನದ ಮಹಾಪೂರ್ಣಾಹುತಿ, ರಥೋತ್ಸವ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈದ್‌ ಸಂಭ್ರಮ: ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ
ಜಾಗತಿಕ ಶಾಂತಿ, ಸಹಬಾಳ್ವೆಗಾಗಿ ಕೈಜೋಡಿಸಲು ಮನವಿ