ವಿಜ್ಞಾನ, ತಂತ್ರಜ್ಞಾನ ವ್ಯಕ್ತಿಗಳಿಂದ ಜಗತ್ತಿಗೆ ಹಾನಿ, ತೊಂದರೆ ಇಲ್ಲ: ನಿರ್ಮಲಾನಂದನಾಥ ಸ್ವಾಮೀಜಿ

KannadaprabhaNewsNetwork |  
Published : Feb 20, 2024, 01:49 AM IST
19ಕೆಎಂಎನ್ ಡಿ23 | Kannada Prabha

ಸಾರಾಂಶ

ಒಂದು ಗಾಳಿಪಟ ಸೂತ್ರದ ಸಹಾಯದಿಂದ ಎಷ್ಟು ಎತ್ತರಕ್ಕಾದರೂ ಹಾರಿ ಹೋಗುತ್ತದೆ. ಸೂತ್ರ ಹರಿದರೆ ಗಾಳಿಪಟ ಎಲ್ಲಿ ಹೋಗುತ್ತದೆಂಬುದೂ ಗೊತ್ತಾಗುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಸೂತ್ರ ಹರಿದ ಗಾಳಿಪಟವಾಗಬಾರದು. ವಿಜ್ಞಾನ ಮತ್ತು ತಂತ್ರಜ್ಞಾನವೂ ಸಹ ಜ್ಞಾನದ ನೆಲೆಯನ್ನು ಕಳೆದುಕೊಂಡರೆ ನಮ್ಮ ಬದುಕು ಮೂರಾಬಟ್ಟೆಯಾಗುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ವಿಜ್ಞಾನವನ್ನು ತಿಳಿದುಕೊಂಡ, ತಂತ್ರಜ್ಞಾನ ಹೊಂದಿರುವ ವ್ಯಕ್ತಿಗಳಿಂದ ಜಗತ್ತಿಗೆ ಯಾವುದೇ ಹಾನಿ, ತೊಂದರೆ ಆಗುವುದಿಲ್ಲ. ವಿಜ್ಞಾನಿ ಮತ್ತು ತಂತ್ರಜ್ಞಾನಿಗಳಿಗೆ ಜ್ಞಾನ ಬಹುಮುಖ್ಯವಾಗಿರುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ತಿಳಿಸಿದರು.

ತಾಲೂಕಿನ ಆದಿಚುಂಚನಗಿರಿಯಲ್ಲಿ ನಡೆದ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಮಾನವರಾಗದೆ ಮಾಧವ ನೆಡೆಗೆ ಹೋಗಲು ದೇವತೆಗಳಿಗೂ ಸಾಧ್ಯವಿಲ್ಲ. ಹಾಗಾಗಿ ಏನಾದರಾಗುವ ಮೊದಲು ಮಾನವರಾಗಬೇಕು ಎಂದರು.

ಜ್ಞಾನದ ಕಡೆಗೆ ಹೊರಟಿರುವ ನಮಗೆ ವಿಜ್ಞಾನದ ಮೇಳಗಳಿಂದ ಒಂದಷ್ಟು ಉಪಯೋಗವಾಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಜ್ಞಾನದ ಸಂಪರ್ಕ ಇಲ್ಲವೆಂದರೆ ದಾರಿತಪ್ಪಿಹೋಗುವ ಅವಕಾಶವಿರುತ್ತದೆ ಎಂದು ಎಚ್ಚರಿಸಿದರು.

ಒಂದು ಗಾಳಿಪಟ ಸೂತ್ರದ ಸಹಾಯದಿಂದ ಎಷ್ಟು ಎತ್ತರಕ್ಕಾದರೂ ಹಾರಿ ಹೋಗುತ್ತದೆ. ಸೂತ್ರ ಹರಿದರೆ ಗಾಳಿಪಟ ಎಲ್ಲಿ ಹೋಗುತ್ತದೆಂಬುದೂ ಗೊತ್ತಾಗುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಸೂತ್ರ ಹರಿದ ಗಾಳಿಪಟವಾಗಬಾರದು ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನವೂ ಸಹ ಜ್ಞಾನದ ನೆಲೆಯನ್ನು ಕಳೆದುಕೊಂಡರೆ ನಮ್ಮ ಬದುಕು ಮೂರಾಬಟ್ಟೆಯಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕಲಿತ ಮಕ್ಕಳಿಗೆ ಒಂದಷ್ಟು ಜ್ಞಾನದ ಸಂಪತ್ತು ನೀಡಬೇಕೆಂಬ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ ಎಂದರು.

ಇದೇ ವೇಳೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಅಧ್ಯಕ್ಷ ಪ್ರೊ.ಕೆ.ಜೆ.ವಿನೋಯ್, ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಸಿಇಒ ಡಾ.ಎನ್.ಎಸ್.ರಾಮೇಗೌಡ ಕಾರ್ಯಕ್ರಮ ಕುರಿತು ಮಾತನಾಡಿದರು.

ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಸೌಮ್ಯನಾಥಸ್ವಾಮೀಜಿ, ಸೋಮನಾಥಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎ.ಶೇಖರ್, ರಿಜಿಸ್ಟ್ರಾರ್ ಸಿ.ಕೆ.ಸುಬ್ಬರಾಯ, ಆದಿಚುಂಚನಗಿರಿ ಆಸ್ಪತ್ರೆ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು ಸೇರಿದಂತೆ ಸಹಸ್ರಾರು ಮಂದಿ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ
ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಪತ್ತೆ: ಟರ್ಫ್ ಕ್ಲಬ್‌ ಸುತ್ತ ಪ್ರಾಣಿ ಸಂಚಾರ ನಿರ್ಬಂಧ