ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ನೆಹರೂ ಮೈದಾನದಲ್ಲಿನ ರಾಜಮಾತೆ ಕೆಂಪನಂಜಮ್ಮಣ್ಣಿ ವೇದಿಕೆಯಲ್ಲಿ ನಡೆದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯೂರು ತಾಲೂಕು ಹಲವು ವೈಶಿಷ್ಟತೆಗಳನ್ನು ತನ್ನ ಸೆರಗಿನಲ್ಲಿ ಅಡಗಿಸಿಕೊಂಡಿದೆ.ಇಲ್ಲಿ ಪಾಂಡವರ ನೆಲೆಗಳು, ಕೋಟೆ ಕೊತ್ತಲುಗಳು, ಕಲ್ಯಾಣಿಗಳು, ನಾಥ ಪಂಥದ ನೆಲೆಗಳು, ಸತಿ ಕಲ್ಲುಗಳು, ಶಕ್ತಿ ಪೀಠಗಳು, ಸ್ವಾತಂತ್ರ್ಯ ಹೋರಾಟಗಾರರ ಗ್ರಾಮಗಳು, ಖನಿಜ ನಿಕ್ಷೇಪಗಳು ಇವೆ.ಇಲ್ಲಿ ಮೈಸೂರು ಅರಸರು ಕಟ್ಟಿದ ವಿವಿ ಸಾಗರ ಜಲಾಶಯವಿದ್ದು ಇಂದಿಗೂ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಹತ್ತಾರು ಮಠಗಳು, ಮಧ್ವಾಚಾರ್ಯರು, ವಿಜಯನಗರ ಅರಸರ ಕಾಲದ ದೇಗುಲಗಳನ್ನು ತಾಲೂಕಿನಲ್ಲಿ ಕಾಣಬಹುದಾಗಿದೆ.ದಕ್ಷಿಣಕಾಶಿ ಎಂದೇ ಹೆಸರಾಗಿರುವ ಶ್ರೀ ತೇರುಮಲ್ಲೇಶ್ವರ ಸ್ವಾಮಿ, ನಂದಿಹಳ್ಳಿ ರಂಗನಾಥಸ್ವಾಮಿ ವೀರಭದ್ರಸ್ವಾಮಿ, ರೇಣುಕಾ ಪರಮೇಶ್ವರಿ ದೇವಿಯ ದೇಗುಲಗಳು ಇಲ್ಲಿ ನೆಲೆ ನಿಂತಿರುವುದು ಧಾರ್ಮಿಕ ಪರಂಪರೆಯ ಪ್ರತೀಕವಾಗಿದೆ.ಹಲವೆಡೆಗಳಲ್ಲಿ ಸತಿಕಲ್ಲು ಗಳು ಕಂಡು ಬಂದಿದ್ದು ತಾಲೂಕು ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲರ ಪ್ರಮುಖ ನೆಲೆಯಾಗಿದೆ.ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಹತ್ತಾರು ಕುಟುಂಬಗಳ ನೂರಾರು ಸ್ವಾತಂತ್ರ್ಯ ಹೋರಾಟಗಾರರ ನೆಲ ಇದು. ನಮ್ಮದು ಬಯಲ ಸೀಮೆಯ ಬರದ ನಾಡು ಆದರೂ ಸಹ ಬರಹಗಾರರಿಗೆ ಬರವಿಲ್ಲ. ಸಾಹಿತ್ಯ ಪರಂಪರೆಗೆ ಇಲ್ಲಿ ಹಿರಿತನವಿದೆ. ತಾಲೂಕು ಜಾನಪದ ಸಂಪತ್ತಿಗೆ, ರಂಗಕಲೆಗೆ, ಚಿತ್ರಕಲೆಗೆ, ಕ್ರೀಡೆಗೆ ಹೆಸರುವಾಸಿಯಾಗಿದೆ. ಭದ್ರಾ ಯೋಜನೆಯನ್ನು ಶೀಘ್ರ ಮುಕ್ತಾಯಗೊಳಿಸಿ ಅನ್ನದಾತನಿಗೆ ಯೋಜನೆಯ ಫಲ ಸಿಗಬೇಕಾಗಿದೆ.ಅನ್ನದಾತರು, ಸಾಹಿತಿಗಳು, ಕಲಾವಿದರು ಸಂತಸದಿಂದ ಇರುವ ನಾಡು ಸುಭಿಕ್ಷವಾಗಿರಲಿದೆ ಎಂದರು.
