ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಸಿಬ್ಬಂದಿ ಕೊರತೆಯದ್ದೇ ಮಹಾ ಸಮಸ್ಯೆ
ಬಿಎಎಂಎಸ್ ಕಡಿತವಾಗಲು ಬೋಧಕೇತರ ಸಿಬ್ಬಂದಿ ಸಹ ಕಾರಣಆರ್ಥಿಕ ಇಲಾಖೆ ಅನುಮತಿ ನೀಡಿದರೂ ಸಿಬ್ಬಂದಿ ಭರ್ತಿಯ ಕ್ರಮವಿಲ್ಲ
ಮಂಜುನಾಥ ಕೆ.ಎಂ.ಕನ್ನಡಪ್ರಭ ವಾರ್ತೆ ಬಳ್ಳಾರಿ
ಗುಣಮಟ್ಟದ ಚಿಕಿತ್ಸೆಗೆ ಹೆಸರಾಗಿರುವ ಹಾಗೂ ಕಲ್ಯಾಣ ಕರ್ನಾಟಕದ ಏಕೈಕ ಸರ್ಕಾರಿ ಆಯುರ್ವೇದ ಕಾಲೇಜು ಎಂಬ ಖ್ಯಾತಿ ಹೊತ್ತಿರುವ ನಗರದ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಬೋಧಕೇತರ ಸಿಬ್ಬಂದಿ ಅಭಾವವೂ ದೊಡ್ಡದಿದೆ.ಬೋಧಕ ಸಿಬ್ಬಂದಿ ಸಮಸ್ಯೆಯಿಂದಾಗಿ ಬಿಎಎಂಎಸ್ ಪ್ರವೇಶದ ಪ್ರಮಾಣ ಗಮನಾರ್ಹ ಕಡಿತಕ್ಕೆ ಕಾರಣವಾಗಿದ್ದರೆ, ಬೋಧಕೇತರ ಸಿಬ್ಬಂದಿ ಹಾಗೂ ಆಸ್ಪತ್ರೆಯ ತಾಂತ್ರಿಕ ಸಿಬ್ಬಂದಿಯ ಕೊರತೆಯಿಂದ ಆಯುರ್ವೇದ ಕಾಲೇಜಿಗೆ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಗೆ ಹಿನ್ನಡೆಯಾದಂತಾಗಿದೆ. ಸಿಬ್ಬಂದಿ ಕೊರತೆ ಎಷ್ಟೆಷ್ಟು:
ಆಯುರ್ವೇದ ಕಾಲೇಜಿನಲ್ಲಿ ಒಟ್ಟು 51 ಬೋಧಕ ಸಿಬ್ಬಂದಿಯ ಮಂಜೂರಾತಿ ಹುದ್ದೆಗಳಿವೆ. ಈ ಪೈಕಿ 27 ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇರುವ 27 ವೈದ್ಯರ ಪೈಕಿ ಐವರು ಗುತ್ತಿಗೆ ಆಧಾರದಲ್ಲಿ ಸೇವೆ ನೀಡುತ್ತಿದ್ದಾರೆ. ಅಂದರೆ ಕಾಯಂ ಬೋಧಕ ಸಿಬ್ಬಂದಿ 22 ಜನರು ಮಾತ್ರ ! ಗಮನಾರ್ಹ ಸಂಗತಿ ಎಂದರೆ ಬಹುತೇಕ ಪ್ರಾಧ್ಯಾಪಕರ ಹುದ್ದೆಗಳು ಕಳೆದ 25 ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ನೇಮಕವಾಗಿಲ್ಲ. ಅಸೋಸಿಯೇಟ್ ಪ್ರಾಧ್ಯಾಪಕರ ಹುದ್ದೆಗಳು 6 ಇದ್ದು ಈ ಪೈಕಿ ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.19 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಲ್ಲಿ ಐದು ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ.
ಇನ್ನು ಕಚೇರಿ ಸಿಬ್ಬಂದಿಯ ಕೊರತೆ ಗಣನೀಯವಾಗಿದ್ದು ಕಾಲೇಜು ಹಾಗೂ ಆಸ್ಪತ್ರೆಯ ಗುಣಮಟ್ಟ ಸೇವೆಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.10 ಬೆಡ್‌ಗೆ ಓರ್ವ ನರ್ಸ್ ಬೇಕು:
ಆಯುರ್ವೇದ ಆಸ್ಪತ್ರೆಯಲ್ಲಿನ 9 ವೈದ್ಯಾಧಿಕಾರಿಗಳ ಪೈಕಿ 5 ಹಿರಿಯ ವೈದ್ಯಾಧಿಕಾರಿಗಳ ಹುದ್ದೆ ಖಾಲಿಯಾಗಿವೆ. ಈವರೆಗೆ ವೈದ್ಯಾಧಿಕಾರಿಗಳ ಭರ್ತಿ ಮಾಡಿಕೊಳ್ಳದಿರುವುದರಿಂದ ಆಸ್ಪತ್ರೆಯಲ್ಲಿನ ಬೇರೆ ವಿಭಾಗದ ವೈದ್ಯರನ್ನೇ ನಿಯೋಜಿಸಿ ಕೆಲಸ ಮಾಡಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಫಿಜಿಯೋಥೆರಪಿ ಹಾಗೂ ನ್ಯಾಚರೋಪತಿ ವಿಭಾಗಗಳಲ್ಲಿನ ಇಬ್ಬರು ವೈದ್ಯಾಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದ್ದು, ಈ ವಿಭಾಗಗಳು ಮುಚ್ಚುವ ಸ್ಥಿತಿಯಲ್ಲಿವೆ. ನಿಯಮ ಪ್ರಕಾರ ಆಸ್ಪತ್ರೆಯ 10 ಹಾಸಿಗೆಗೆ (ಬೆಡ್) ಓರ್ವ ನರ್ಸ್ ಬೇಕು. ಅಂದರೆ 170 ಹಾಸಿಗೆಗಳು ಸೇರಿದಂತೆ ಆಪರೇಷನ್ ಥಿಯೇಟರ್‌ಗೆ ಮತ್ತಿತರ ಕೆಲಸಗಳಿಗೆ ಒಟ್ಟು 21 ನರ್ಸ್‌ಗಳ ಅಗತ್ಯವಿದೆ. ಆದರೆ, ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸ್ ಗಳ ಸಂಖ್ಯೆ ಬರೀ 13 ಮಾತ್ರ!