ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಿಲ್ಲ, ಆತಂಕ ಬೇಡ: ಜಿಲ್ಲಾಧಿಕಾರಿ

KannadaprabhaNewsNetwork |  
Published : Mar 13, 2026, 02:15 AM IST
ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ  ಸಭೆ ನಡೆಸಿದರು. | Kannada Prabha

ಸಾರಾಂಶ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಬಳಕೆಯ ಅನಿಲ ಸರಬರಾಜು ವ್ಯವಸ್ಥೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಇಲ್ಲ.

ಅನಿಲ ಸರಬರಾಜು ಕಂಪನಿ, ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ

ಕನ್ನಡಪ್ರಭ ವಾರ್ತೆ ಕಾರವಾರ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಬಳಕೆಯ ಅನಿಲ ಸರಬರಾಜು ವ್ಯವಸ್ಥೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಇಲ್ಲವಾಗಿದ್ದು, ಗೃಹಬಳಕೆ ಅನಿಲದ ದೈನಂದಿನ ಸರಬರಾಜು ಮತ್ತು ವಿತರಣೆಯಲ್ಲಿ ಯಾವುದೇ ಅಡಚಣೆ ಇಲ್ಲದೇ ಎಂದಿನಂತೆ ನಡೆಯುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಅನಗತ್ಯ ಗೊಂದಲ ಮತ್ತು ಆತಂಕಗಳಿಗೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.

ಗುರುವಾರ ಜಿಲ್ಲೆಗೆ ಅನಿಲ ಸರಬರಾಜು ಮಾಡುವ ಕಂಪನಿಗಳ ಅಧಿಕಾರಿಗಳು ಮತ್ತು ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಗೆ ಅನಿಲ ಸರಬರಾಜು ಮಾಡುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕಂಪನಿಗಳ ಅಧಿಕಾರಿಗಳೊಂದಿಗೆ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ, ಎಲ್ಲಾ ಕಂಪನಿಗಳು ಜಿಲ್ಲೆಯ ದೈನಂದಿನ ಬೇಡಿಕೆಗೆ ತಕ್ಕಂತೆ ಗೃಹಬಳಕೆಯ ಅನಿಲ ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು ಗೃಹ ಬಳಕೆಯ ಅನಿಲ ಸರಬರಾಜು ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಿಲ್ಲ, ಕಳೆದ ಒಂದು ದಿನ ಮಾತ್ರ ಗ್ಯಾಸ್ ಮುಂಗಡ ಬುಕ್ಕಿಂಗ್‌ನಲ್ಲಿ ತಾಂತ್ರಿಕ ತೊಂದರೆ ಕಂಡುಬಂದಿದ್ದು, ಪ್ರಸ್ತುತ ಆ ದೋಷವನ್ನು ಸರಿಪಡಿಸಲಾಗಿದೆ. ಸಾರ್ವಜನಿಕರು ಗೃಹ ಬಳಕೆ ಅನಿಲ ಮುಂಗಡ ಬುಕಿಂಗ್‌ನ್ನು ಮೊಬೈಲ್ ಮಿಸ್ ಕಾಲ್ ಮೂಲಕ ಮಾತ್ರವೇ ಮಾಡದೇ ಇತರೇ ವಿಧಾನಗಳಾದ ಐವಿಆರ್‌ಎಸ್, ವಾಟ್ಸಾಪ್, ಮೊಬೈಲ್ ಅಪ್ಲಿಕೇಶನ್ ಮತ್ತು ಪಾವತಿ ಅಪ್ಲಿಕೇಶನ್ ವಿಧಾನಗಳನ್ನು ಕೂಡಾ ಬಳಸಬಹುದಾಗಿದೆ ಎಂದರು.

ಜಿಲ್ಲೆಯಲ್ಲಿನ ಅಂಗನವಾಡಿ, ಶಾಲೆ, ಆಸ್ಪತ್ರೆ, ಸರ್ಕಾರಿ ಹಾಸ್ಟೆಲ್‌ ಮತ್ತು ಇಂದಿರಾ ಕ್ಯಾಂಟೀನ್‌ಗಳ ದೈನಂದಿನ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಆದ್ಯತೆಯಲ್ಲಿ ಅನಿಲ ಸರಬರಾಜು ಮಾಡುವಂತೆ ತಿಳಿಸಿದ ಅವರು, ವಾಣಿಜ್ಯ ಬಳಕೆಯ ಸಿಲೆಂಡರ್‌ಗಳ ಸರಬರಾಜು ಮತ್ತು ವಿತರಣೆ ಕುರಿತಂತೆ ಸರ್ಕಾರ ನೀಡುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಹಾಗೂ ಸಾರ್ವಜನಿಕರು ಅನಿಲ ಪೂರೈಕೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಯಾವುದೇ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಆಹಾರ ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್ ಹಾಗೂ ವರ್ಚುವಲ್ ಮೂಲಕ ಅನಿಲ ಸರಬರಾಜು ಕಂಪನಿಗಳ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ತಾಲೂಕುಗಳ ಅನಿಲ ಸರಬರಾಜುದಾರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾಟೆ ಸ್ವಯಂ ರಕ್ಷಣೆಗೆ ಆಗತ್ಯ
ಕಾಳಸಂತೆಯಲ್ಲಿ ಸಿಲಿಂಡರ್‌ ಮಾರಾಟ: ಕ್ರಮಕ್ಕೆ ಆಗ್ರಹ