ಪ್ರಾಂಶುಪಾಲ ಆರ್.ಮಹೇಶ್ ಆಶಯ ನುಡಿಗಳನ್ನಾಡಿ ಹಲವು ಭಾಷೆಗಳ ಜೊತೆಗೆ ಸ್ಪರ್ದಿಸುತ್ತ ಕನ್ನಡ ತನ್ನ ಪ್ರಭುತ್ವ ಮೆರೆದಿದೆ. ಯಾರೇ ಲೇಖಕರಾಗಲಿ ಅನಿಸಿದ್ದನ್ನು ಬೇಕಾಬಿಟ್ಟಿ ಗೀಚುವುದಲ್ಲ. ರಷ್ಯಾದ ಚಿಂತಕರೊಬ್ಬರು ಹೇಳುತ್ತಾರೆ. ಸಾಹಿತಿಯಾದವನು ತನ್ನ ಸಮುದಾಯದ ಕಣ್ಣಾಗಿ, ಕಿವಿಯಾಗಿ, ಹೃದಯವಾಗಿ ಚಿಂತಿಸಿ ಬರೆಯಬೇಕು ಎಂದರುಇದೇ ವೇಳೆ ಬಂಡಾಯ ಸಾಹಿತಿ ಡಾ.ಕಾಳೇಗೌಡ ನಾಗವಾರ ಮಾತನಾಡಿದರು. ಈ ಸಂದರ್ಭದಲ್ಲಿ ಮಾಹಿತಿ ಹಕ್ಕು ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ, ತಹಸೀಲ್ದಾರ್ ಎಂ.ಸಿದ್ದೇಶ್, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಸಿ.ರಾಮಚಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ಇಒ ಡಾ.ಪ್ರಮೋದ್, ಪೌರಾಯುಕ್ತ ಎ.ವಾಸಿಂ, ಸೀತಮ್ಮ ಎಚ್.ವಿ.ಶ್ರೀನಿವಾಸ್, ರೈತ ಮುಖಂಡ ಕೆ.ಸಿ.ಹೊರಕೇರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್, ಹನುಮಂತರೆಡ್ಡಿ, ಗೀತಾ ನಾಗಕುಮಾರ್, ಕೆಡಿಪಿ ಸದಸ್ಯ ತಿಮ್ಮಣ್ಣ, ಎಂಡಿ ಸಣ್ಣಪ್ಪ, ಜಿ.ಎಲ್.ಮೂರ್ತಿ, ಕಲ್ಲಟ್ಟಿ ಹರೀಶ್, ಜಿ.ಪ್ರೇಮ್‌ಕುಮಾರ್, ಶಶಿಕಲಾ ರವಿಶಂಕರ್, ಪೊಲೀಸ್ ಬೇಟೆ ಪ್ರಸನ್ನ, ಕಂದಿಕೆರೆ ಸುರೇಶ್ ಬಾಬು, ಎನ್.ಬಸವರಾಜ್, ಶ್ರೀನಿವಾಸ್ ಮಳಲಿ, ಸಕ್ಕರ ರಂಗಸ್ವಾಮಿ ಮುಂತಾದವರು ಹಾಜರಿದ್ದರು.
ಬೆಳಗ್ಗೆ ಧ್ವಜಾರೋಹಣದ ನಂತರ ಶ್ರೀ ತೇರುಮಲ್ಲೇಶ್ವರಸ್ವಾಮಿ ದೇಗುಲದಿಂದ ಸಮ್ಮೇಳನ ಅಧ್ಯಕ್ಷ ಎಂ.ಜಿ.ರಂಗಸ್ವಾಮಿಯವರನ್ನು ಬೆಳ್ಳಿ ರಥದಲ್ಲಿ ಕೂರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ತಾಲೂಕಿನ ಇತಿಹಾಸ ಮತ್ತು ಸಂಸ್ಕೃತಿ ಗೋಷ್ಠಿ, ಕವಿಗೋಷ್ಠಿ, ಸಮ್ಮೇಳನ ಅಧ್ಯಕ್ಷರ ಜೊತೆಗಿನ ಒಡನಾಟದ ಕಾರ್ಯಕ್ರಮ ನಡೆದವು. ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮಾಡಲಾಯಿತು.