ತ್ಯಾಗ, ಸೇವೆಗೆ ಬಹಳ ಗೌರವವಿದೆ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork |  
Published : Jul 25, 2026, 02:30 AM IST
ಕರಡೊಳ್ಳಿ ನೂತನ ಗೋಶಾಲಾ ನಿರ್ಮಾಣ ವೀಕ್ಷಿಸಿ, ಆಶೀರ್ವಚನ ನೀಡಿದ ಸ್ವರ್ಣವಲ್ಲೀ ಶ್ರೀಗಳು. | Kannada Prabha

ಸಾರಾಂಶ

ಹಿಂದೂ ಸಮಾಜದಲ್ಲಿ ಭಗವದ್ಗೀತೆಯ ಅರಿವಾಗದವರು ಯಾರೂ ಇರಬಾರದು. ಕತ್ತಲೆಯಲ್ಲಿದ್ದವರಿಗೆ ಬೆಳಕು ಹೇಗೋ ಹಾಗೆಯೇ ಅಜ್ಞಾನದಲ್ಲಿದ್ದವರಿಗೆ ಗೀತೆಯ ಜ್ಞಾನ ಮೂಡಿಸಿ, ನಮ್ಮಲ್ಲಿರುವ ಕತ್ತಲೆಯನ್ನು ಓಡಿಸುವ ಮಹಾಕಾರ್ಯವಾಗಬೇಕು.

ಕರಡೊಳ್ಳಿ ನೂತನ ಗೋಶಾಲಾ ನಿರ್ಮಾಣ ವೀಕ್ಷಿಸಿ, ಆಶೀರ್ವಚನ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಹಿಂದೂ ಸಮಾಜದಲ್ಲಿ ಭಗವದ್ಗೀತೆಯ ಅರಿವಾಗದವರು ಯಾರೂ ಇರಬಾರದು. ಕತ್ತಲೆಯಲ್ಲಿದ್ದವರಿಗೆ ಬೆಳಕು ಹೇಗೋ ಹಾಗೆಯೇ ಅಜ್ಞಾನದಲ್ಲಿದ್ದವರಿಗೆ ಗೀತೆಯ ಜ್ಞಾನ ಮೂಡಿಸಿ, ನಮ್ಮಲ್ಲಿರುವ ಕತ್ತಲೆಯನ್ನು ಓಡಿಸುವ ಮಹಾಕಾರ್ಯವಾಗಬೇಕು ಎಂದು ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.

ಗುರುವಾರ ತಾಲೂಕಿನ ಕರಡೊಳ್ಳಿ ಗೋವರ್ಧನ ಸಂಸ್ಥೆಯ ಸ್ವರ್ಣನಂದಿನಿ ಗೋಸಂಸ್ಥಾನ ನೂತನ ಗೋಶಾಲಾ ನಿರ್ಮಾಣದ ಕಾಮಗಾರಿ ವೀಕ್ಷಿಸಿ, ಗೋವುಗಳಿಗೆ ಗೋಗ್ರಾಸ ನೀಡಿ, ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗೀತೆಯು ಪ್ರತಿಯೊಬ್ಬನನ್ನು ತಲುಪಿ, ಅದರ ಮಹತ್ವದ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ. ಗೋವು ಮತ್ತು ಗೀತೆಯಿಂದ ಸಮಾಜದಲ್ಲಿನ ವ್ಯಕ್ತಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತಾಗಬೇಕು. ನಾಡಿನಾದ್ಯಂತ ಗೀತಾಭಕ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬೆಳೆಯುತ್ತಿದ್ದಾರೆ. ತ್ಯಾಗದ ಮನೋಭಾವನೆ ಮತ್ತು ಸೇವೆಗೆ ಬಹಳ ಗೌರವವಿದೆ. ಗೋಹತ್ಯೆ ಕಾನೂನಿದ್ದರೂ, ಕಟುಕರಿಗೆ ಗೋವುಗಳು ಸಿಗುತ್ತಿರುವುದು ಖೇದಕರ. ಗೋವುಗಳನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಸಮಾಜದಲ್ಲಿಂದು ಒಂದೆಡೆ ಮತಾಂತರವಾಗುತ್ತಿದೆ. ಇದು ದೇಶದ ಭವಿಷ್ಯತ್ತಿಗೆ ಒಳಿತಾಗದು. ಆ ದೃಷ್ಟಿಯಿಂದ ಗಣಪತಿ ಭಟ್ಟ ಕೋಲೀಬೇಣ ಅವರ ತಂಡ ₹೨ ಕೋಟಿ ವೆಚ್ಚದಲ್ಲಿ ಬೃಹತ್ ಗೋಶಾಲೆ ನಿರ್ಮಿಸುತ್ತಿದ್ದಾರೆ. ಈ ಸಮಿತಿಯ ಕಾರ್ಯಕರ್ತರ, ದಾನಿಗಳ ಸಹಕಾರದಿಂದ ಸಾವಿರಾರು ಗೋವುಗಳಿಗೆ ಒಂದು ಆಶ್ರಯ ತಾಣವಾಗಲಿದೆ ಎಂದ ಶ್ರೀಗಳು, ಇಲ್ಲಿ ಮಾತೆಯರಿಂದ ಭಗವದ್ಗೀತಾ ಪಾರಾಯಣ ನಡೆದಿರುವುದು ಶುಭಸೂಚನೆ ಎನ್ನಬಹುದು. ಸುಬ್ರಾಯ ನಂದೋಡಿಯವರ ಶ್ರಮ ಸಾರ್ಥಕವಾಗಲಿ. ನಾಡಿನಾದ್ಯಂತ ಅವರ ಸಂಕಲ್ಪ ವಿಸ್ತಾರಗೊಳ್ಳಲಿ ಎಂದರು.

ಕಾಸರಗೋಡಿನ ಗೀತಾಜ್ಞಾನಯಜ್ಞ ಟ್ರಸ್ಟಿನ ಮುಖ್ಯ ಗುರುಗಳಾದ ಸುಬ್ರಾಯ ನಂದೋಡಿ ಮಾತನಾಡಿ, ಮುಂಬರುವ ೨೫ ವರ್ಷಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಭಗವದ್ಗೀತೆಯ ಪಾರಾಯಣ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳುವಂತೆ ಮಾಡುವ ಸಂಕಲ್ಪ ಹೊಂದಿದ್ದೇವೆ. ಎಲ್ಲೆಡೆ ತಾಯಂದಿರು ಗೀತೆಯ ಪಾರಾಯಣದಲ್ಲಿ ಭಾಗಿಯಾಗುತ್ತಿದ್ದಾರೆ. ದಂಪತಿ ಸಹಿತ ಭಾಗಿಯಾದರೆ ಶ್ರೀಗಳ ಅನುಗ್ರಹಕ್ಕೆ ವಿಶೇಷವಾಗಿ ಪಾತ್ರರಾಗಬಹುದು. ಅಲ್ಲದೇ ಪ್ರತಿ ಮನೆಮನೆಯಲ್ಲಿಯೂ ಗೀತೆಯ ಅರಿವು ಮೂಡುವಂತೆ ನಾವೆಲ್ಲರೂ ಕೂಡಿ ಪ್ರಯತ್ನಿಸೋಣ ಎಂದರು.

ಈ ಸಂದರ್ಭ ಗೀತಾಜ್ಞಾನಯಜ್ಞ ಟ್ರಸ್ಟಿನ ಯಲ್ಲಾಪುರ ಸಮಿತಿಯ ಮಾತೆಯರು ಗೋಶಾಲೆಗೆ ₹೫೦,೦೦೫ ಸಮರ್ಪಣೆ ಮಾಡಿದರು. ಗೋವರ್ಧನ ಗೋಶಾಲೆಯ ಕಾರ್ಯಾಧ್ಯಕ್ಷ ರಾಮಕೃಷ್ಣ ಭಟ್ಟ ಕವಾಳೆ, ಆಡಳಿತ ಮಂಡಳಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಗೀತಾಯಜ್ಞದ ಯಲ್ಲಾಪುರ ಸಮಿತಿಯ ಪ್ರಮುಖರಾದ ವಿನುತಾ ಕೋಟೆಮನೆ, ರಚನಾ ಹೆಗಡೆ ಇವರ ನೇತೃತ್ವದಲ್ಲಿ ೫೦ಕ್ಕೂ ಹೆಚ್ಚು ಮಾತೆಯರು ಗೀತಾ ಪಾರಾಯಣ ನಡೆಸಿಕೊಟ್ಟರು. ಗೋಶಾಲೆಯ ಪ್ರಧಾನ ಕಾರ್ಯದರ್ಶಿ ವಿ.ಗಣಪತಿ ಭಟ್ಟ ಕೋಲಿಬೇಣ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಿಮ ಮತದಾರರ ಪಟ್ಟಿ ಅ.19ರಂದು ಪ್ರಕಟ: ಡಿಸಿ
ಕೇಂದ್ರ ಕಾರಾಗೃಹದಲ್ಲಿ ಕನ್ನಡಗೀತೆಗಳ ಗಾಯನ