ಹಿರೇಕೆರೂರು: ಜಗದ್ಗುರು ರಂಭಾಪುರಿ ಪೀಠದ ಶಾಖಾ ಮಠವಾಗಿರುವ ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಪುಣ್ಯಾಶ್ರಮ ಜನ ವಸತಿಯಿಂದ ದೂರವಾಗಿದ್ದರೂ ಇಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ ಯಾರಿಗಾದರೂ ಅಚ್ಚರಿ ಮತ್ತು ಸಂತಸ ಉಂಟು ಮಾಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.
ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳ ಪರಿಶ್ರಮದ ಫಲವಾಗಿ ಈ ಕ್ಷೇತ್ರ ಬೆಳವಣಿಗೆ ಹೊಂದುತ್ತಿದೆ. ಮುಂದೊಂದು ದಿನ ಇದು ಒಂದು ಅದ್ಭುತ ಕ್ಷೇತ್ರವಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಶ್ರೀಗಳ ಶ್ರಮಕ್ಕೆ ಭಕ್ತರು ನೀಡುತ್ತಿರುವ ಸಹಕಾರವೂ ಸಹ ಅಮೂಲ್ಯವಾದದ್ದಾಗಿದೆ. ಕ್ಷೇತ್ರದ ಬೆಳವಣಿಗೆಗೆ ತಂದೆ ಯಡಿಯೂರಪ್ಪನವರು, ಸಹೋದರ ಬಿ.ವೈ.ರಾಘವೇಂದ್ರ ಅವರು ನೀಡುತ್ತಿರುವ ಸಹಕಾರದಲ್ಲಿ ತಾವೂ ಸಹ ಭಾಗಿಯಾಗುವುದಾಗಿ ತಿಳಿಸಿದರು.
ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೇಣುಕಾಚಾರ್ಯರು ಬೋಧಿಸಿದ ದಶ ಧರ್ಮ ಸೂತ್ರಗಳು ಎಲ್ಲರ ಶ್ರೇಯೋಭಿವೃದ್ಧಿಗೆ ಕಾರಣವಾಗಿವೆ. ಜನರಲ್ಲಿ ಎಷ್ಟು ಪ್ರಮಾಣದಲ್ಲಿ ಧಾರ್ಮಿಕ ಭಾವನೆ ಮತ್ತು ಆಚರಣೆ ಬೆಳೆದು ಬರುತ್ತವೆಯೋ ಅಷ್ಟು ಸಾಮರಸ್ಯ ಸದ್ಭಾವನೆ ಸಮಾಜದಲ್ಲಿ ಬೆಳೆದು ಬರುತ್ತವೆ. ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಕೃಪಾಶೀರ್ವಾದದಿಂದಾಗಿ ನಾವು ಊಹಿಸದ ಅಭಿವೃದ್ಧಿ ಈ ಕ್ಷೇತ್ರದಲ್ಲಿ ನಡೆಯುತ್ತಿದ್ದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕುಟುಂಬದವರ ನೆರವು ಹಾಗೂ ಭಕ್ತಾದಿಗಳ ಸಹಕಾರ ದೊಡ್ಡದು ಎಂದರು. ಇದೇ ಸಂದರ್ಭದಲ್ಲಿ ಬಿ.ವೈ. ವಿಜಯೇಂದ್ರ ಅವರು ರೇಣುಕಾಚಾರ್ಯ ಹರಕೆ ರಥದ ಮನೆ ಉದ್ಘಾಟನೆ ಮಾಡಿ ಕಡೇನಂದಿಹಳ್ಳಿ ಶ್ರೀಗಳು ಧರ್ಮ ಜಾಗೃತಿ ಮತ್ತು ಲೋಕ ಕಲ್ಯಾಣಕ್ಕಾಗಿ ಸಂಕಲ್ಪಿಸಿರುವ ಶ್ರಾವಣ ಶಿವಪೂಜಾ ತಪೋನುಷ್ಠಾನ ಕಾರ್ಯಕ್ರಮದ ಮಾಹಿತಿ ಪತ್ರಿಕೆ ಬಿಡುಗಡೆ ಮಾಡಿದರು.ಇದೇ ಸಂದರ್ಭದಲ್ಲಿ ರೇಣುಕಾಚಾರ್ಯ ಶಿಲಾಮಂಟಪ ಮತ್ತು ಶ್ರೀ ಮಠದ ಸುತ್ತ ಕೋಟೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಅರಕೆರೆ ಚನ್ನವೀರಸ್ವಾಮೀಜಿ ಸೇರಿದಂತೆ ಗಣ್ಯರು, ಭಕ್ತರು ಪಾಲ್ಗೊಂಡಿದ್ದರು.
ರಾಣಿಬೆನ್ನೂರಿನ ಕನಕಪರಮೇಶ್ವರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಲಲಿತಾ ಪಾಟೀಲ ಅವರ ನೇತೃತ್ವದಲ್ಲಿ ಶ್ರೀ ಮಠಕ್ಕೆ ಆಗಮಿಸಿದ ಭಕ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ನ್ಯಾಚುರಲ್ ಹೀಲಿಂಗ ಹಾಗೂ ಬಸವ ಅಕ್ಯೂ ಅಕಾಡೆಮಿ ಬೆಂಗಳೂರು-ದಾವಣಗೆರೆ ವ್ಯಾಪ್ತಿಯ ವೈದ್ಯರಿಂದ ಉಚಿತ ಸೀಡ್ ಮತ್ತು ಕಲರ್ ಥೆರಪಿ ಹಾಗೂ ಅಕ್ಯೂಪ್ರೆಶರ್ ಚಿಕಿತ್ಸೆ ನಡೆಯಿತು.