ಸುಜ್ಞಾನ ಸಂಗಮ ಸಮಾರಂಭದಲ್ಲಿ ಶಾಂತವೀರ ಸ್ವಾಮೀಜಿಕನ್ನಡಪ್ರಭ ವಾರ್ತೆ ಹೊಸದುರ್ಗ
ಜಾತಿಗೊಂದು ಕೇರಿಗೊಂದು ಕುಲಕ್ಕೊಂದು ದೇವಸ್ಥಾನ ಕಟ್ಟುವ ಬದಲು ಗ್ರಾಮಕ್ಕೊಂದು ದೇವಸ್ಥಾನ ಕಟ್ಟಿ. ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಸಮುದಾಯ ಭವನ ಇನ್ನಿತರೆ ಸಮಾಜಮುಖಿ ಜನಪರ ಕಾರ್ಯಗಳನ್ನು ಆಲೋಚಿಸುವ ಮೂಲಕ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಿ ಎಂದು ಹೊಸದುರ್ಗ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.ತಾಲೂಕಿನ ಎಸ್.ನೇರಲಕೆರೆ ಗ್ರಾಮದಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಸುಜ್ಞಾನ ಸಂಗಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಬಡವರ, ರೈತರ ಪರ ನಾವಿರುತ್ತೇವೆ ಎಂಬ ಆತ್ಮಸ್ಥೈರ್ಯ ತುಂಬಲು ಹಳ್ಳಿಗಳಲ್ಲಿ ಸುಜ್ಞಾನ ಸಂಗಮ ಆಯೋಜನೆ ಮಾಡಲಾಗುತ್ತಿದೆ. ದುಶ್ಚಟ ದುರಭ್ಯಾಸ, ರಾಗ ದ್ವೇಷ ದುರ್ಗುಣಗಳನ್ನು ನಮ್ಮ ಜೊಳಗಿಗೆ ಹಾಕಬೇಕೆಂದು ಮನವಿ ಮಾಡಿದ ಶ್ರೀಗಳು, ಅವಿಭಕ್ತ ಕುಟುಂಬಗಳು ಇಂದು ಕಣ್ಮರೆಯಾಗಿ ಕೃಷಿ ಭೂಮಿ ಹರಿದು ಹಂಚಿಹೊಗಿದೆ. ರೈತರು ತಾವು ದುಡಿದ ದುಡ್ಡನ್ನು ವ್ಯಯ ಮಾಡದೆ ಮಕ್ಕಳ ಶಿಕ್ಷಣಕ್ಕೆ, ಮುಂದಿನ ಭವಿಷ್ಯಕ್ಕೆ ಕೂಡಿಟ್ಟು ಉತ್ತಮ ಸಂಸ್ಕಾರಯುತ ಜೀವನ ನಡೆಸುವ ಮೂಲಕ ಉತ್ತಮ ನಾಗರೀಕರಾಗಬೇಕು ಎಂದು ಹೇಳಿದರು.ಹಬ್ಬ ಹರಿದಿನಗಳ ಹೆಸರಲ್ಲಿ ಸಾಲ ಮಾಡಬೇಡಿ, ಸಾಲದ ಶೂಲ ಅತ್ಯಂತ ಅಪಾಯಕಾರಿ. ಹಳ್ಳಿಗಳಲ್ಲಿರುವ ಜಾತಿಯತೆ ಮೂಡನಂಬಿಕೆ ಕಂದಾಚಾರ ಇನ್ನಿತರೆ ಸಮಸ್ಯೆಗಳನ್ನು ದೂರ ಮಾಡಿ ಸರ್ವ ಸಮಾಜಗಳ ಮಧ್ಯೆ ಸೌಹಾರ್ದ ವಾತಾವರಣ ನಿರ್ಮಿಸಲು ಕಳೆದ 28 ವರ್ಷಗಳಿಂದ ಸುಜ್ಞಾನ ಸಂಗಮ ಕಾರ್ಯಕ್ರಮ ಜಾತ್ಯತೀತವಾಗಿ ಪಕ್ಷಾತೀತವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಭಗಿರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಮಾತನಾಡಿದರು.ಕಾರ್ಯಕ್ರಮದಲ್ಲಿ ಕಟ್ಟೆ ರಂಗನಾಥಸ್ವಾಮಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯರಾದ ಬಿ.ಎಸ್.ದ್ಯಾಮಣ್ಣ. ಡಾ.ಕೆ.ಅನಂತ್, ಬಿಜೆಪಿ ಮುಖಂಡರಾದ ಕೋಡಿಹಳ್ಳಿ ತಮ್ಮಣ್ಣ. ತಂಡಗದ ಕಲ್ಲೇಶ್. ದಿಲ್.ಸೆ.ದಿಲೀಪ್. ಹಾಲಪ್ಪ. ಚಂದ್ರಣ್ಣ. ಉಪ್ಪಾರ ಸಂಘದ ಅಧ್ಯಕ್ಷ ಪರಪ್ಪ ಮತ್ತಿತರರು ಹಾಜರಿದ್ದರು.