ಲ್ಯಾಬರೇಟರಿ ಟೆಕ್ನಿಷಿಯನ್ 3 ಹುದ್ದೆ ಖಾಲಿ ಇದ್ದು, ಒಬ್ಬರನ್ನು ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡು ನಡೆಸಲಾಗುತ್ತಿದೆ. ಡಿ ಗ್ರೂಪ್ ಹುದ್ದೆಗಳು ದೊಡ್ಡ ಸಂಖ್ಯೆಯಲ್ಲಿ ಖಾಲಿಯಿವೆ. ಅಟೆಂಡರ್, ಮಸಾಜಿಸ್ಟ್, ನೈಟ್ ವಾಚ್‌ಮನ್, ವಾರ್ಡ್ ಬಾಯ್, ಅನಾಟಮಿ ಅಟೆಂಡರ್, ಗ್ರೂಫ್ ಡಿ, ಸ್ಯಾನಿಟರಿ ವರ್ಕರ್ ಸೇರಿದಂತೆ 57 ಹುದ್ದೆಗಳಲ್ಲಿ 20 ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇನ್ನು 37 ಖಾಲಿ ಹುದ್ದೆಗಳಿವೆ. 28 ಹುದ್ದೆಗಳು ನೇಮಕವಿಲ್ಲ!
2023ರ ಸೆಪ್ಟೆಂಬರ್‌ನಲ್ಲಿ 28 ಹುದ್ದೆಗಳನ್ನು ಭಾರತೀಯ ವೈದ್ಯ ಪದ್ಧತಿಗಳ ರಾಷ್ಟ್ರೀಯ ಆಯೋಗದ ನಿಯಮ ಪ್ರಕಾರ ಸೃಜನೆಗೊಂಡಿವೆ. 3 ಅಸಿಸ್ಟೆಂಟ್ ಪ್ರೊಫೆಸರ್, ತುರ್ತು ವೈದ್ಯಕೀಯ ಚಿಕಿತ್ಸೆಗೆ ಇಬ್ಬರುಎಂಬಿಬಿಎಸ್ ವೈದ್ಯರು, ಓರ್ವ ಲೈಬ್ರರಿಯನ್, 4 ನರ್ಸ್‌ಗಳು, 1 ಡಾಟಾ ಎಂಟ್ರಿ ಆಪರೇಟರ್, 7 ಲ್ಯಾಬ್ ಅಸಿಸ್ಟೆಂಟ್‌ಗಳನ್ನು ಭರ್ತಿ ಮಾಡಿಕೊಳ್ಳುವಂತೆ ಆರ್ಥಿಕ ಇಲಾಖೆ ಅನುಮತಿ ಸಹ ನೀಡಿದೆ. ಈವರೆಗೆ ಸರ್ಕಾರ ಈ ಹುದ್ದೆ ಭರ್ತಿ ಮಾಡಿಕೊಂಡಿಲ್ಲ. 2 ವರ್ಷಗಳಾದರೂ ಕ್ರಮ ವಹಿಸದಿರುವುದರಿಂದ ಬಿಎಎಂಎಸ್ ಪ್ರವೇಶಾತಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ವೈದ್ಯಪದ್ಧತಿಗಳ ರಾಷ್ಟ್ರೀಯ ಆಯೋಗ ಕಡಿತಗೊಳಿಸಿದ್ದು, ಆಯುರ್ವೇದ ವೈದ್ಯಕೀಯ ಸೇವೆಗೆ ಬರುವ ಆಸೆ ಹೊಂದಿದ್ದ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತಾಗಿದೆ. ಡಿ ಗ್ರೂಫ್ ನೌಕರ ಮೇಲ್ವಿಚಾರಕ!
ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಕಳೆದ 21 ವರ್ಷಗಳಿಂದಲೂ ಲೈಬ್ರರಿಯನ್ ಇಲ್ಲ. ಹೀಗಾಗಿಯೇ ಡಿ-ಗ್ರೂಫ್ ನೌಕರರೊಬ್ಬರನ್ನು ಗ್ರಂಥಪಾಲಕರನ್ನಾಗಿ ನೇಮಿಸಲಾಗಿದೆ.ಇನ್ನು ಕಾಲೇಜಿನ ಆಗದ ತಂತ್ರ ವ್ಯವಹಾರ ಮತ್ತು ವಿಧಿವೈದ್ಯಕ ವಿಭಾಗಕ್ಕೆ ಕಳೆದ 20 ವರ್ಷಗಳಿಂದಲೂ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕವಾಗಿಲ್ಲ. ಈ ವಿಭಾಗವು ಜೀವಂತ ಮತ್ತು ನಿರ್ಜೀವ ಮೂಲದ ವಿಷದ ಗುರುತಿಸುವಿಕೆ, ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ನಿರ್ವಹಣೆಗೆ ಸಂಬಂಧಿಸಿದ್ದಾಗಿದ್ದು, ಈ ವಿಭಾಗವನ್ನು ಬೇರೆ ಘಟಕಗಳ ವೈದ್ಯರು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವಂತಾಗಿದೆ.